ಕೋಲ್ಕತಾ: ಹಿರಿಯ ಬೆಂಗಾಲಿ ಮತ್ತು ಒಡಿಯಾ ಗಾಯಕಿ ನಿರ್ಮಲಾ ಮಿಶ್ರಾ ಅವರು ತೀವ್ರ ಹೃದಯಾಘಾತದಿಂದ ಭಾನುವಾರ ಚೆಟ್ಲಾದ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
81 ವರ್ಷದ ನಿರ್ಮಲಾ ಮಿಶ್ರಾ ಅವರು ಹಲವಾರು ಬೆಂಗಾಲಿ ಮತ್ತು ಒಡಿಯಾ ಚಲನಚಿತ್ರಗಳ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಅವರು ಕೆಲವು ಸಮಯದಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
“ಅವರು ಮಧ್ಯರಾತ್ರಿ 12.05 ರ ಸುಮಾರಿಗೆ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು, ಕೂಡಲೇ ಹತ್ತಿರದ ನರ್ಸಿಂಗ್ ಹೋಮ್‌ಗೆ ಕರೆದೊಯ್ಯಲಾಗಿದೆ. ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಪಿಟಿಐಗೆ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ 1938 ರಲ್ಲಿ ಜನಿಸಿದ ನಿರ್ಮಲಾ ಮಿಶ್ರಾ ಅವರು ಸಂಗೀತ ಸುಧಾಕರ್ ಬಾಲಕೃಷ್ಣ ದಾಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ: ನಾಯಕಿಗಿಂತ ಉತ್ತಮ ನಟಿಯಾಗುವ ಹಂಬಲ: ಚಾರ್ಲಿಯ ಗೆಲುವು ಸಂಗೀತಾ ನಗು
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ, ಹಲವು ಗಣ್ಯರು ನಿರ್ಮಲಾ ಮಿಶ್ರಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.