Advertisement

“ಮೊದಲ ಗ್ಲಾಮರ್ ತಾರೆ”ಅಭಿನಯ ಶಾರದೆ ಜಯಂತಿ ಇನ್ನು ನೆನಪು ಮಾತ್ರ

12:48 PM Jul 26, 2021 | Team Udayavani |

ಕನ್ನಡ ಸಿನೆಮಾದ ಇತಿಹಾಸವನ್ನು ಯಾವ ತುದಿಯಿಂದ ಅವಲೋಕನ ಮಾಡುತ್ತ ಬಂದರೂ ಐದು ಸ್ತ್ರೀಯರ ಹೆಸರುಗಳು ತಟ್ಟನೆ ಕಣ್ಣ ಮುಂದೆ ಬರುತ್ತವೆ! ಮಿನುಗು ತಾರೆ ಕಲ್ಪನಾ, ಅಭಿನಯ ಚತುರೆ ಆರತಿ, ಅಭಿನಯದ ವಿರಾಟ್ ಶಕ್ತಿ ಲೀಲಾವತಿ, ಹುಡುಗಾಟದ ಹುಡುಗಿ ಮಂಜುಳಾ ಮತ್ತು ಅಭಿನಯ ಶಾರದೆ ಜಯಂತಿ.

Advertisement

ಅದರಲ್ಲಿ ಜಯಂತಿ ಕನ್ನಡದ ಮೊದಲ ಗ್ಲಾಮರ್ ತಾರೆ ಎಂದು ಕೀರ್ತಿ ಪಡೆದವರು. ಅಭಿನಯವೂ ಅಷ್ಟೇ ಸಲೀಸು. ಮೂಲತಃ ಬಳ್ಳಾರಿಯವರಾದ ಕಮಲ ಕುಮಾರಿ ಎಂಬ ಹೆಸರಿನ ಹುಡುಗಿ ಮುಂದೆ ಜಯಂತಿ ಎಂಬ ಹೆಸರು ಪಡೆದದ್ದು ಇತಿಹಾಸ. ಅವರ ತಂದೆ ಇಂಗ್ಲಿಷ್ ಭಾಷೆಯ ಪ್ರೊಫೆಸರ್ ಆಗಿದ್ದರು. ಮಗಳನ್ನು ಸ್ಟಾರ್ ಮಾಡಬೇಕು ಎಂದು ಅಮ್ಮನ ಆಸೆ. ಅದಕ್ಕೆ ಪೂರಕವಾಗಿ ಅಮ್ಮ ಮಗಳಿಗೆ ನೃತ್ಯವನ್ನು ಕಲಿಸಿದರು. ಒಮ್ಮೆ ಸಣ್ಣ ಹುಡುಗಿ ತೆಲುಗು ಸಿನೆಮಾ ಶೂಟಿಂಗ್ ನಡೆಯುವಾಗ ಅಮ್ಮನ ಜೊತೆ ನೋಡಲು ಹೋಗಿದ್ದ ಸಂದರ್ಭ ದಂತಕತೆ ನಟ ಎನ್. ಟಿ.ರಾಮರಾವ್ ಅವರ ಕಣ್ಣಿಗೆ ಬಿದ್ದರು. ಆಕೆಯ ನೃತ್ಯ ನೋಡಿ ಅವರು ಈ ಹುಡುಗಿಯನ್ನು ತನ್ನ ಕಾಲಿನ ಮೇಲೆ ಕೂರಿಸಿಕೊಂಡು ಏನಮ್ಮ, ನನ್ನ ಹೀರೋಯಿನ್ ಆಗ್ತೀಯ? ಎಂದು ಕೇಳಿದಾಗ ಒಂದಿಷ್ಟು ಸಂಕೋಚ ಮಾಡದೆ ಹುಡುಗಿ ಹೂಂ ಅಂದಳು. ರಾಮರಾಯರು ಗಲ್ಲದ ಮೇಲೆ ಮುತ್ತು ಕೊಟ್ಟು ಕಳಿಸಿದಾಗ ಅಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ.

ಆಕೆ ಕಮಲ ಕುಮಾರಿ ಆಗಿ ಮೊದಲು ಅಭಿನಯಿಸಿದ್ದು ತೆಲುಗು ಸಿನೆಮಾದಲ್ಲಿ. ನಂತರ ವೈ.ಆರ್.ಸ್ವಾಮಿ ಅವರ ಕನ್ನಡದ ಜೇನುಗೂಡು ಎಂಬ ಸಿನೆಮಾದಲ್ಲಿ ದೊಡ್ಡ ಅವಕಾಶ. ಜಯಂತಿ ಎಂಬ ಹೆಸರು ನೀಡಿದ್ದು ಕೂಡ ಅವರೇ. ಸಿನೆಮಾ ಸೂಪರ್ ಹಿಟ್ ಆಯಿತು. ಅಲ್ಲಿಂದ ಮುಂದೆ ಆಕೆ ಹಿಂದೆ ತಿರುಗಿ ನೋಡುವ ಅವಕಾಶ ದೊರೆಯಲಿಲ್ಲ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳ ಸಿನೆಮಾದಲ್ಲಿ ಅಭಿನಯಿಸಿದ್ದು ಸುಮಾರು 500ಕ್ಕಿಂತ ಹೆಚ್ಚಿನ ಸಿನೆಮಾಗಳಲ್ಲಿ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು ಆಕೆಗೆ ದೊರೆತವು.

ಅಭಿನಯ ಆಕೆಗೆ ನೀರು ಕುಡಿದಷ್ಟೇ ಸಲೀಸು. ಗ್ಲಾಮರಸ್ ಪಾತ್ರಕ್ಕೆ ಹೇಳಿ ಮಾಡಿಸಿದ ನಟಿ ಅವರು. ಕನ್ನಡದಲ್ಲಿ ಮೊದಲು ಬಿಕಿನಿ ಧರಿಸಿದ ನಟಿ ಜಯಂತಿ. ಡಾಕ್ಟರ್ ರಾಜಕುಮಾರ್ ಜೊತೆ ಮೂವತ್ತಕಿಂತ ಅಧಿಕ ಸಿನೆಮಾಗಳಲ್ಲಿ ನಾಯಕಿ ಆದರು. ಅದೇ ರೀತಿಯಲ್ಲಿ ವಿಷ್ಣುವರ್ಧನ್, ಅನಂತನಾಗ್,ಅಂಬರೀಷ್, ರಾಜೇಶ್, ಚಂದ್ರಶೇಖರ್,ಉದಯಕುಮಾರ್, ಶ್ರೀನಾಥ್, ಲೋಕೇಶ್,ಕಲ್ಯಾಣ ಕುಮಾರ್ ಮೊದಲಾದ ಎಲ್ಲಾ ನಟರ ಜೊತೆಗೆ ಅವರು ತೆರೆಯ ಮೇಲೆ ಭಾರೀ ಭರ್ಜರಿ ಆಗಿಯೇ ಕಾಣಿಸಿಕೊಂಡಿದ್ದಾರೆ.

Advertisement

ಎಡಕಲ್ಲು ಗುಡ್ಡದ ಮೇಲೆ ಸಿನೆಮಾದ ಕಾಮದ ತೀವ್ರತೆಯಿಂದ ದಾರಿ ತಪ್ಪುವ ಹೆಣ್ಣಿನ ಅಭಿನಯ, ಮಿಸ್ ಲೀಲಾವತಿ ಸಿನೆಮಾದ ಆಧುನಿಕ ಮಹಿಳೆ, ಕಲಾವತಿ, ತುಂಬಿದ ಕೊಡ, ಧರ್ಮ ದಾರಿ ತಪ್ಪಿತು, ಶ್ರೀ ಕೃಷ್ಣ ದೇವರಾಯ, ಬೆಟ್ಟದ ಹುಲಿ ಸಿನೆಮಾದ ಅವರ ಅಭಿನಯವನ್ನು ಮರೆಯಲು ಸಾಧ್ಯವೇ ಇಲ್ಲ. ತನ್ನ ಅಭಿನಯಕ್ಕಾಗಿ ಆರು ಬಾರಿ ರಾಜ್ಯ ಪ್ರಶಸ್ತಿ, ಮಿಸ್ ಲೀಲಾವತಿ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದವರು ಜಯಂತಿ. ಡಾ. ರಾಜಕುಮಾರ್ ಹೆಸರಿನ ಜೀವಮಾನ ಸಾಧನೆ ಪ್ರಶಸ್ತಿ ಕೂಡ ಅವರಿಗೆ ಒಲಿದು ಬಂದಿದೆ.

ಪುಟ್ಟಣ್ಣ ಕಣಗಾಲರ ನಾಗರ ಹಾವು ಸಿನೆಮಾದ ಒಂದೇ ದೃಶ್ಯದಲ್ಲಿ ಓಬವ್ವನ ಪಾತ್ರದಲ್ಲಿ ಒನಕೆ ಹಿಡಿದು ಅವರು ನೀಡಿದ ಅಭಿನಯವನ್ನು ಯಾವ ಕನ್ನಡಿಗನು ಕೂಡ ಮರೆಯಲು ಸಾಧ್ಯವೇ ಇಲ್ಲ. ಅತೀ ಹೆಚ್ಚು ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದ ಕನ್ನಡದ ಸಿನೆಮಾ ನಟಿ ಅವರು.

ಯಾವುದೇ ಪಾತ್ರಕ್ಕೂ ಏನು ಬೇಕು ಅದೆಲ್ಲವನ್ನು ಅರ್ಪಣೆ ಮಾಡುವ ಶಕ್ತಿ ಅವರಿಗೆ ಇತ್ತು. ತನ್ನ ಸಹ ನಟರ ಜೊತೆ ಅವರ ಸಂಬಂಧ ಕೂಡ ಅದ್ಭುತವೇ ಆಗಿತ್ತು. 1960ರ ದಶಕದಿಂದ 1980ರ ದಶಕದವರೆಗೂ ತನ್ನ ಗ್ಲಾಮರ್ ಮತ್ತು ಸೆನ್ಸೇಷನಲ್ ಅಭಿನಯದ ಮೂಲಕ ಕನ್ನಡ ಸಿನೆಮಾ ಇಂಡಸ್ಟ್ರಿಯನ್ನು ವಸ್ತುಶಃ ಆಳಿದ ಜಯಂತಿ ತೀರಾ ಇತ್ತೀಚಿನ ವರ್ಷಗಳವರೆಗೂ ಪೋಷಕ ಪಾತ್ರದಲ್ಲಿ ಮಿಂಚಿದವರು. ಕನ್ನಡದ ಸಿನೆಮಾದ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತ ಹೆಜ್ಜೆಯ ಗುರುತು ಮೂಡಿಸಿದರು. ಅಭಿನಯ ಶಾರದೆ ಜಯಂತಿ ನಮ್ಮನ್ನು ಅಗಲಿದ್ದಾರೆ ಎಂದು ನಂಬಲು ಕಷ್ಟ ಆಗುತ್ತದೆ. ಅವರಿಗೆ 76 ವರ್ಷ ವಯಸ್ಸು ಆಗಿತ್ತು. ಅವರು ಬಿಟ್ಟು ಹೋದ ಶೂನ್ಯವನ್ನು ಯಾರೂ ತುಂಬುವುದು ಸುಲಭ ಅಲ್ಲ.

*ರಾಜೇಂದ್ರ ಭಟ್ ಕೆ. ಜೇಸಿಐ ರಾಷ್ಟ್ರ ಮಟ್ಟದ ತರಬೇತುದಾರರು

Advertisement

Udayavani is now on Telegram. Click here to join our channel and stay updated with the latest news.

Next