Advertisement

ಸೆರೆ ಅಂಗಡಿ ಸಂಗವ್ವ ಖ್ಯಾತಿಯ ಹಿರಿಯ ನಟಿ, ರಂಗಭೂಮಿ ಕಲಾವಿದೆ ಮಮತಾ ಗುಡೂರ ನಿಧನ

01:39 PM Aug 03, 2023 | Team Udayavani |

ಅಮೀನಗಡ (ಬಾಗಲಕೋಟೆ): ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ಹಿರಿಯ ಕಲಾವಿದೆ ಮಮತಾ ಗುಡೂರ (ಇಟಗಿ) (75) ಗುರುವಾರ ಮುಂಜಾನೆ ನಿಧನರಾಗಿದ್ದಾರೆ.

Advertisement

ಕೆಲವು ತಿಂಗಳಿನಿಂದ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಅವರು ಗುಡೂರ (ಎಸ್.ಸಿ) ಗ್ರಾಮದಲ್ಲಿರುವ ನಿವಾಸದಲ್ಲಿ  ಬೆಳಿಗ್ಗೆ 7 ಗಂಟೆಗೆ ನಿಧನ ಹೊಂದಿದರು.

ರಂಗಭೂಮಿಯಲ್ಲಿ ತಮ್ಮದೆಯಾದ ವಿಶೇಷ ಪಾತ್ರಗಳ ಮೂಲಕ ಜನಮನ ಗೆದ್ದ ಹಿರಿಯ ರಂಗಭೂಮಿ ಕಲಾವಿದೆ ಮಮತಾ ಗುಡೂರ ಅವರು ಕಲಾಕ್ಷೇತ್ರದಲ್ಲಿ 50 ವರ್ಷಕ್ಕೂ ಹೆಚ್ಚುಕಾಲ ಸೇವೆ ಸಲ್ಲಿಸಿದ್ದರು.

ಐದು ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದರು. ಗಣೇಶನ ಮದುವೆ, ಶಿವಶಂಕರ, ಮನೆಗೆ ಬಂದ ಮಹಾಲಕ್ಷ್ಮೀ, ಅವಳ ನೆರಳು ಸೇರಿದಂತೆ 25 ಸಿನಿಮಾಗಳಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಇವರು ಕನ್ನಡ ಚಿತ್ರರಂಗದ ಮೇರು ನಟರುಗಳಾದ ಅಂಬರೀಶ, ವಜ್ರಮುನಿ ಸೇರಿ ಅನೇಕರ ಜೊತೆ ತೆರೆ ಹಂಚಿಕೊಂಡಿದ್ದರು.

ಹಿರಿಯ ಕಲಾವಿದೆಯಾಗಿರುವ ಮಮತಾ ಗುಡೂರ ಅವರು, ಕಮತಗಿಯ ಬಿ.ಆರ್.ಅರಿಶಿನಗೋಡಿ, ಪಿ.ಬಿ.ಧುತ್ತರಗಿ ನಾಟಕ ಕಂಪನಿ, ಚಿಂದೋಡಿ ನಾಟಕ ಕಂಪನಿ, ಹುಚ್ಚೇಶ್ವರ ನಾಟಕ ಕಂಪನಿ ಸೇರಿದಂತೆ ಬೇರೆ ಬೇರೆ ನಾಟಕ ಕಂಪನಿಗಳಲ್ಲಿ ಅಭಿನಯಸಿ ಮನೆ ಮಾತಾಗಿದ್ದರು.

Advertisement

ಬನಶಂಕರಿಯ ಬಿ.ಎಸ್.ಆರ್ ನಾಟಕ ಕಂಪನಿಯ ಸೆರೆ ಅಂಗಡಿ ಸಂಗವ್ವ ನಾಟಕದಲ್ಲಿ ಮಮತಾ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಂಗವ್ವನ ಪಾತ್ರದಲ್ಲಿ ಉತ್ತಮವಾಗಿ ಡೈಲಾಗ್ ಹೊಡೆದು ಸೆರೆ ಅಂಗಡಿ ಸಂಗವ್ವ ಎಂದೇ ಅವರು ಗುರುತಿಸಿಕೊಂಡಿದ್ದರು. ಅವರ ಅದ್ಭುತ ಕಲಾಸೇವೆ ಗುರುತಿಸಿ 2017ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಗುರುವಾರ ಮಧ್ಯಾಹ್ನ 4 ಗಂಟೆಗೆ ಗುಡೂರ ಗ್ರಾಮದಲ್ಲಿ ಮುಸ್ಲಿಂ ಧರ್ಮದ ಪ್ರಕಾರ ಹಿರಿಯ ಕಲಾವಿದೆ ಮಮತಾ ಗುಡೂರ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next