ಮುಂಬಯಿ: ಭಾರತೀಯ ಚಲನಚಿತ್ರರಂಗದ ಮೇರು ನಟ, ಕಂಚಿನ ಕಂಠದ ಸಿನಿ ಕಲಾವಿದ, ಕನ್ನಡ ಚಿತ್ರರಂಗದಲ್ಲೂ ತನ್ನ ಛಾಪು ಮೂಡಿಸಿದ್ದ ಓಂ ಪುರಿ ಅವರು ಶುಕ್ರವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಮುಂಬಯಿಯ ಸ್ವಗೃಹದಲ್ಲಿ ಹೃದಯಾಘಾತದಿಂದ ಓಂಪುರಿ ಅವರು ನಿಧನ ಹೊಂದಿದ್ದಾರೆ. ಅಡುಗೆ ಮನೆ ಯಲ್ಲಿ ಕುಸಿದು ಬಿದ್ದ ಸ್ಥಿತಿ ಯಲ್ಲಿ ಅವರ ಶವ ಪತ್ತೆಯಾಗಿದೆ. ವಿಚ್ಛೇದಿತ ಪತ್ನಿ, ಪತ್ರಕರ್ತೆ ನಂದಿತಾ ಮತ್ತು ಪುತ್ರ ಇಶಾನ್ ಅವರನ್ನು ಓಂ ಪುರಿ ಅಗಲಿದ್ದಾರೆ. ಓಂಪುರಿ ಅವರು 1991ರಲ್ಲಿ ಸೀಮಾ ಕಪೂರ್ ಎಂಬವರನ್ನೂ ವಿವಾಹವಾಗಿ ವಿಚ್ಛೇದನ ಪಡೆದಿದ್ದರು.
ಹಿರಿಯ ನಟನ ಅಕಾಲಿಕ ನಿಧನಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಾಲಿವುಡ್‌ನ ಗಣ್ಯರು, ರಾಜಕೀಯ ರಂಗದ ಗಣ್ಯರ ಸಹಿತ ಅಪಾರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ಹಠಾತ್ ವಿಧಿವಶ: ತೀವ್ರ ಹೃದಯಾಘಾತದಿಂದ ಹಠಾತ್ತಾಗಿ ಸಾವನ್ನಪ್ಪಿದ ಓಂಪುರಿ ಅವರ ಶವದ ಮರ ಣೋತ್ತರ ಪರೀಕ್ಷೆಯನ್ನು ಕೂಪರ್ ಆಸ್ಪತ್ರೆಯಲ್ಲಿ ನಡೆಸ ಲಾಯಿತು. ಬಳಿಕ ಕುಟುಂಬದ ಸುಪರ್ದಿಗೆ ಒಪ್ಪಿಸ ಲಾಯಿತು. ಸಂಜೆ ಓಶಿವಾರಾದ ವಿದ್ಯುತ್ ಚಿತಾಗಾರ ದಲ್ಲಿ ಅಗಲಿದ ಮೇರು ನಟನ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ಭಾರೀ ಸಂಖ್ಯೆಯ ಚಿತ್ರರಂಗದ ಗಣ್ಯರು, ರಾಜಕೀಯ ಗಣ್ಯರು, ಅಭಿಮಾನಿಗಳು ನೆರೆದಿದ್ದರು.
“ನನಗೆ ಆಘಾತವಾಗಿದೆ. ಇದು ನಂಬಲಸಾಧ್ಯ. ಬೆಳಗ್ಗೆ 6ರಿಂದ 6.30ರ ಅವಧಿಯಲ್ಲಿ ಅವರು ಅಸು ನೀಗಿದ್ದಾರೆ. ಅಡುಗೆ ಮನೆಯಲ್ಲಿ ಕುಸಿದು ಬಿದ್ದಿರುವ ಅವಸ್ಥೆಯಲ್ಲಿ ಅವರ ಶವ ಪತ್ತೆಯಾಗಿದೆ. ನನಗೆ ಮಾತನಾಡಲೂ ಆಗುತ್ತಿಲ್ಲ’ ಎಂದು ಅವರ ಪತ್ನಿ ನಂದಿತಾ ದುಃಖ ಹಂಚಿಕೊಂಡರು.