ಮುಂಬಯಿ: ಭಾರತೀಯ ಸಿನೇಮಾರಂಗದ ಸೂಪರ್ ಸ್ಟಾರ್, ಬಾಲಿವುಡ್ ನ ‘ಬಿಗ್ ಬಿ’ ಅಮಿತಾಭ್ ಬಚ್ಚನ್ ಅವರನ್ನು ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ವಿಚಾರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಟ್ವಿಟ್ಟರ್ ಮೂಲಕ ಈ ವಿಷಯವನ್ನು ಖಚಿತಪಡಿಸಿದ್ದಾರೆ.
‘ಎರಡು ತಲೆಮಾರುಗಳನ್ನು ತನ್ನ ನಟನೆಯ ಮೂಲಕ ರಂಜಿಸಿದ ಮತ್ತು ಸ್ಪೂರ್ತಿ ತುಂಬಿದ ಮಹಾನ್ ನಟ ಅಮಿತಾಭ್ ಬಚ್ಚನ್ ಅವರನ್ನು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇದು ಭಾರತಕ್ಕೆ ಮಾತ್ರವಲ್ಲದೇ ವಿಶ್ವ ಸಮುದಾಯವೇ ಸಂತಸಪಡುವ ವಿಚಾರವಾಗಿದೆ. ಅಮಿತಾಭ್ ಅವರಿಗೆ ನನ್ನ ಹೃದಯಾಂತರಾಳದ ಅಭಿನಂದನೆಗಳು’ ಎಂದು ಪ್ರಕಾಶ್ ಜಾವ್ಡೇಕರ್ ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಹೆಸರಾಂತ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ದಾದಾ ಸಾಹೇಬ್ ಫಾಲ್ಕೆ ಅವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ಚಿತ್ರರಂಗದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ನೀಡಲಾಗುತ್ತಿದೆ. ಫಾಲ್ಕೆ ಅವರನ್ನು ಭಾರತೀಯ ಸಿನೇಮಾದ ಪಿತಾಮಹ ಎಂದೂ ಕರೆಯಲಾಗುತ್ತದೆ. ಈ ಪ್ರಶಸ್ತಿಯು ಸ್ವರ್ಣ ಕಮಲ ಮತ್ತು ಹತ್ತು ಲಕ್ಷ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ.
Related Articles
ಅಮಿತಾಭ್ ಬಚ್ಚನ್ ಅವರು 1984ರಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದರು. 2001 ಮತ್ತು 2015ರಲ್ಲಿ ಬಿಗ್ ಬಿ ಕ್ರಮವಾಗಿ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳಿಂದ ಪುರಸ್ಕೃತಗೊಂಡಿದ್ದರು.
ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್ ಕುಮಾರ್ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿರುವ ಏಕೈಕ ನಟರಾಗಿದ್ದಾರೆ.