ತಿಪಟೂರು: ಗರ್ಭಧರಿಸಿದ್ದ ಸೀಮೆಹಸುವಿನ ಹೊಟ್ಟೆಯಲ್ಲಿ ಕರು ತಿರುಗಿದ್ದ ಕಾರಣ ಕರು ಹಾಕಲು ಕಷ್ಟಪಡುತ್ತಿದ್ದ ಹಸುವೊಂದು ಸ್ವಾಭಾವಿಕವಾಗಿ ನಿಂತಿರುವಂತೆಯೇ ಸಿಸೇರಿಯನ್ ಮಾಡಿ ಹಸುವಿನ ಪ್ರಾಣ ಉಳಿಸಿದ ಪಶು ವೈದ್ಯಾಧಿಕಾರಿಗಳಿಗೆ
ಗ್ರಾಮಸ್ಥರು ಅಭೂತಪೂರ್ವ ಕೃತಜ್ಞತೆ ಸಲ್ಲಿಸಿದ್ದಾರೆ.
ತಾಲೂಕಿನ ಮೂಡಲಕೊಪ್ಪಲು ಗ್ರಾಮದ ರೈತ ಜಗದೀಶ್ ಅವರ ಸೀಮೆಹಸು ಕರು ಹಾಕುವಾಗ ಕರು ಊದಿಕೊಂಡು ಸತ್ತುಹೋಗಿ ಅಡ್ಡ ಸಿಲುಕಿತ್ತು. ಈ ವೇಳೆ ತಾಯಿ ಹಸು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿತ್ತು. ಈ ಘಟನೆ ತಿಳಿದ ಸ್ಥಳೀಯ ಹುಣಸೇಘಟ್ಟದ ಪಶು ಆಸ್ಪತ್ರೆ ವೈದ್ಯ ಡಾ. ಡಿ.ಎನ್.ಅಭಿಷೇಕ್ ಮತ್ತು ತಾಲೂಕಿನ ಗಡಿಭಾಗದ ಹಾಸನ ಜಿಲ್ಲೆಯ ಅಣತಿ ಪಶು ಚಿಕಿತ್ಸಾಲಯದ ಹಿರಿಯ ವೈದ್ಯ ಡಾ.ಎಸ್.ಪಿ. ಮಂಜುನಾಥ್ ಹಸುವಿನ ಆರೋಗ್ಯ ಪರಿಸ್ಥಿತಿ ತಿಳಿದುಕೊಂಡರು. ನಂತರ ಹಸು
ನಿಂತಿರುವಾಗಲೇ ಸಿಸೇರಿಯನ್ ನಡೆಸಿ ದೊಡ್ಡದಾಗಿ ಊದಿಕೊಂಡಿದ್ದ ಕರುವನ್ನು ಹೊರ ತೆಗೆದರು. ಈಗ ಹಸು ಲವಲವಿಕೆಯಿಂದ ಆರೋಗ್ಯದಿಂದಿದ್ದು ಗ್ರಾಮಸ್ಥರು ಸಮಯಕ್ಕೆ ಸರಿಯಾಗಿ ಸ್ಪಂದಿಸಿದ ಪಶು ವೈದ್ಯರಿಬ್ಬರಿಗೂ ಅಭಿನಂದನೆ ತಿಳಿಸಿದರು.
ಇದನ್ನೂ ಓದಿ:ಸವದತ್ತಿ ಬಳಿ KSRTC ಬಸ್ ಮತ್ತು ಕಾರು ನಡುವೆ ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು
ಪಶುವೈದ್ಯ ಡಾ.ಎಸ್.ಪಿ.ಮಂಜುನಾಥ್ ಮಾತನಾಡಿ, ಹಸುಗಳು ಮಲಗಿರುವ ಸ್ಥಿತಿಯಲ್ಲಿ ಸಿಸೇರಿಯನ್ ನಡೆಸುವುದು ಸಾಮಾನ್ಯ. ಆದರೆ, ಹಸು ನಿಂತಿರುವಂತೆಯೇ ನಾವು ನಮ್ಮ ಕೌಶಲ್ಯದಿಂದ ಹಾಗೂ ಸಮಯಪ್ರಜ್ಞೆಯಿಂದ ಸಿಸೇರಿಯನ್ ಮಾಡಿದ್ದೇವೆ. ಇದು ಅತಿ ವಿರಳ. ಆದರೂ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವುದು ನಮಗೆ ಖುಷಿ ತಂದಿದೆ ಎಂದರು.