Advertisement

ಸಂತಾನಹರಣ: ದಕ್ಷಿಣ ಕನ್ನಡ, ಉಡುಪಿ ಮುಂದೆ

06:10 AM Jun 30, 2018 | |

ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಾಗಿರುವುದರಿಂದ ಮಿತಿ ಹಾಗೂ ಅಂತರದ ಜನನಕ್ಕೆ ಅಲ್ಲಿನ ಜನರು ಇಚ್ಛಿಸುತ್ತಾರೆ. ಹೀಗಾಗಿ, ಎರಡೂ ಜಿಲ್ಲೆಗಳು ಕುಟುಂಬ ಯೋಜನೆ ಅನುಷ್ಠಾನದಲ್ಲಿ ಮುಂದಿವೆ.

Advertisement

ಉಡುಪಿಯಲ್ಲಿ 1.2 ಸಂತಾನೋತ್ಪತ್ತಿ ಪ್ರಮಾಣ ಇದ್ದರೆ, ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿ 1.5ರಷ್ಟಿದೆ. ಅದೇ ರೀತಿ ಚಿಕ್ಕಮಗಳೂರು, ಹಾಸನ,ಮಂಡ್ಯ ಜಿಲ್ಲೆಗಳಲ್ಲೂ ಕಡಿಮೆ ಸಂತಾನೋತ್ಪತ್ತಿಗೆ (ಮಿತಿಯ ಜನನಕ್ಕೆ) ಒಲವು ವ್ಯಕ್ತವಾಗಿರುವುದು ಎಂಬುದು 2016ನೇ ಸಾಲಿನ ರಾಷ್ಟ್ರೀಯ ಕುಟುಂಬ ಯೋಜನೆ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ನಗರದಲ್ಲಿ ಶುಕ್ರವಾರ ಗ್ಲೊಬಲ್‌ ಹೆಲ್ತ್‌ ಸ್ಟ್ರಾಟಜೀಸ್‌ (ಜಿಎಚ್‌ಎಸ್‌)ನಿಂದ ಕುಟುಂಬ ಯೋಜನೆಯ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಇಂಡಿಯಾ ಸ್ಪೆಂಡ್‌ ಸಂಪಾದಕ ಸಮರ್‌ ಹಲಾರ್ಕರ್‌, 2016ನೇ ಸಾಲಿನ ರಾಷ್ಟ್ರೀಯ ಕುಟುಂಬ ಯೋಜನೆ ಸಮೀಕ್ಷೆ ಪ್ರಕಾರ ಸಿಂಗಾಪುರ,ದಕ್ಷಿಣ ಕೊರಿಯ, ಇಟಲಿಯಲ್ಲಿದ್ದಂತೆ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲೂ ಸಂತಾನೋತ್ಪತಿ ಪ್ರಮಾಣ ಕಡಿಮೆಯಿದೆ. ಇದಕ್ಕೆ ಸಾಕ್ಷರತೆ ಪ್ರಮಾಣ ಹೆಚ್ಚಾಗಿರುವುದು ಹಾಗೂ ಸಂತಾನ ನಿಯಂತ್ರಣ ಬಗ್ಗೆ ಅರಿವು ಇರುವುದು
ಕಾರಣ ಎಂದು ಹೇಳಿದರು.

ಬೆಂಗಳೂರಿನಲ್ಲಿ 1.7 ಸಂತಾನೋತ್ಪತಿ ಪ್ರಮಾಣವಿದೆ. ಮೂಲ ಬೆಂಗಳೂರಿಗರಿಗೆ ಕುಟುಂಬ ಯೋಜನೆ ಬಗ್ಗೆ ಅರಿವಿದ್ದು ಜತೆಗೆ ಜೀವನ ನಿರ್ವಹಣೆ ಹಾಗೂ ವೆಚ್ಚಕ್ಕೆ ಆದ್ಯತೆ ನೀಡುವುದರಿಂದ ಕಡಿಮೆ ಸಂತಾನೋತ್ಪತಿ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಉತ್ತರ ಭಾರತದಿಂದ ಬೆಂಗಳೂರಿಗೆ ವಲಸೆ ಬರುವವರಿಗೆ ಕುಟುಂಬ ಯೋಜನೆ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲದ ಕಾರಣ ಬೆಂಗಳೂರಿನಲ್ಲಿ ಸಂತಾನೋತ್ಪತಿ ಪ್ರಮಾಣದ ಅನುಪಾತ ಹೆಚ್ಚಿದೆ ಎಂದು ವಿವರಿಸಿದರು.

ಬೆಂಗಳೂರಿನ ಸಂತಾನೋತ್ಪತ್ತಿ ಪ್ರಮಾಣ ಲುಥೆನಿಯ ಹಾಗೂ ನೆದರ್‌ಲ್ಯಾಂಡ್‌ ದೇಶಕ್ಕೆ ಸರಿಸಮವಾಗಿದೆ. ಪ್ರತಿ 10 ವರ್ಷಕ್ಕೊಮ್ಮೆ ರಾಷ್ಟ್ರೀಯ ಕುಟುಂಬ ಯೋಜನೆ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದರು.

Advertisement

ಐದು ವರ್ಷದಲ್ಲಿ ಗುರಿ: ಭಾರತದ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ಸೊಸೈಟಿಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಡಾ.ಹೇಮಾ ದಿವಾಕರ್‌ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ 2016-17ನೇ ಸಾಲಿನ ವಾರ್ಷಿಕ ಸಮೀಕ್ಷೆ ಪ್ರಕಾರ ಭಾರತದಲ್ಲಿ ಪ್ರತಿ 12 ನಿಮಿಷಗಳಿಗೊಮ್ಮೆ ಗರ್ಭಧಾರಣೆ ಅಥವಾ ಶಿಶುಜನನ ಸಂಬಂಧಿತ ಸಮಸ್ಯೆಗಳಿಂದ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ.

ಈ ಪ್ರಕರಣಗಳನ್ನು ಕುಟುಂಬ ಯೋಜನೆಯ ಮೂಲಕ ತಡೆಗಟ್ಟಬಹುದು. ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಾರ ಮುಂದಿನ 5 ವರ್ಷದಲ್ಲಿ ಕುಟುಂಬ ಯೋಜನೆ ಪೂರೈಸುವ ಅಗತ್ಯವಿದೆ. ಇದರಿಂದ ದೇಶದಲ್ಲಿ 35 ಸಾವಿರ ತಾಯಂದಿರು ಹಾಗೂ 12 ಲಕ್ಷ ಶಿಶು ಮರಣಗಳನ್ನು ತಪ್ಪಿಸಬಹು ದೆಂದು ಭಾರತದಲ್ಲಿ ಸಂತಾನೋತ್ಪತಿ ಬಾಣಂತಿಯರ, ನವಜಾತ ಶಿಶು, ಮಕ್ಕಳು ಮತ್ತು ಹರೆಯದ ಆರೋಗ್ಯ ಸಮೀಕ್ಷೆ ತಿಳಿಸಿದೆ ಎಂದು ಹೇಳಿದರು.

ಕುಟುಂಬ ಯೋಜನೆಯಲ್ಲಿ ಮಹಿಳೆಯರೇ ಮುಂದು ಭಾರತದಲ್ಲಿ ಪುರುಷರಿಗಿಂತ ಹೆಚ್ಚು ಸ್ತ್ರೀಯರು ಸಂತಾನಹರಣ ಶಸ್ತ್ರಉಚಿಕಿತ್ಸೆಗೆ ಒಳಪಡುತ್ತಾರೆ. 15 ರಿಂದ 49 ವರ್ಷದೊಳಗಿನ ವಿವಾಹಿತ ಮಹಿಳೆಯರಲ್ಲಿ ಶೇ.36ರಷ್ಟು ಸ್ತ್ರೀಯರು ಗರ್ಭನಿರೋಧಕ ವಿಧಾನಕ್ಕೆ ಆದ್ಯತೆ ನೀಡುತ್ತಾರೆ. ಆದರೆ 0.3ರಷ್ಟು ಪುರುಷರು ಮಾತ್ರವೇ ಸಂತಾನಹರಣ ಶಸ್ತ್ರಉಚಿಕಿತ್ಸೆಗೆ ಪ್ರಾಮುಖ್ಯತೆ ನೀಡುತ್ತಾರೆ. ಈ ಬಗ್ಗೆ ಪುರುಷರಿಗೆ ಹೆಚ್ಚಿನ ತಿಳಿವಳಿಕೆ ಮೂಡಿಸುವ ಅಗತ್ಯವಿದೆ ಎಂದು ಡಾ.ಹೇಮಾ ದಿವಾಕರ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next