ಅಫಜಲಪುರ: ಹಲವು ದಶಕಗಳಿಂದ ನಮ್ಮಲ್ಲಿ ವೇಷಗಾರರ ಪರಂಪರೆ ಇದೆ. ಅವರು ತಮ್ಮದೇ ಶೈಲಿಯಲ್ಲಿ ಹಾಡುಗಳನ್ನು ಕಟ್ಟಿಕೊಂಡು ಊರುರು ಅಲೆಯುತ್ತಾ ಜೀವನ ನಡೆಸುವ ಕಾಯಕ ಮಾಡುತ್ತಾರೆ. ಅವರಿಗೆ ಈಗನೆಲೆ ಬೇಕಾಗಿದೆ. ಅಲ್ಲದೆ ಅವರ ಕಲೆಗೆಬೆಲೆಯೂ ಸಿಗಬೇಕಾಗಿದೆ.
ಹೌದು, ತಾಲೂಕಿನಾದ್ಯಂತ 100ಕ್ಕೂ ಹೆಚ್ಚು ವೇಷಗಾರರ ಕುಟುಂಬಗಳು ವಾಸವಾಗಿವೆ. ಆದರೆ ಅವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಇಷ್ಟು ವರ್ಷ ಊರುರು ಅಲೆದು ಹಾಡು ಹೇಳಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಕೋವಿಡ್ ವಕ್ಕರಿಸಿದ ಬಳಿಕ ಎಲ್ಲವು ನಿಂತು ಹೋಗಿದೆ. ಹಾಡು ಇಲ್ಲ, ಹೊಟ್ಟೆಪಾಡು ಇಲ್ಲದಂತಾಗಿ ನಡು ನೀರಲ್ಲಿ ನಿಂತ ಪರಿಸ್ಥಿತಿ ಈಗ ವೇಷಗಾರರದ್ದಾಗಿದೆ. ವೇಷಗಾರರಿಗೆ ಬೇಕಿದೆ ಕಾಯಕಲ್ಪ: ವೇಷಗಾರರು ಹೆಚ್ಚೇನು ಓದಿಕೊಂಡವರಲ್ಲ. ಆದರೂತಮ್ಮದೇ ದಾಟಿಯಲ್ಲಿ ಸಾಹಿತ್ಯ ರಚಿಸಿ ರಾಗಬದ್ದವಾಗಿ ಹಾಡುತ್ತಾರೆ.ಜನರನ್ನು ರಂಜಿಸುತ್ತ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ವಿವಿಧ ವೇಷ ಭೂಷಣ ಧರಿಸಿಕೊಂಡು ಊರುರು ಅಲೆಯುತ್ತಾರೆ. ಇವರು ನಮ್ಮ ಸಂಸ್ಕೃತಿಯ ಅಂಗವಾಗಿದ್ದಾರೆ. ಎಲ್ಲೋ ಒಂದು ಕಡೆ ಗಟ್ಟಿ ನೆಲೆ ನಿಲ್ಲಬೇಕೆಂಬ ಇವರ ಬಯಕೆಗೆ ಭದ್ರ ಬುನಾದಿ ಬೇಕಾಗಿದೆ.
ಸೂರು-ನೀರಿಗಾಗಿ ಅಲೆದಾಟ: ಸದ್ಯ ತಾಲೂಕಿನ ಕರ್ಜಗಿ, ಅಫಜಲಪುರ, ಸ್ಟೆಷನ್ ಗಾಣಗಾಪುರ ಮತ್ತು ಚವಡಾಪುರ ಗ್ರಾಮಗಳಲ್ಲಿ ವೇಷಗಾರರಕುಟುಂಬಗಳಿವೆ. ಈ ಕುಟುಂಗಳಿಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಸಿಕ್ಕಿಲ್ಲ. ಎಲ್ಲರಿಗೂ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇವೆ. ಆದರೆ, ವಾಸಕ್ಕೆ ಯೋಗ್ಯವಾದ ಮನೆಗಳಿಲ್ಲ. ಮಳೆ ಬಂದರೆ ಚಾಪೆ ತಲೆ ಮೇಲೆ ಹಿಡಿದುಕೊಂಡು ಮಕ್ಕಳೊಂದಿಗೆ ಬೀದಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ವೇಷಗಾರರ ಕುಟುಂಬಗಳಿಗೆ ಇದೆ. ಇಂತಹ ಕುಟುಂಬಗಳಿಗೆ ಈಗ ನೀರು, ಸೂರಿನ ಭರವಸೆ ಬೇಕಾಗಿದೆ. ಇನ್ನಾದರೂ ನೊಂದ 100 ಕುಟುಂಬಗಳಿಗೆಅವರಿದ್ದಲ್ಲಿಯೇ ಸೂರು ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಗ್ರಾಪಂ, ತಾಪಂ, ಜಿಪಂ, ಶಾಸಕರು, ಅಧಿಕಾರಿಗಳು ಇವರ ಬೇಡಿಕೆ ಈಡೇರಿಸಲು ಪ್ರಯತ್ನಿಸಬೇಕಾಗಿದೆ.
ವೇಷಗಾರರು ಯಾವ ಪದವಿ ಶಿಕ್ಷಣ ಪಡೆಯದಿದ್ದರೂ ವ್ಯಾಕರಣ ಬದ್ದವಾಗಿ ಪೌರಾಣಿಕ ಕಥೆಗಳನ್ನು, ರಾಗಬದ್ದವಾಗಿ ಹಾಡುತ್ತಾ ಒಂದು ಬಗೆಯ ಸಾಹಿತ್ಯ ಪರಂಪರೆ ಉಳಿಸಿಕೊಂಡು ಬಂದಿದ್ದಾರೆ. ಇಂತಹ ವಿಶೇಷ ಪಂಗಡವನ್ನು ಸರ್ಕಾರ ಉಳಿಸುವ ಕೆಲಸ ಮಾಡಬೇಕು. ಅವರಿಗೆ ಬೇಕಾದ ಸೂಕ್ತ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು.
-ಡಾ| ಸಂಗಣ್ಣ ಎಂ. ಸಿಂಗೆ ಆನೂರ, ಅಫಜಲಪುರ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ
ಸರ್ಕಾರದಿಂದ ನಮಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ನಮಗೆ ಮೊದಲು ಜಾತಿ ಪ್ರಮಾಣ ಪತ್ರ ನೀಡುತ್ತಿದ್ದರೂ ಈಗ ಕೊಡುತ್ತಿಲ್ಲ. ಕೊವಿಡ್‌ಗಿಂತ ಮೊದಲು ಎಲ್ಲಿಯಾದರೂ ಹಾಡು ಹೇಳಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವು. ಆದರೆ ಈಗ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ಸರ್ಕಾರ, ಸಂಬಂಧಪಟ್ಟವರು ನಮ್ಮ ಕಷ್ಟಕ್ಕೆ ನೆರವಾಗಬೇಕು.
– ದತ್ತು ಕಟ್ಟಿಮನಿ, ವೇಷಗಾರರ ಸಮುದಾಯದ ತಾಲೂಕು ಅಧ್ಯಕ್ಷ
-ಮಲ್ಲಿಕಾರ್ಜುನ ಹಿರೇಮಠ