Advertisement

ವೆರಿ ವೆರಿ ಇಂಟ್ರಸ್ಟ್‌

06:00 AM Dec 24, 2018 | |

ನೀವು ಸಾಲ ಪಡೆಯಲು ಅರ್ಹರು. ನಿಮಗೆ ಎಷ್ಟು ಬೇಕೋ ಅಷ್ಟು ಸಾಲವನ್ನೂ ನಾವು ಕೊಡುತ್ತೇವೆ. ಇದು ನಮ್ಮ ಕಂಪೆನಿ ನಿಮಗೆ ನೀಡುವ ವಿಶೇಷ ಸೌಲಭ್ಯ ಅಂತೆಲ್ಲ ಕರೆ ಮಾಡಿದವರು ಹೇಳಿದ್ದೇ ಆದರೆ ನೀವು ಸ್ವಲ್ಪ ಹುಷಾರಾಗಿರಿ.  ಎಲ್ಲರೂ ಸಾಲ ಕೊಡುತ್ತಾರೆ ನಿಜ. ಆದರೆ ಅದಕ್ಕೆ  ಯಾವ ರೀತಿಯಲ್ಲಿ ಬಡ್ಡಿ  ನಿಗದಿ ಮಾಡುತ್ತಾರೆ ಅನ್ನೋದನ್ನು ಮೊದಲು ನೋಡಿ.

Advertisement

ಕಚೇರಿಗೆ ಹೊರಟು ನಿಂತಿರುತ್ತೀರಿ. ಆಗಲೇ ಮೊಬೈಲ್‌ಗೆ ರಿಂಗಣಿಸುತ್ತದೆ. ರಿಸೀವ್‌ ಮಾಡಿದರೆ  “ಸಾರ್‌, ನಿಮಗೆ ನಮ್ಮ ಕಂಪನಿ ಕೇವಲ ಶೇ.10 ಬಡ್ಡಿದರದಲ್ಲಿ ಸುಲಭವಾಗಿ ಸಾಲನೀಡಲಿದೆ. ಈ ಸೌಲಭ್ಯ ನಿಮ್ಮಂಥ ವಿಶೇಷ ಗ್ರಾಹಕರಿಗೆ ಮಾತ್ರ. ಯಾವುದೇ ದಾಖಲೆ ನೀಡುವ ಅಗತ್ಯವಿಲ್ಲ.  ನಿಮಗೆ ಎಂಥ ಸಾಲಬೇಕಾದರೂ ಕೊಡುತ್ತೇವೆ’ ಆ ಕಡೆಯಿಂದ ಹೆಣ್ಣು ದನಿಯೊಂದು ಪುಸಲಾಯಿಸುತ್ತದೆ.  ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯರು ಹೇಳಿದ್ದೂ ಹಾಲು-ಅನ್ನ ಅಂತ ಏನಾದರೂ ನೀವು ಕೈ ಹಾಕಿದರೋ… ಗೋವಿಂದ.

ಈ ರೀತಿಯಲ್ಲಿ ಯಾವುದೇ ದಾಖಲೆ ಪಡೆಯದೆ ಕೇಳಿದಷ್ಟು ಮೊತ್ತವನ್ನು ಸಾಲ ಕೊಡಲು ಸಾಧ್ಯವೇ?

ಸ್ವಲ್ಪ ಯೋಚಿಸಬೇಕು. ವ್ಯಾಪಾರಂ ದ್ರೋಹ ಚಿಂತನಂ ಅಂತಾರಲ್ಲ. ಹಾಗೇನೇ ಇದು. ಕೆಲ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFC ) ಹೀಗೆ ಆಮಿಷ ಒಡ್ಡಿ, ಸಾಲದ ಚಕ್ರವ್ಯೂಹದೊಳಕ್ಕೆ ಆಹ್ವಾನಿಸುತ್ತವೆ. ಬಣ್ಣದ ಮಾತುಗಳಿಂದಲೇ ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳುವುದು ಇಂಥ ಸಂಸ್ಥೆಯ ಟೆಕ್ನಿಕ್‌.  ಹೀಗಾಗಿ, ಎಲ್ಲೇ ಸಾಲ ಮಾಡುವ ಮೊದಲು ಕೆಲ ಸತ್ಯಗಳನ್ನು ತಿಳಿದುಕೊಳ್ಳಬೇಕು. 

NBFC ಯ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ ಮಾಡಿದ್ದ ಕರೆ, ಕೇವಲ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಹಣಕಾಸು ಉತ್ಪನ್ನಕ್ಕೆ ಹೆಚ್ಚಿನ ಪ್ರಚಾರ ಒದಗಿಸುವ ಉದ್ದೇಶದಿಂದ. ಈ ಕಹಿ ಸತ್ಯ ಅರಿವಿಗೆ ಬರುವುದು ಅವರಲ್ಲಿ ನೀವು ಸಾಲ ಪಡೆದನಂತರ.  ಸಾಲ ಕೊಡುವವರು ಸಾಮಾನ್ಯವಾಗಿ ಫ್ಲಾಟ್‌, ರೆಡ್ನೂಸಿಂಗ್‌ ಬಡ್ಡಿ ಅಂತೆಲ್ಲಾ ಹೇಳುತ್ತಿರುತ್ತಾರೆ. ಹಾಗಂದರೆ ಏನು, ಎಷ್ಟು ದುಡ್ಡು ಕಟ್ಟಬೇಕು ಅನ್ನೋದನ್ನು ಮೊದಲೇ ಖಚಿತ ಪಡಿಸಿಕೊಳ್ಳುವುದು ಎಲ್ಲ ರೀತಿಯಲ್ಲೂ ಕ್ಷೇಮ. 

Advertisement

ಫ್ಲಾಟ್‌ v/s ರೆಡ್ನೂಸ್‌ 
ಫ್ಲಾಟ್‌ ರೇಟ್‌ನಲ್ಲಿ ಸಾಲ ಪಡೆದಾಗ, ಒಟ್ಟು ಸಾಲದ ಮೊತ್ತಕ್ಕೆ, ಅಂದರೆ ಅಂತಿಮ ಮಾಸಿಕ ಕಂತಿನವರೆಗೂ ಒಂದೇ ಮೊತ್ತದ ಬಡ್ಡಿಯನ್ನು (ಇಎಮ್‌ಐ) ಪಾವತಿಸುತ್ತಾ ಹೋಗಬೇಕು. ಉದಾಹರಣೆಗೆ 5 ವರ್ಷಗಳ ಅವಧಿಗೆ ಶೇ.10ರ ಫ್ಲಾಟ್‌ ಬಡ್ಡಿ ದರದಲ್ಲಿ ರೂ.5,00,000ವನ್ನು  ಸಾಲ ಪಡೆದರೆ, ಪ್ರತಿ ತಿಂಗಳು ಸುಮಾರು ರೂ.12,500 ಗಳನ್ನು ಪಾವತಿಸಬೇಕು.  ಆದರೆ ಬ್ಯಾಂಕ್‌ಗಳು ನೀಡುವ ರೆಡ್ನೂಸಿಂಗ್‌ ಬ್ಯಾಲೆನ್ಸ್‌ ರೇಟ್‌ ಸಾಲ ಹೀಗಲ್ಲ.  ಇಎಂಐ ಪಾವತಿಸಿದಂತೆಲ್ಲಾ ಬಡ್ಡಿಯೂ ಕಡಿಮೆಯಾಗುತ್ತಾ ಸಾಗುತ್ತದೆ. ಬ್ಯಾಂಕಿನಲ್ಲಿ ನಾವು ಕಟ್ಟುವ ಸಾಲದ EMI ನಲ್ಲಿ ಕೇವಲ ಬಾಕಿ ಉಳಿದಿರುವ ಒಟ್ಟು ಸಾಲದ ಮೊತ್ತಕ್ಕಷ್ಟೇ ಬಡ್ಡಿಯನ್ನು ತೆರುತ್ತೇವೆ.

ಬ್ಯಾಂಕಿನಲ್ಲಿ 5 ವರ್ಷಗಳ ಅವಧಿಗೆ ಸುಮಾರು ಶೇ.16ರ ರೆಡ್ನೂಸಿಂಗ್‌ ಬ್ಯಾಲೆನ್ಸ್‌ ರೇಟ್‌ನಲ್ಲಿ ರೂ. 5,00,000 ಮೊತ್ತವನ್ನು ಸಾಲವನ್ನಾಗಿ ಪಡೆದಾಗ, ನಾವು ಪ್ರತಿ ತಿಂಗಳು ಉMಐ ಮೊತ್ತವಾಗಿ ರೂ.12,159 ಗಳನ್ನು ಪಾವತಿಸಬೇಕು. ಇದರಲ್ಲಿ ಮೊದಲ ತಿಂಗಳ EMI ನಲ್ಲಿ ಪಾವತಿಯಾಗುವ ಬಡ್ಡಿ ರೂ.6,667 ಆಗಿದ್ದರೆ, ಎರಡನೇ ತಿಂಗಳಿನ EMI ನಲ್ಲಿ ರೂ.6,593 ಗಳನ್ನು ಬಡ್ಡಿರೂಪದಲ್ಲಿ ಭರಿಸುತ್ತೇವೆ. ಈ ಪ್ರಕಾರದಲ್ಲಿ ನಾವು ಪಾವತಿಸುವ ಬಡ್ಡಿ ಕಡಿಮೆಯಾಗುತ್ತಾ ಸಾಗುತ್ತದೆ. ಹೀಗಾಗಿ, ಬಡ್ಡಿ ಕಡಿಮೆಯಾದಂತೆ ಉಳಿದ ಮೊತ್ತ ಅಸಲಿಗೆ ಜಮೆಯಾಗುತ್ತದೆ.

ರೇಟು ಹೀಗೆ
ಬ್ಯಾಂಕ್‌ ಹಾಗೂ ಬ್ಯಾಂಕೇತರ ಸಂಸ್ಥೆಗಳು ನೀಡುವ ಸಾಲಗಳಲ್ಲಿ ಪಾವತಿಸುವ ಬಡ್ಡಿಯನ್ನು ಹೋಲಿಕೆ ಮಾಡಿನೋಡಿದಾಗ ಅಚ್ಚರಿಗೊಳ್ಳಬೇಕಾಗುತ್ತದೆ.  ಹೇಗೆಂದರೆ NBFCಯ ಶೇ.10 ಫ್ಲಾಟ್‌ ರೇಟ್‌ನಲ್ಲಿ  ರೂ.5,00,000ಗಳನ್ನು 5 ವರ್ಷ ಅವಧಿಗೆ ಸಾಲ ಪಡೆದಾಗ ನಾವು ಪಾವತಿಸುವ ಒಟ್ಟು ಬಡ್ಡಿ ರೂ. 2,50,000 ಆದರೆ, ಬ್ಯಾಂಕಿನವರ ಶೇ.16ರ ರೆಡ್ನೂಸಿಂಗ್‌ ಬ್ಯಾಲೆನ್ಸ್‌ ರೇಟ್‌ನಲ್ಲಿನ ಸಾಲಕ್ಕೆ ನಾವು ರೂ.2,29,542 ಗಳನ್ನು ಬಡ್ಡಿರೂಪದಲ್ಲಿ ಪಾವತಿಸುತ್ತೇವೆ.

ಹೀಗೇಕೆಂದು ಚಿಂತಿಸಿದಾಗ, ಫ್ಲಾಟ್‌ ರೇಟ್‌ನ ಸಾಲದಲ್ಲಿ ಅಂತಿಮ EMI ವರೆಗೂ ನಾವು ಪಡೆದಿದ್ದ ರೂ.5,00,000 ಒಟ್ಟು ಸಾಲಕ್ಕೆ ಸತತ 60 ತಿಂಗಳ ಕಾಲ ಭರಿಸಬೇಕು. ಆದರೆ ರೆಡ್ನೂಸಿಂಗ್‌ ಬ್ಯಾಲೆನ್ಸ್‌ ರೇಟ್‌ನಲ್ಲಿ EMI ಭರಿಸುತ್ತಾ ಸಾಗಿದಂತೆ ಬಾಕಿ ಇರುವ ಅಸಲಿನ ಮೊತ್ತಕ್ಕಷ್ಟೇ ಬಡ್ಡಿ ಕಟ್ಟುತ್ತೇವೆ. 

ಸಾಲಕ್ಕೂ ಮುನ್ನ…
-ಸತ್ಯ ಗೊತ್ತಿರಲಿ. ಹಳ್ಳ ಇರುವ ಕಡೆ ನೀರು ಹರಿಯುತ್ತದೆ ಅನ್ನೋದು 
ಗೊತ್ತಿದೆಯಲ್ಲಾ. ಅದೇ ರೀತಿ ಹಣ ಇರೋ ಕಡೆ ಸಾಲ ಹರಿಯೋದು. ಅಂದರೆ, ನಿಮಗೆ ಆಸ್ತಿ ಪಾಸ್ತಿ ಜೋರಾಗಿದ್ದು, ಆದಾಯದ ಹರಿವು ಚೆನ್ನಾಗಿದ್ದಾರೆ ಸಾಲ ಬಹುಬೇಗ ಸಿಗುತ್ತದೆ.
– ನಿಮಗೆ ಲಕ್ಷ ರೂ. ಸಾಲಬೇಕು ಅನ್ನೋದೇ ಆದರೆ 10ಲಕ್ಷದ ಆಸ್ತಿ, ಐದು ಲಕ್ಷದ ಆದಾಯ ಇದ್ದರೆ ನೋಡಿ ಬೇಗ ಸಾಲ ಸಿಗುತ್ತದೆ. 
-ಬ್ಯಾಂಕ್‌ಗಳು ಕಡಿಮೆ ಬಡ್ಡಿಗೆ ಸಾಲ ಕೊಡುತ್ತವೆ ಅಂದಾಗ ಸ್ವಲ್ಪ ಯೋಚಿಸಿ. ಆರ್‌ಬಿಐ, ಸಾಲದ ಬಡ್ಡಿಯನ್ನು ಪ್ರತಿ ಬ್ಯಾಂಕಿಗೆ ಏರಿಸುವ, ಇಳಿಸುವ ಸ್ವಾತಂತ್ರ್ಯ ನೀಡಿದೆ. ಆದರೆ ಕೇವಲ ಶೇ.ಅರ್ಧ, ಒಂದರಷ್ಟು ಮಾತ್ರ. ನಾಲ್ಕೈದು ಪರ್ಸೆಂಟ್‌ ಅಲ್ಲ. 
-ನೀವು ಸಾಲ ಪಡೆಯಲು ಹೋಗುವಾಗ ಬಡ್ಡಿ, ಸಾಲ ಕೊಡುವ ವಿಧಾನ, ಜಾಮೀನು, ಅದರಲ್ಲಿ ಆಸ್ತಿಯೋ, ವ್ಯಕ್ತಿಯೋ ಎಲ್ಲದರ ಬಗ್ಗೆ ತಿಳಿದಿರಬೇಕು. ಮುಖ್ಯವಾಗಿ ನಿಮ್ಮ ಉಳಿತಾಯ, ಪ್ರತಿ ತಿಂಗಳು ನೀವು ಮಾಡುವ ಮರುಪಾವತಿಯ ಸಾಮರ್ಥಯದ ಮೇಲೆ ಸಾಲದ ಮೊತ್ತ ನಿಗದಿಯಾಗಲಿ. ಅವಶ್ಯಕತೆ ಆಧಾರದ ಮೇಲೆ ಸಾಲದ ಮೊತ್ತ ನಿಗದಿಯಾಗುವುದು ಬೇಡ. 

– ಕಟ್ಟೆ ಗುರುರಾಜ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next