ನನಗೆ ಬೇಸಿಗೆ ರಜೆಯೆಂದರೆ ನೆನಪಾಗುವುದು ಅಜ್ಜಿ ಮನೆ. ವರ್ಷದಲ್ಲಿ ಕೇವಲ ಎರಡು ಬಾರಿಯಷ್ಟೇ ಅಜ್ಜಿಮನೆಗೆ ಹೋಗಲು ಸಿಗುವ ಅವಕಾಶವನ್ನು ನಾನೆಂದೂ ತಪ್ಪಿಸಿಲ್ಲ. ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ನನ್ನ ಅಜ್ಜಿ ಮನೆ ಕೇವಲ ಮನೆಯಲ್ಲ. ಅದು ಸಂತೋಷದ ಆಗರ; ಹಳ್ಳಿಮನೆಯ ಸೊಗಡಿಗೆ, ಮಲೆನಾಡಿನ ವೈಭವಕ್ಕೆ ಹಿಡಿದ ಕೈಗನ್ನಡಿ. ಅದರಲ್ಲೂ ಈ ಬೇಸಿಗೆಯ ಮಜವೇ ಬೇರೆ. ಯಥೇತ್ಛವಾಗಿ ಸಿಗುವ ಮಾವು, ಹಲಸು, ಸೀಬೆ, ಗೇರು, ಕಾಡಿನಲ್ಲಿ ಸಿಗುವ ಬಗೆ ಬಗೆಯ ತಾಜಾ ಹಣ್ಣುಗಳನ್ನ ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಬೆಳ್ಳಂಬೆಳಗ್ಗೆ ಎದ್ದು ಆಚೀಚೆ ಮನೆಯವರನ್ನೆಲ್ಲ ಒಗ್ಗೂಡಿಸಿ ಹದವಾಗಿ ಬೆಳೆದ ಒಂದಿಷ್ಟು ಹಲಸಿನ ಕಾಯಿಗಳನ್ನ ತಂದು ಹಪ್ಪಳ ಮಾಡಲು ಪ್ರಾರಂಭಿಸಿದರೆ, ಮುಗಿಯಲು ಮಧ್ಯಾಹ್ನವಾಗುತ್ತಿತ್ತು. ಮಳೆಗಾಲಕ್ಕಾಗಿ ಕನಿಷ್ಟ ನಾಲೂ°ರರಿಂದ ಐನೂರು ಹಪ್ಪಳಗಳನ್ನು, ಒಂದಿಷ್ಟು ಸಂಡಿಗೆಯನ್ನು ಮಾಡಿ ಅಟ್ಟದ ಮೇಲೆ ಭದ್ರವಾಗಿಡುವುದು ಹಳ್ಳಿಗರ ವಾಡಿಕೆ. ಕೇರಿಯ ಪ್ರತಿಯೊಂದು ಮನೆಯಲ್ಲೂ ಒಂದೊಂದು ದಿನ ಹಪ್ಪಳ ಮಾಡುವ ಚಡಂಗ. ಇದರೊಂದಿಗೆ ಅಲ್ಲಿನ ಪ್ರತೀ ಮನೆಯಲ್ಲೂ ಒಂದಿಷ್ಟು ಎಳೆ ಮಾವಿನಕಾಯಿಗಳನ್ನು ಉಪ್ಪುನೀರಿನಲ್ಲಿ ಇಡುತ್ತಾರೆ. ಪರಿಮಳದಲ್ಲೂ,ರುಚಿಯಲ್ಲೂ ವಿಭಿನ್ನವಾಗಿರುವ ಆ ಮಾವಿನಕಾಯಿಗಳಿಗೆ ಅಲ್ಲಿ ಅಪ್ಪೇಮಿಡಿಯೆಂದು ಹೆಸರು. ಮುಸ್ಸಂಜೆಯಾಗುತ್ತಿದ್ದಂತೆ ಹಳ್ಳಿಯ ಒಂದಿಷ್ಟು ಮಕ್ಕಳು ಒಂದಾಗಿ ಆಡುವ ಲಗೋರಿ, ಚಿನ್ನೀದಾಂಡು, ಕಬಡ್ಡಿ ಆಟಗಳು ಅಜ್ಜಿಯ ಊರಿನ ಪ್ರಮುಖ ಆಕರ್ಷಣೆ. ಚಿಕ್ಕವಳಿದ್ದಾಗ ಪೂರ್ತಿ ರಜೆಯನ್ನು ಅಲ್ಲಿಯೇ ಕಳೆಯುತ್ತಿದ್ದೆ, ಆದರೆ ಈಗ ಇಂಟರ್ನ್ಶಿಪ್, ಮನೆಯ ಜವಾಬ್ದಾರಿಗಳಿಂದ ಅದು ಕಷ್ಟಸಾಧ್ಯ. ಆದರೂ ಬೇಸಿಗೆ ರಜೆಯಲ್ಲಿ ಮಜಾ ಮಾಡಿ ಮತ್ತೆ ಕಾಲೇಜಿಗೆ ಹೋಗುವುದನ್ನು ನೆನಪಿಸಿಕೊಂಡರೆ ದುಃಖವಾಗುತ್ತದೆ. ನಾನಂತೂ ಕಾಲೇಜು ಆರಂಭ ವಾಗುವ ಮೊದಲೇ ಮುಂದಿನ ರಜೆಗೆ ಇನ್ನೆಷ್ಟು ದಿನಗಳಿವೆಯೆಂದು ಲೆಕ್ಕ ಹಾಕುತ್ತೇನೆ.
ಇಳಾ ಗೌರಿ, ಪ್ರಥಮ ಬಿ. ಎ, ಎಸ್‌ಡಿಎಂ ಪದವಿ ಕಾಲೇಜು, ಉಜಿರೆ