ಉಡುಪಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಭಾರತದಲ್ಲಿಯೂ ‘ಪಿಪಿ’ ಅಥವಾ ‘ಪಿ ನಲ್’ ಎಂಬ ಹೆಸರಿನ ಹೊಸ ರಕ್ತದ ಗುಂಪು ಪತ್ತೆಹಚ್ಚಿದ್ದಾರೆ. ಮಣಿಪಾಲ ಕೆಎಂಸಿಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರಿಗೆ ತುರ್ತಾಗಿ ರಕ್ತದ ಆವಶ್ಯಕತೆ ಇತ್ತು. ಆದರೆ ರಕ್ತವನ್ನು ಪರೀಕ್ಷಿಸಿದಾಗ ಯಾವುದೇ ಗುಂಪಿನ ರಕ್ತ ಹೊಂದಾಣಿಕೆಯಾಗಲಿಲ್ಲ. ಸಾಕಷ್ಟು ಪರೀಕ್ಷೆಗಳ ಅನಂತರ ಇದು ಅಪರೂಪದ ರಕ್ತದ ಗುಂಪು ಎಂದು ನಿರ್ಧರಿಸಿದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಬ್ಲಿಡ್ ಬ್ಯಾಂಕ್‌ನ ಡಾ| ಶಮೀ ಶಾಸ್ತ್ರಿ ಅವರ ನೇತೃತ್ವದ ತಂಡವು ರಕ್ತದ ಮಾದರಿಯನ್ನು ಇಂಗ್ಲೆಂಡ್‌ನ ಬ್ರಿಸ್ಟಲ್ ನಲ್ಲಿರುವ ಇಂಟರ್‌ನ್ಯಾಷನಲ್ ಬ್ಲಿಡ್ ಗ್ರೂಪ್ ರೆಫರೆನ್ಸ್ ಲ್ಯಾಬೊರೇಟರಿಗೆ (IBGRL) ಕಳುಹಿಸಿ ಅದು ‘ಪಿಪಿ’ ಅಥವಾ ‘ಪಿ ನಲ್’ ರಕ್ತದ ಗುಂಪು ಎಂಬುದನ್ನು ಖಚಿತಪಡಿಸಿಕೊಂಡಿತು. ಎ, ಬಿ, ಒ ಮತ್ತು ಆರ್‌ಎಚ್ ಡಿ ಎಂಬ ರಕ್ತದ ಗುಂಪುಗಳು ಸಾಮಾನ್ಯ. ಆದರೆ ಪಿಪಿ ಗುಂಪು ಮೊದಲ ಬಾರಿಗೆ ಭಾರತದಲ್ಲಿ ಪತ್ತೆಯಾಗಿದೆ ಎಂದು ಡಾ| ಶಮೀ ಶಾಸ್ತ್ರಿ ಅವರು ತಿಳಿಸಿದ್ದಾರೆ.
ಈ ರೀತಿಯ ಅಪರೂಪದ ರಕ್ತದಾನಿಗಳ ನೋಂದಣಿಯಿಂದ ಇಂತಹ ರಕ್ತದ ಗುಂಪು ಹೊಂದಿರುವವರಿಗೆ ಅನುಕೂಲವಾಗಲಿದೆ. ಇಂತಹ ನೋಂದಣಿ ಆರಂಭಿಸಲು ಕೆಎಂಸಿ ಚಿಂತಿಸಿದೆ. ವೈದ್ಯರ ತಂಡ ಅಪರೂಪದ ಸಾಧನೆ ಮಾಡಿದೆ ಎಂದು ಸಹ ಕುಲಪತಿ ಡಾ| ಪೂರ್ಣಿಮಾ ಬಾಳಿಗಾ ತಿಳಿಸಿದ್ದಾರೆ.
ರಕ್ತರಹಿತ ಶಸ್ತ್ರಚಿಕಿತ್ಸೆ
ಚಿಕಿತ್ಸೆಗೆ ಬಂದಿದ್ದ ವ್ಯಕ್ತಿಗೆ ಯಾವುದೇ ರಕ್ತ ಹೊಂದಾಣಿಕೆಯಾಗದ ಕಾರಣದಿಂದ ಆರ್ಥೋಪೆಡಿಕ್ಸ್ ವಿಭಾಗದ ಪ್ರೊ| ಡಾ| ಕಿರಣ್ ಆಚಾರ್ಯ ಅವರು ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಿ ಅನಂತರ ರಕ್ತರಹಿತ ಶಸ್ತ್ರಚಿಕಿತ್ಸೆ (ಬ್ಲಿಡ್‌ಲೆಸ್ ಸರ್ಜರಿ-ಫೀಮರ್ ಫ್ರ್ಯಾಕ್ಚರ್ ರಿಪೇರ್) ನಡೆಸಿ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ. ರೋಗಿ ಗುಣಮುಖರಾಗಿದ್ದಾರೆ ಎಂದು ಡಾ| ಶಮೀ ಶಾಸ್ತ್ರಿ ತಿಳಿಸಿದ್ದಾರೆ.