‘ ಹಾಸನದಲ್ಲಿ “ಬ್ರಹ್ಮಣ್ಣ ಹೋಟೆಲ್ ವಿಶೇಷವಾಗಿ ಗಮನ ಸೆಳೆಯುತ್ತದೆ. ಕಡಿಮೆ ದರದಲ್ಲಿ ಊಟ, ಉಪಹಾರ ನೀಡುತ್ತಿರುವ ಬ್ರಹ್ಮಣ್ಣ ಹೋಟೆಲ್‌ನ ಶಾಖೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಪ್ರಾರಂಭದಲ್ಲಿ ಕೆ.ಆರ್.ಪುರಂನಲ್ಲಿ, ಅಬಕಾರಿ ಅಧೀಕ್ಷಕರ ಕಚೇರಿ ಪಕ್ಕದಲ್ಲಿ ಆರಂಭವಾದ ಬ್ರಹ್ಮಣ್ಣ ಹೋಟೆಲ್ ಕಡಿಮೆ ಬೆಲೆಯ ಕಾರಣದಿಂದಲೇ ಗ್ರಾಹಕರನ್ನು ಸೆಳೆದಿತ್ತು. 10 ರೂ.ಗೆ ಅನ್ನಸಾಂಬಾರ್, 25 ರೂ.ಗೆ ಊಟ, 5 ರೂ.ಗೆ ಕಾಫಿ, ಟೀ, 25 ರೂ.ಗೆ ಮಸಾಲೆ ದೋಸೆ ಹೀಗೆ ಬೇರೆ ಹೋಟೆಲ್‌ಗಳಿಗೆ ಹೋಲಿಸಿದರೆ ಶೇ.50 ರಷ್ಟು ಕಡಿಮೆ ದರದಲ್ಲಿ ಊಟ, ಉಪಹಾರ ನೀಡುತ್ತಿತ್ತು. ಈಗ, ಕೆ.ಆರ್.ಪುರಂನ ಸಂಪಿಗೆ ರಸ್ತೆಯ 5ನೇ ಕ್ರಾಸ್‌ಗೆ ಸ್ಥಳಾಂತರವಾಗಿರುವ ಬ್ರಹ್ಮಣ್ಣ ಹೋಟೆಲ್‌ಗೆ ಗ್ರಾಹಕರ ಕೊರತೆಯೇನೂ ಆಗಿಲ್ಲ. ಬೆಳಗಿನ ಉಪಹಾರಕ್ಕೆ 30 ರೂ.ಗೆ ಇಡ್ಲಿ ವಡೆ, 20 ರೂ.ಗೆ ಚೌಚೌ ಬಾತ್, ಬಿಸಿಬೇಳೆ ಬಾತ್, 20 ರೂ.ಗೆ ಖಾಲಿ ದೋಸೆ, 25 ರೂ.ಗೆ ಸೆಟ್ ದೋಸೆ, 30 ರೂ.ಗೆ ಮಸಾಲೆ ದೋಸೆ, ಬೆಣ್ಣೆ ಖಾಲಿ, 40 ರೂ.ಗೆ ಈರುಳ್ಳಿ ದೋಸೆ, ಓಪನ್ ದೋಸೆ ಲಭ್ಯ. ಬೆಳಗಿನ ವೇಳೆ ಮಕ್ಕಳನ್ನು ಶಾಲೆಗೆ ಗಡಿಬಿಡಿಯಲ್ಲಿ ಕಳುಹಿಸುವ ಕೆಲವು ಪೋಷಕರು ಬ್ರಹ್ಮಣ್ಣ ಹೋಟೆಲ್‌ನಿಂದಲೇ ಬೆಳಗಿನ ಟಿಫನ್ ಪಾರ್ಸೆಲ್ ತರಿಸ್ತಾರೆ.
ಮಧ್ಯಾಹ್ನ ದ ವೇಳೆ ಊಟ, ಅನ್ನ ಸಾಂಬಾರ್‌ಗೆ ಗ್ರಾಹಕರಿಂದ ಭಾರೀ ಬೇಡಿಕೆ ಇದೆ. ಒಂದು ಚಪಾತಿ ಅಥವಾ ಒಂದು ಮುದ್ದೆ, ಒಂದು ಬಟ್ಟಲು ಅನ್ನ, ಸಾಂಬಾರು, ತಿಳಿಸಾರು, ಮಜ್ಜಿಗೆ, ಖೀರು, ಡ್ರೈಪಲ್ಯ, ಕೂಟು, ಕೋಸಂಬರಿ, ಹಪ್ಪಳ, ಉಪ್ಪಿನ ಕಾಯಿ ಒಳಗೊಂಡ ಊಟಕ್ಕೆ 30 ರೂ. ಮಾತ್ರ. 20 ರೂ.ಗೆ ಅನ್ನ ಸಾಂಬಾರ್ ಜೊತೆ ಒಂದು ಬಜ್ಜಿ, ಒಂದು ಉಪ್ಪಿನಕಾಯಿ, ಒಂದು ಹಪ್ಪಳ, 20 ರೂ.ಗೆ ಚಿತ್ರಾನ್ನ, ಮೊಸರನ್ನ ಇಲ್ಲಿನ ವಿಶೇಷ. ಸಂಜೆ ವೇಳೆ ಚಾಟ್ಸ್. 20 ರೂ.ಗೆ ಪಾನಿಪುರಿ, ಮಸಾಲೆಪುರಿ, ಧಹೀಪುರಿ, 30 ರೂ.ಗೆ ಆಲೂಪುರಿ ಸವಿಯಲು ಕುಟುಂಬ ಸಮೇತ ಗ್ರಾಹಕರು ಬರ್ತಾರೆ.
ಈಗ ಕೆ.ಆರ್.ಪುರಂ, ಅಜಾದ್ ರಸ್ತೆ ಕ್ರಾಸ್, ಹಳೆ ಮಟನ್ ಮಾರ್ಕೆಟ್ ಬಳಿಯೂ ಬ್ರಹ್ಮಣ್ಣ ಹೋಟೆಲ್ ಆರಂಭವಾಗಿದೆ. ಅರಸೀಕೆರೆ ರಸ್ತೆಯ ಇಎಸ್‌ಐ ಆಸ್ಪತ್ರೆ ಸನಿಹದಲ್ಲಿರುವ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿಯೂ ಕ್ಯಾಂಟೀನ್ ಆರಂಭಕ್ಕೆ ಬ್ರಹ್ಮಣ್ಣ ಹೋಟೆಲ್ ಮಾಲೀಕ ಅರುಣ್ ಸಜ್ಜಾಗಿದ್ದಾರೆ.
ಲಾಭಕ್ಕಿಂತ, ಗ್ರಾಹಕರ ತೃಪ್ತಿಯೇ ಮುಖ್ಯ
ಇಷ್ಟು ಕಡಿಮೆ ದರದಲ್ಲಿ ಊಟ, ಉಪಹಾರ ನೀಡಿದರೆ ನಷ್ಟವಾಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುವ ಅರುಣ್ , ” ನನಗೆ ಲಾಭಕ್ಕಿಂತ ಗ್ರಾಹಕರ ತೃಪ್ತಿ ಮುಖ್ಯ. ಸಿಕ್ಕಿದಷ್ಟು ಸಿಗಲಿ ಎಂಬ ಮನೋಭಾವ ನನ್ನದು. ಕಡಿಮೆ ದರವೆಂದು ಹೆಚ್ಚು ಗ್ರಾಹಕರು ಬಂದಾಗ ವ್ಯವಹಾರ ದುಪ್ಪಟ್ಟಾಗುತ್ತದೆ. ಅದರಲ್ಲಿ ಕನಿಷ್ಠ ಲಾಭ ಉಳಿಯಲಿ, ಇಲ್ಲವೇ ನಷ್ಟವಿಲ್ಲದೇ ನಡೆದುಕೊಂಡು ಹೋದರೂ ಸೈ. ನಮ್ಮ ತಂದೆ ಬ್ರಹ್ಮಣ್ಣ “ಬೇಕರಿ ಮತ್ತು ಸ್ವೀಟ್ಸ್ ‘ ನಡೆಸಿಕೊಂಡು ಬರುತ್ತಿದ್ದರು. ಈಗ ಅವರಿಲ್ಲದಿದ್ದರೂ ಅವರ ಹೆಸರಿನಲ್ಲಿ ಹೊಟ್ಟೆ ತುಂಬಾ ಊಟ ನೀಡಿದ ತೃಪ್ತಿಯಿದೆ ಎನ್ನುತ್ತಾರೆ.
ಬ್ರಹ್ಮಣ್ಣ ಹೋಟೆಲ್‌ನಲ್ಲಿ 35 ಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ನಮಗೆ ತಿಂಗಳಿಗೆ ಸರಿಯಾಗಿ ಸಂಬಳ ಆಗಲ್ಲ. ಆದರೂ ಬೇಸರಿಸಿಕೊಳ್ಳದೆ ಕೆಲಸ ಮಾಡ್ತೀವಿ. ಹೋಟೆಲ್‌ನಲ್ಲಿ ತಿಂದ ಕೆಲವರು ಬಿಲ್ ನೀಡದೆ ಹೋದ್ರೂ ನಮ್ಮ ಮಾಲೀಕರು ತಲೆ ಕೆಡಿಸಿಕೊಳ್ಳಲ್ಲ. ಬಿಲ್ ಕೊಡದೆ ಹೋಗುವ ಗ್ರಾಹಕರಿಗೂ ತೊಂದರೆ ಮಾಡದ ಮಾಲೀಕರು ನಮಗೆಂದೂ ಮೋಸ ಮಾಡಲ್ಲ. ಸಂಬಳ ಕೊಟ್ಟೇ ಕೊಡ್ತಾರೆ ಎಂಬ ನಂಬಿಕೆ ನಮ್ಮದು. ಒಂದೊಂದು ತಿಂಗಳು ನಷ್ಟವಾದಾಗ ಸಂಬಳ ಕೊಡಲು ತಡವಾಗಬಹುದು. ಆದರೆ ಸಂಬಂಳ ಬಂದೇ ಬರುತ್ತೆ ಎಂಬ ಖಾತ್ರಿಯಿದೆ ಎನ್ನುತ್ತಾರೆ ಹೋಟೆಲ್‌ನ ಕಾರ್ಮಿಕರು.
ಎನ್. ನಂಜುಂಡೇಗೌಡ