ಯಶವಂತ ಸರದೇಶಪಾಂಡೆಯವರು “ವೆರಿ ಗುಡ್’ ಎಂಬ ಮಕ್ಕಳ ಸಿನಿಮಾ ಮಾಡಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗಾಗಲೇ ಆ ಚಿತ್ರದ ಚಿತ್ರೀಕರಣ ಮುಗಿದು, ಚಿತ್ರ ಅನೇಕ ಚಿತ್ರೋತ್ಸವಗಳಲ್ಲೂ ಪ್ರದರ್ಶನ ಕಂಡಿದೆ. ಇತ್ತೀಚೆಗೆ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಮಂಡ್ಯ ರಮೇಶ್, ಹಿರಿಯ ದೊಡ್ಡಣ್ಣ ಹಾಗೂ ಚಿತ್ರತಂಡ ಜೊತೆಯಾಗಿ ಆಡಿಯೋ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. “ಈ ಸಿನಿಮಾ ನೋಡಿದಲ್ಲಿ ಒಳ್ಳೆಯ ಸಂದೇಶವಿದ್ದು, ಪ್ರತಿಯೊಬ್ಬರು ತಮ್ಮ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ವೃದಾಟಛಿಶ್ರಮ ಕಡಿಮೆಯಾಗಬಹುದೆಂಬ ವಿಶ್ವಾಸವಿದೆ’ ಎಂದು ಮಂಡ್ಯ ರಮೇಶ್ ಸಿನಿಮಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಈ ಚಿತ್ರದಲ್ಲಿ ಸುಮಾರು 124 ಮಕ್ಕಳು ನಟಿಸಿದ್ದು, ಅವರ ಪೋಷಕರು ಕೂಡಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ನಟಿಸಿದ ಮಕ್ಕಳೆಲ್ಲರೂ ನಟನೆಯಲ್ಲಿ ತರಬೇತಿ ಪಡೆದೇ ಕ್ಯಾಮರಾ ಮುಂದೆ ಬಂದಿದ್ದಾರೆ. ಬಾಲ ಎಕ್ಸ್‌ಪ್ರೆಸ್ ನಟನಾ ಶಾಲೆಯ ವಿದ್ಯಾರ್ಥಿಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸುಮಾರು 45 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರಕ್ಕಾಗಿ ಮಕ್ಕಳನ್ನು ಆಡಿಷನ್‌ನಲ್ಲಿ ಆಯ್ಕೆ ಮಾಡಿ, ಆ ನಂತರ ಅವರಿಗೆ ನಟನಾ ತರಬೇತಿ ನೀಡಿ ಸಿನಿಮಾ
ಮಾಡಿರುವುದರಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆಯಂತೆ.
ಮಕ್ಕಳಿಗೆ ಬೇಗನೇ ದೊಡ್ಡವರಾಗಬೇಕೆಂಬ ಆಸೆ. ದೊಡ್ಡವರಿಗೆ ಮತ್ತೂಮ್ಮೆ ಬಾಲ್ಯ ನೋಡಬೇಕೆಂಬ ಆಸೆ. ಈ ಎರಡು ಆಸೆಗಳ ನಡುವೆ ಇಡೀ ಸಿನಿಮಾ ಸಾಗುತ್ತದೆಯಂತೆ. ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಜೂಹಿ ಚಾವ್ಲಾ ನಟಿಸಿದ್ದು, ಅವರಿಲ್ಲಿ ಟೀಚರ್ ಆಗಿ ಕಾಣಿಸಿಕೊಂಡಿದ್ದಾರೆ. ನಟನೆ ಜೊತೆಗೆ ಚಿತ್ರದ ಒಂದು ಹಾಡನ್ನೂ ಹಾಡಿದ್ದಾರೆ. “ಕಲಿಸು ಗುರುವೇ ಕಲಿಸು’ ಹಾಡಿಗೆ ಜೂಹಿ ಚಾವ್ಲಾ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ.
ಶಿಬಿರ ನಡೆಸಿ ಮಕ್ಕಳನ್ನು ಆಯ್ಕೆ ಮಾಡಿರುವುದರಿಂದ ಒಳ್ಳೆಯ ಸಿನಿಮಾವಾಗಿದೆ. ಪ್ರತಿ ಮಕ್ಕಳು ಕೂಡಾ ಚೆನ್ನಾಗಿ ನಟಿಸಿದ್ದಾರೆ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು. ಅಂದಹಾಗೆ, ಈ ಚಿತ್ರವನ್ನು ಯಶವಂತ್ ಸರದೇಶಪಾಂಡೆ ಹಾಗೂ ಕಲ್ಯಾಣ್ ರಾಜ್ ನಿರ್ದೇಶನ ಮಾಡಿದ್ದು, ಗುರುಬಲ ಎಂಟರ್‌ಪ್ರೈಸಸ್ ಹಾಗೂ ಶ್ರೀ ಬಾಲಾಜಿ ಕ್ರಿಯೇಶನ್ಸ್ ಈ ಸಿನಿಮಾವನ್ನು ನಿರ್ಮಿಸಿದೆ.