Advertisement

ಮಣಿಪಾಲ ಕೆಎಂಸಿ ನಿವೃತ್ತ ಡೀನ್‌ ಡಾ|ಎ. ಕೃಷ್ಣ ರಾವ್‌ ನಿಧನ

01:24 AM Jul 27, 2020 | Hari Prasad |

ಉಡುಪಿ: ಮಣಿಪಾಲ ಕೆಎಂಸಿ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಮೊದಲ ಸಿಬಂದಿ, ಕೆಎಂಸಿ ನಿವೃತ್ತ ಡೀನ್‌ ಡಾ| ಎ. ಕೃಷ್ಣ ರಾವ್‌ (96) ಜು. 26ರಂದು ಮಣಿಪಾಲ ಸೋನಿಯಾ ಕ್ಲಿನಿಕ್‌ ಆವರಣದಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.

Advertisement

ಮೃತರು ಪುತ್ರಿಯರಾದ ಸೋನಿಯಾ ಕ್ಲಿನಿಕ್‌ನ ಡಾ| ಗಿರಿಜಾ, ಡಾ| ಗೌರಿ, ಡಾ| ಶುಭಗೀತಾ ಅವರನ್ನು ಅಗಲಿದ್ದಾರೆ.

1954ರಲ್ಲಿ ಮಣಿಪಾಲದ ನಿರ್ಮಾತೃ ಡಾ| ಟಿಎಂಎ ಪೈ ಅವರು ದೇಶದ ಮೊದಲ ಖಾಸಗಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಿದ ಸಂದರ್ಭ ಮಣಿಪಾಲಕ್ಕೆ ಬಂದ ಡಾ| ಕೃಷ್ಣ ರಾವ್‌ ಮತ್ತು ಪತ್ನಿ ಡಾ| ಪದ್ಮಾ ರಾವ್‌ ಅನಂತರ ಜೀವಿತದ ಕೊನೆಯವರೆಗೂ ಮಣಿಪಾಲದಲ್ಲಿ ನೆಲೆಸಿದ್ದರು. ಡಾ| ರಾವ್‌ ಮೂಲತಃ ಆಂಧ್ರಪ್ರದೇಶದವರು.

ಫಿಸಿಯಾಲಜಿ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಬೋಧನೆಯನ್ನು ಮಾಡಿ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದ್ದರು. ಅವರು ಜ್ಞಾನದೊಂದಿಗೆ ಸರಳತೆ, ವಿನಯಶೀಲತೆ, ಬದ್ಧತೆಯನ್ನು ಹೊಂದಿ ಜನಮನ್ನಣೆ ಪಡೆದಿದ್ದರು. ವೈದ್ಯಕೀಯ ಕ್ಷೇತ್ರದ ಶಿಕ್ಷಕರಿಗೆ ಹೊಸ ಬಗೆಯ ಬೋಧನೆಯನ್ನು ಅಳವಡಿಸಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ದಾಖಲಾರ್ಹ ಮಹತ್ವಪೂರ್ಣ ಸೇವೆ ಸಲ್ಲಿಸಿದ್ದರು.

ಕೆಎಂಸಿಯ ಡೀನ್‌ ಆಗಿ 22 ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿ ಬಳಿಕವೂ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ| ರಾವ್‌ ಅನೇಕ ವೈದ್ಯಕೀಯ ನಿಯತ ಕಾಲಿಕೆಗಳಲ್ಲಿ ಪ್ರಬಂಧಗಳನ್ನು ಪ್ರಕಟಿಸಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ ಹಿರಿಮೆ ಇವರಿಗೆ ಇದೆ. ಮಣಿಪಾಲ ಕೆಎಂಸಿ ಈಗ ಈ ಮಟ್ಟದಲ್ಲಿ ಶೈಕ್ಷಣಿಕ ಗುಣಮಟ್ಟದಲ್ಲಿ ಬೆಳೆಯಲು ಡಾ| ಕೃಷ್ಣ ರಾವ್‌ ಅವರು ಹಾಕಿದ ಅಡಿಪಾಯ ಕಾರಣವಾಗಿದೆ.

Advertisement

ಜೀವನದಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ ಡಾ| ರಾವ್‌ ಪ್ರಸಿದ್ಧರಾದುದು ಕೆಎಂಸಿ ಡೀನ್‌ ಎಂದು. ಮಣಿಪಾಲ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ಅಧ್ಯಕ್ಷರಾಗಿಯೂ ಅವರು ಅನೇಕ ವರ್ಷ ಮಾರ್ಗದರ್ಶನ ಮಾಡಿದ್ದರು.

ಡಾ| ಟಿಎಂಎ ಪೈಯವರು ಮಣಿಪಾಲದಲ್ಲಿ ರೋಟರಿ ಕ್ಲಬ್‌ ಆರಂಭಿಸಿದಾಗ ಡಾ| ರಾವ್‌ ರೋಟರಿ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು.

ಸಾರ್ವಜನಿಕರಿಗೆ ಸೋಮವಾರ ಬೆಳಗ್ಗೆ 8.30ರಿಂದ 9 ಗಂಟೆಯವರೆಗೆ ಮಣಿಪಾಲದ ಸೋನಿಯಾ ಕ್ಲಿನಿಕ್‌ನಲ್ಲಿ ಅಂತಿಮ ನಮನ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next