Advertisement
ಮುಂದೇನು ಮಾಡಬೇಕೆಂಬ ಗೊಂದಲ ವಿಜಯ್‌ದು. ಅನುಭವ ಇಲ್ಲದೆ ಯಾರೂ ಕೆಲಸ ಕೊಡ್ತಿಲ್ಲ. ಒಂದು ಕಡೆ ಬಡ್ಡಿ ಭದ್ರನ ಸಾಲ ತೀರಿಸಬೇಕು, ಇನ್ನೊಂದು ಕಡೆ ತಂಗಿ ಗಂಡನಿಗೆ ಸಹಾಯ ಮಾಡಬೇಕು. ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವ ವಿಜಯ್, ಅನುಭವವೇ ಇಲ್ಲದ ಕೆಲಸ ಅಂದರೆ, ಭಿಕ್ಷೆ ಬೇಡಬೇಕು, ಇಲ್ಲವೇ ಕಳ್ಳತನ ಮಾಡಬೇಕು ಎಂದು ಯೋಚಿಸುತ್ತಾನೆ. ಹಾಗಾದರೆ, ಆ ಹಣಕ್ಕಾಗಿ ವಿಜಯ್ ಏನು ಮಾಡ್ತಾನೆ? ಅದೇ “ಕಿಸ್ಮತ್’ ಸಸ್ಪೆನ್ಸ್.
Related Articles
Advertisement
ಇಲ್ಲಿ ವಿಜಯರಾಘವೇಂದ್ರ ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿರುವುದರಿಂದ ಎರಡೂ ಕಡೆ ಹೆಚ್ಚು ಗಮನಹರಿಸಲು ಸಾಧ್ಯವಾಗಿಲ್ಲ ಎಂಬುದು ಕೆಲವೆಡೆ ಸ್ಪಷ್ಟ. ಅವರೊಳಗೊಬ್ಬ ನಿರ್ದೇಶಕ ಇದ್ದಾನೆ ಎಂಬುದನ್ನು ಸಾಬೀತುಪಡಿಸಿದೆಯಾದರೂ, ಎಲ್ಲೋ ಒಂದು ಕಡೆ ಚಿತ್ರಕ್ಕೆ ವೇಗದ ಕೊರತೆ ಎದ್ದು ಕಾಣುತ್ತದೆ. ಹಾಗಂತ, ಚಿತ್ರವನ್ನು ಹೇಗೆ ಬೇಕೋ ಹಾಗೆ ಎಳೆದಾಡಿಲ್ಲ.
ಕಥೆಯ ಚೌಕಟ್ಟಿನಲ್ಲಿ ನಿಗಧಿತ ಅವಧಿಯಲ್ಲೇ ತರಹೇವಾರಿ ಘಟನೆಗಳನ್ನು ತೋರಿಸುವ ಮೂಲಕ ಸಣ್ಣಮಟ್ಟಿಗಿನ ತೃಪ್ತಿಪಡಿಸುವಲ್ಲಿ ಯಶಸ್ವಿ ಎನ್ನಬಹುದು. ಇಲ್ಲಿ ಕೆಲ ದೃಶ್ಯಗಳು ಬೇಕಿತ್ತಾ ಎಂಬ ಪ್ರಶ್ನೆ ಎದುರಾಗುತ್ತದೆ. ಪೊಲೀಸ್ ಠಾಣೆಯಲ್ಲಿ ಬರುವ ಕೆಲ ಸನ್ನಿವೇಶಗಳಾಗಲಿ, ಪೊಲೀಸ್ ಅಧಿಕಾರಿ ಪಾತ್ರವಾಗಲಿ, ಚೇಸಿಂಗ್ ಮಾಡುವಾಗ, ರೌಡಿಗಳು ಕಾರನ್ನು ಹಿಂಬಾಲಿಸುವ ದೃಶ್ಯಗಳಾಗಲಿ ತುಂಬಾ ಸಿಲ್ಲಿ ಎನಿಸಿಬಿಡುತ್ತವೆ.
ಇನ್ನು, ಸಾಯಿಕುಮಾರ್ ಇದ್ದರೂ, ಅವರನ್ನು ಸರಿಯಾಗಿ ಬಳಸಿಕೊಳ್ಳಲಾಗಿಲ್ಲ. ಎಲ್ಲೋ ಒಂದು ಕಡೆ ಚಿತ್ರ ಗಂಭೀರವಾಗಿ, ನೋಡಿಸಿಕೊಂಡು ಹೋಗುವ ಹೊತ್ತಿಗೆ, ಈ ದೃಶ್ಯಗಳು ಸ್ವಲ್ಪ ತಾಳ್ಮೆಗೆಡಿಸುತ್ತವೆ. ಇಲ್ಲಿ ಭರ್ಜರಿ ಫೈಟ್ಸ್ ಇಲ್ಲ, ಮರಸುತ್ತುವ ಹಾಡಿಲ್ಲ. ಪಂಚಿಂಗ್ ಡೈಲಾಗ್ಸ್ ಇಲ್ಲ. ಹಾಸ್ಯವಂತೂ ದೂರ. ಆದರೆ, ಸಿನಿಮಾದಲ್ಲಿ ಏನಿರಬೇಕು, ಏನಿರಬಾರದು ಎಂಬ ಸ್ಪಷ್ಟ ಕಲ್ಪನೆ ನಿರ್ದೇಶಕರಿಗಿರುವುದರಿಂದಲೇ ಅಪ್ಪಿತಪ್ಪಿ ತೂರಿದ ಕೆಲ ಅನಗತ್ಯ ದೃಶ್ಯ ಬಿಟ್ಟರೆ, ಉಳಿದೆಲ್ಲವನ್ನೂ ನೀಟ್ ಆಗಿ ತೆರೆ ಮೇಲೆ ಬಿಂಬಿಸಿರುವ ಪ್ರಯತ್ನ ಸಾರ್ಥಕ.
ಇಲ್ಲಿ ನವಿರಾದ ಪ್ರೀತಿಯ ಚಿಕ್ಕ ಎಳೆ ಇದೆ, ಎಂದಿನಂತೆ ಹುಡುಗಿ ಅಪ್ಪನ ವಿರೋಧವಿದೆ, ಗೆಳೆತನವಿದೆ, ಕಳ್ಳತನವಿದೆ, ಕೆಟ್ಟ ಪರಿಸ್ಥಿತಿಗಳ ವಾತಾವರಣವಿದೆ, ಟೈಂ ಕೈ ಕೊಟ್ಟರೆ, ಎಂಥೆಂಥಾ ಇಕ್ಕಟ್ಟಿನ ಸ್ಥಿತಿ ಎದುರಾಗುತ್ತೆ ಎಂಬ ವಾಸ್ತವ ಸತ್ಯವಿದೆ. ಇವೆಲ್ಲವನ್ನೂ ಸಾಹಸಮಯವಾಗಿ ಹಿಡಿದಿಟ್ಟಿರುವ ಚಿತ್ರದಲ್ಲಿ ಕೊನೆಗೆ ಏನೆಲ್ಲಾ ಆಗುತ್ತೆ ಎಂಬ ಕುತೂಹಲವಿದ್ದರೆ “ಅದೃಷ್ಟ’ ಪರೀಕ್ಷಿಸಿ ಬರಹುಬದು. ವಿಜಯರಾಘವೇಂದ್ರ ಅವರ ನಟನೆ ಬಗ್ಗೆ ಮಾತಾಡುವಂತಿಲ್ಲ.
ಅಸಹಾಯಕ ಹುಡುಗನ ಪಾತ್ರಕ್ಕೆ ಸೈ ಎನಿಸಿದ್ದಾರೆ. ಸಂಗೀತಾ ಭಟ್ ನಿರ್ದೇಶಕರು ಹೇಳಿದ್ದಷ್ಟು ಮಾಡಿದ್ದಾರೆ. ಸಾಯಿಕುಮಾರ್ ಕೂಡ ಸಿಕ್ಕ ಡೈಲಾಗ್ ಹೇಳಿ ಸುಮ್ಮನಾಗಿದ್ದಾರೆ. ಚಿಕ್ಕಣ್ಣ, ರಜನಿಕಾಂತ್ ಕಳ್ಳನ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಸುಂದರ್‌ರಾಜ್, ನಂದಗೋಪಾಲ್, ಧರ್ಮ ಇರುವಷ್ಟು ಕಾಲ ಗಮನಸೆಳೆಯುತ್ತಾರೆ. ರಾಜೇಶ್ ಮುರುಗೇಸನ್ ಸಂಗೀತದ “ಪ್ರೀತಿಯಲ್ಲಿ ಒಂದನೆ ತರಗತಿ’ ಹಾಡು ಬಿಟ್ಟರೆ ಉಳಿದ ಹಾಡು ಅಷ್ಟಕ್ಕಷ್ಟೆ. ರಾಜೇಶ್ ಯಾದವ್ ಛಾಯಾಗ್ರಹಣದಲ್ಲಿ ಚೇಸಿಂಗ್ ದೃಶ್ಯಗಳು ಖುಷಿಕೊಡುತ್ತವೆ.
ಚಿತ್ರ: ಕಿಸ್ಮತ್ನಿರ್ಮಾಣ – ನಿರ್ದೇಶನ: ವಿಜಯರಾಘವೇಂದ್ರ
ತಾರಾಗಣ: ವಿಜಯರಾಘವೇಂದ್ರ, ಸಂಗೀತಾ ಭಟ್, ಸಾಯಿಕುಮಾರ್, ನಂದಗೋಪಾಲ್, ನವೀನ್‌ಕೃಷ್ಣ, ಸುಂದರ್‌ರಾಜ್, ಚಿಕ್ಕಣ್ಣ ಇತರರು. * ವಿಜಯ್ ಭರಮಸಾಗರ