ಜೈಪುರ :ದೇಶದಲ್ಲಿ ಆತಂಕ ಸೃಷ್ಠಿಸುತ್ತಿರುವ ಮಹಾಮಾರಿ ಕೋವಿಡ್ ಸೋಂಕಿಗೆ ಕಡಿವಾಣ ಹಾಕಲು ರಾಜ್ಯದಲ್ಲಿ ಲಾಕ್ ಡೌನ್, ನೈಟ್ ಕರ್ಫ್ಯೂನಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯೆ ಹೊರತು ಜನಸಾಮಾನ್ಯರನ್ನು ಹಾಗೂ ಕಾರ್ಮಿಕರನ್ನು ಭಯಭೀತರನ್ನಾಗಿಸಲು ಅಲ್ಲ ಎಂದು ರಾಜಸ್ಥಾನ ಮುಖ್ಯ ಮಂತ್ರಿ ಅಶೋಕ ಗೆಹ್ಲೋಟ್ ಹೇಳಿದ್ದಾರೆ.
ಸೋಮವಾರ ನಡೆದ ತಜ್ಞರ ಜೊತೆಗಿನ ಸಭೆಯ ಬಳಿಕ ಮಾಧ್ಯಮಗಳ ಎದುರು ಮಾತನಾಡಿರುವ ಅವರು, ಸದ್ಯದ ಪರಿಸ್ಥಿತಿ ತುಂಬಾ ಆತಂಕಕಾರಿ ಹಾಗೂ ಅಪಾಯಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ಎಲ್ಲರೂ ನೂತನ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಿ ಎಂದು ರಾಜ್ಯದ ಜನರಲ್ಲಿ ಸೂಚಿಸಿದ್ದಾರೆ.
ಕೋವಿಡ್ ಪಾಸಿಟಿವ್ ಪ್ರಕರಣಗಳ ಹಾಗೂ ಸಾವುಗಳ ಸಮಖ್ಯೆ ಕಡಿಮೆ ಮಾಡಲು ರಾಜ್ಯಾದ್ಯಂತ ಕಳೆದ ರಾತ್ರಿಯಿಂದ ನೂತನ ಮಾರ್ಗಸೂಚಿಗಳನ್ನು ಜಾರಿಮಾಡಲಾಗಿದೆ ಎಂದಿದ್ದಾರೆ.
ಕಳೆದ ವರ್ಷ ದೇಶದಲ್ಲಿ ಘೋಷಿಸಿಲಾಗಿದ್ದ ಲಾಕ್ ಡೌನ್‍ನಿಂದ ಕಾರ್ಮಿಕರು ಭಯಗೊಂಡಿದ್ದರು. ಕಾರ್ಮಿಕರನ್ನು ದೃಷ್ಟಿಯಲ್ಲಿಕೊಂಡು ಸೋಮವಾರ ನೂತನ ನಿಯಮಾವಳಿಗಳನ್ನು ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾನುವಾರ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜಸ್ಥಾನದಲ್ಲಿ 10 ಸಾವಿರ ಕೋವಿಡ್ ನೂತನ ಪ್ರಕರಣಗಳು ಹಾಗೂ 42 ಸಾವುಗಳು ವರದಿಯಾಗಿವೆ. ಈ ಹಿನ್ನೆಲೆ ರಾಜ್ಯಾದ್ಯಂತ ವಾರಾಂತ್ಯದ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಹೇರಿ ಅಲ್ಲಿಯ ಸರ್ಕಾರ ಆದೇಶ ಹೊರಡಿಸಿದೆ.