Advertisement

ಮೆಕ್ಕೆಯಲ್ಲಿ ವರ್ಟಿಕಲ್‌ ಲಿಫ್ಟ್‌ ಚಾಲಿತ ಕಿಂಡಿ ಅಣೆಕಟ್ಟು

09:45 PM Oct 03, 2019 | Sriram |

ಮುದೂರು: ಜಡ್ಕಲ್‌ ಗ್ರಾಮದ ಮೆಕ್ಕೆ ಸಮೀಪದ ಛತ್ರಮಠದ ಶ್ರೀ ವನದುರ್ಗಾಪರಮೇಶ್ವರಿ, ಶ್ರೀ ಲಕ್ಷ್ಮೀ, ಗಣಪತಿ ದೇವಸ್ಥಾನದ ಸಮೀಪ ಸುಮಾರು 40 ಎಕರೆ ಕೃಷಿ ಪ್ರದೇಶಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಟ ನದಿಗೆ ಅಡ್ಡಲಾಗಿ ನಿರ್ಮಿಸಿರುವ ವರ್ಟಿಕಲ್‌ ಲಿಫ್ಟ್‌ ಅಳವಡಿಸಿದ ಕಿಂಡಿ ಅಣೆಕಟ್ಟು ಕಾಮಗಾರಿ ಮುಂದಿನ ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

Advertisement

ಸಣ್ಣ ನೀರಾವರಿ ಇಲಾಖೆಯಿಂದ ಪಶ್ಚಿಮ ವಾಹಿನಿ ಯೋಜನೆಯಡಿ ಮಂಜೂರಾದ ಕಿಂಡಿ ಅಣೆಕಟ್ಟು ಇದಾಗಿದ್ದು, ಒಟ್ಟು 2.18 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಕಳೆದ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಗೊಂಡಿದ್ದು, ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಕೃಷಿಗೆ ಅನುಕೂಲ
ಜಡ್ಕಲ್‌ ಗ್ರಾಮದ ಮೆಕ್ಕೆ, ಛತ್ರಮಠ ಸೇರಿದಂತೆ ಆಸುಪಾಸಿನ ಸುಮಾರು 40 ಎಕರೆಗೂ ಮಿಕ್ಕಿ ಕೃಷಿ ಭೂಮಿಯ, ನೂರಾರು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗುತ್ತಿದೆ.

ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ಗಳು ಹೇಳುವಂತೆ, ಕೇಟ ನದಿಗೆ ಈ 2.50 ಮೀಟರ್‌ ಎತ್ತರದ ಕಿಂಡಿ ಅಣೆಕಟ್ಟು ನಿರ್ಮಿಸಿರುವುದರಿಂದ ಛತ್ರಮಠ ದೇವಸ್ಥಾನದ ಸಮೀಪ ನೀರು ಸಂಗ್ರಹಿಸುವುದರಿಂದ ಇಲ್ಲಿನ ಸುತ್ತಮುತ್ತಲಿನ ಭಾಗದ ಅಂತರ್ಜಲ ಮಟ್ಟವು ಹೆಚ್ಚಾಗುತ್ತದೆ ಎನ್ನುತ್ತಾರೆ.

ಮಳೆಗೆ ಹಾನಿಯಾಗಿತ್ತು
ಕಳೆದ ಜುಲೈನಲ್ಲಿ ಭಾರೀ ಮಳೆಯಿಂದಾಗಿ ಈ ಕಿಂಡಿ ಅಣೆಕಟ್ಟಿನಲ್ಲಿ ನೀರು ನಿಂತು, ದೇವಸ್ಥಾನ ಅಂಗಳ, ಆವರಣಕ್ಕೆ ಹಾನಿಯಾಗಿತ್ತು. ಈ ಸಮಸ್ಯೆ ಭವಿಷ್ಯದಲ್ಲಿ ಕಾಣಿಸಿ ಕೊಳ್ಳದಂತೆ ಅಣೆಕಟ್ಟಿನ ಎತ್ತರವನ್ನು ಕೂಡ ಹೆಚ್ಚಿಸಲಾಗುತ್ತಿದ್ದು, ಸದ್ಯ ಈ ಕಾಮಗಾರಿ ನಡೆಯುತ್ತಿದೆ.

Advertisement

ಮೆಟ್ಟಿಲು ನಿರ್ಮಾಣಕ್ಕೆ ಆಗ್ರಹ
ಛತ್ರಮಠದ ಶ್ರೀ ವನ ದುರ್ಗಾಪರಮೇಶ್ವರಿ, ಶ್ರೀ ಲಕ್ಷ್ಮಿ, ಗಣಪತಿ ದೇವಸ್ಥಾನವು ಕೇಟ ನದಿಯ ತಟದಲ್ಲಿಯೇ ಇದೆ. ಈ ನದಿಗೆ ಬೆಳ್ಕಲ್‌ (ಗೋವಿಂದ ತೀರ್ಥ) ತೀರ್ಥದಿಂದ ಪವಿತ್ರ ನೀರು ಹರಿದು ಬರುತ್ತದೆ. ಈ ದೇವಸ್ಥಾನಕ್ಕೆ ತೀರ್ಥ ಮತ್ತಿತರ ದೇವತಾ ಕಾರ್ಯಕ್ಕೆ ಈ ನದಿಯ ನೀರನ್ನೇ ಬಳಸಲಾಗುತ್ತದೆ. ಆದರೆ ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯಿಂದಾಗಿ ಈಗ ಅರ್ಚಕರಾಗಿ ದೇವಸ್ಥಾನದಿಂದ ನದಿಗೆ ಇಳಿದು ನೀರು ತರುವುದು ಕಷ್ಟವಾಗುತ್ತಿದ್ದು, ಈ ಕಾರಣಕ್ಕೆ ಇದೇ ಕಾಮಗಾರಿಯಲ್ಲಿ ಮೆಟ್ಟಿಲು ನಿರ್ಮಿಸಿಕೊಡಲಿ ಎನ್ನುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ಆಗ್ರಹಿಸಿದೆ.

ವರ್ಟಿಕಲ್‌ ಲಿಫ್ಟ್‌ ಗೇಟು
ಹಿಂದೆಲ್ಲ ಕಿಂಡಿ ಅಣೆಕಟ್ಟುಗಳ ಗೇಟುಗಳಿಗೆ ಹಲಗೆ ಅಳವಡಿಸುವುದು ಸಾಮಾನ್ಯ. ಇದರಿಂದ ಮಳೆಗಾಲ ಆರಂಭವಾಗುವ ಮುನ್ನ ಈ ಹಲಗೆ ತೆಗೆಯುವುದು ತ್ರಾಸದಾಯಕವಾಗಿತ್ತು. ಮಾತ್ರವಲ್ಲದೆ ಈ ಹಲಗೆಗಳು ಒಂದೆರಡು ವರ್ಷಕ್ಕೆ ಮಾತ್ರ ಉಪಯೋಗವಾಗಿ, ಮತ್ತೆ ನಿಷ್ಪÅಯೋಜಕವಾಗುತ್ತದೆ. ಇದಕ್ಕೆ ಪರಿಹಾರವೆನ್ನುವಂತೆ, ಈ ವರ್ಟಿಕಲ್‌ ಲಿಫ್ಟ್‌ ವಿದ್ಯುತ್‌ ಚಾಲಿತವಾಗಿದ್ದು, ಒಬ್ಬರೇ ಈ ಕೆಲಸವನ್ನು ನಿರ್ವಹಿಸಬಹುದು.

ತಿಂಗಳೊಳಗೆ ಪೂರ್ಣ
ಈಗಾಗಲೇ ಕಾಮಗಾರಿ ನಡೆಯುತ್ತಿದೆ. ನೀರಿನ ಸಂಗ್ರಹ ಹೆಚ್ಚಾಗುತ್ತಿರುವುದರಿಂದ 2.50 ಮೀಟರ್‌ನಿಂದ ಅಣೆಕಟ್ಟಿನ ಎತ್ತರ ಮತ್ತೆ 1 ಮೀಟರ್‌ ಏರಿಸಲಾಗುತ್ತಿದೆ. ಇನ್ನು ಒಂದು ತಿಂಗಳೊಳಗೆ ಕಾಮಗಾರಿ ಮುಗಿಯಬಹುದು.
-ಶೇಷಕೃಷ್ಣ ರಾವ್‌,
ಕಾರ್ಯಪಾಲಕ ಇಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next