Advertisement

ಇಂಗ್ಲೆಂಡ್‌ ಟೆಸ್ಟ್‌ ಸರಣಿ ಬಳಿಕ ವೆರ್ನನ್‌ ಫಿಲಾಂಡರ್‌ ನಿವೃತ್ತಿ

12:06 AM Dec 24, 2019 | Team Udayavani |

ಜೊಹಾನ್ಸ್‌ಬರ್ಗ್‌: ಮುಂಬರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಬಳಿಕ ದಕ್ಷಿಣ ಆಫ್ರಿಕಾದ ಯಶಸ್ವಿ ವೇಗಿ ವೆರ್ನನ್‌ ಫಿಲಾಂಡರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ ಎಂದು “ಕ್ರಿಕೆಟ್‌ ಸೌತ್‌ ಆಫ್ರಿಕಾ’ ಸೋಮವಾರ ಪ್ರಕಟಿಸಿದೆ.

Advertisement

ಡೇಲ್‌ ಸ್ಟೇನ್‌, ಮಾರ್ನೆ ಮಾರ್ಕೆಲ್‌ ಅವರನ್ನು ಒಳಗೊಂಡ ಹರಿಣಗಳ ತ್ರಿವಳಿ ವೇಗಿಗಳಲ್ಲಿ ಫಿಲಾಂಡರ್‌ ಪ್ರಮುಖ ಪಾತ್ರ ವಹಿಸಿದ್ದರು. ಸ್ಟೇನ್‌, ಮಾರ್ಕೆಲ್‌ ಈಗಾಗಲೇ ಟೆಸ್ಟ್‌ ಕ್ರಿಕೆಟಿನಿಂದ ನಿವೃತ್ತಿಯಾಗಿದ್ದಾರೆ.

60 ಟೆಸ್ಟ್‌ಗಳ ಅನುಭವಿ
ಟೆಸ್ಟ್‌ ಕ್ರಿಕೆಟ್‌ ಮಾದರಿಯಲ್ಲಿ ಹೆಚ್ಚಾಗಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸುತ್ತಿದ್ದ 34ರ ಹರೆಯದ ಫಿಲಾಂಡರ್‌ 60 ಟೆಸ್ಟ್‌ ಆಡಿದ್ದಾರೆ. 13 ಬಾರಿ 5 ವಿಕೆಟ್‌ ಗೊಂಚಲನ್ನು ಪಡೆದಿರುವ ಅವರು 22.16 ಸರಾಸರಿಯಲ್ಲಿ 216 ವಿಕೆಟ್‌ ಉರುಳಿಸಿದ ಸಾಧನೆ ಮಾಡಿದ್ದಾರೆ. ಟೆಸ್ಟ್‌ಗೆ ಹೋಲಿಸಿದರೆ ಅವರು ಏಕದಿನ ಪಂದ್ಯವನ್ನಾಡಿದ್ದು ಕಡಿಮೆ. 30 ಏಕದಿನ ಮತ್ತು 7 ಟಿ20 ಪಂದ್ಯಗಳಲ್ಲಷ್ಟೇ ಕಾಣಿಸಿಕೊಂಡಿದ್ದಾರೆ.

“ನಮ್ಮ ಆಲ್‌ರೌಂಡರ್‌ ಫಿಲಾಂಡರ್‌ ತಮ್ಮ ಮಹೋನ್ನತ ಅಂತಾರಾಷ್ಟ್ರೀಯ ಕ್ರಿಕೆಟ್‌ ಬಾಳ್ವೆಯಿಂದ ನಿವೃತ್ತಿಯಾಗುವ ಸಮಯ ಬಂದಿದೆ. ಅವರು ಜನವರಿಯಲ್ಲಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಮುಗಿದ ಬಳಿಕ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ’ ಎಂದು ಕ್ರಿಕೆಟ್‌ ಸತ್‌ ಆಫ್ರಿಕಾ ಟ್ವೀಟ್‌ ಮಾಡಿದೆ.

ತಾಯಿ ನಂ.1 ಅಭಿಮಾನಿ
“12 ವರ್ಷಗಳಿಂದ ದೇಶವನ್ನು ಪ್ರತಿ ನಿಧಿಸುವ ಅವಕಾಶಕ್ಕಾಗಿ ಹರಸಿದ ನನ್ನ ಅಗಲಿದ ತಂದೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ತಂಡದ ಶ್ರೇಷ್ಠ ಆಟಗಾರ ರೊಂದಿಗೆ ಆಟವಾಡುವ ಸೌಭಾಗ್ಯ ಮತ್ತು ಗೌರವ ಸಿಕ್ಕಿರುವುದು ನನಗೆ ಅತೀವ ಖುಷಿ ನೀಡಿದೆ. ಕ್ರಿಕೆಟ್‌ ಬಾಳ್ವೆಯುದ್ದಕ್ಕೂ ನನ್ನಲ್ಲಿ ನಂಬಿಕೆಯಿಟ್ಟಿದ್ದ ಮತ್ತು ಬೆಂಬಲ ವ್ಯಕ್ತಪಡಿಸಿದ ಪತ್ನಿ, ಕುಟುಂಬ ಮತ್ತು ಸ್ನೇಹಿತರಿಗೆ ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ. ಮೊದಲ ದಿನದಿಂದ ನನ್ನ ಆಟದ ನಂ.1 ಅಭಿಮಾನಿ ತಾಯಿಗೆ ಪ್ರೀತಿಪೂರ್ವಕ ಕೃತಜ್ಞತೆ’ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next