Advertisement

ಪತ್ರೊಡೆ ವೈವಿಧ್ಯ

06:00 AM Jul 20, 2018 | |

ಮಳೆಗಾಲ ಆರಂಭವಾಗಿದೆ. ಕೆಸುವಿನ ಪತ್ರೊಡೆ ಮಾಡುವುದು ಈ ಸಮಯ ದಲ್ಲಿ. ಕೆಸುವಿನ ಪತ್ರೊಡೆಯಂತೆ ಪಾಲಕ್‌ ಸೊಪ್ಪು, ದಂಟುಸೊಪ್ಪು, ಬಸಳೆಸೊಪ್ಪು, ವಿಟಾಮಿನ್‌ ಸೊಪ್ಪು , ಕರಿಬೇವಿನ ಸೊಪ್ಪಿನ ಪತ್ರೊಡೆ, ಬಾಳೆಪೂಂಬೆ, ದಂಟು ಸೊಪ್ಪುಗಳಿಂದಲೂ ಪತ್ರೊಡೆ ಮಾಡಬಹುದು. ಕೆಸುವಿನ ಪತ್ರೊಡೆಯಷ್ಟು ರುಚಿ ಇರದಿದ್ದರೂ ನವೆ ಇರುವುದಿಲ್ಲ. ಆರೋಗ್ಯಕ್ಕೂ ಒಳ್ಳೆಯದು.

Advertisement

ತಗಟೆ ಸೊಪ್ಪಿನ ಪತ್ರೊಡೆ 
ಬೇಕಾಗುವ ಸಾಮಗ್ರಿ:
1 ಕಪ್‌ ಬೆಳ್ತಿಗೆ ಅಕ್ಕಿ , 1 ಕಪ್‌ ಕುಚ್ಚಲಕ್ಕಿ , 1/4 ಕಪ್‌ ತೆಂಗಿನತುರಿ, 1 ಚಮಚ ಹುಳಿರಸ, 1 ಚಮಚ ಬೆಲ್ಲ, 3-4 ಕೆಂಪು ಮೆಣಸು, 1/4 ಚಮಚ ಜೀರಿಗೆ, ಚಿಟಿಕೆ ಅರಸಿನ, ರುಚಿಗೆ ಬೇಕಾದಷ್ಟು ಉಪ್ಪು , 2 ಕಟ್ಟು ತಗಟೆ ಸೊಪ್ಪು.

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು 5-6 ಗಂಟೆ ನೆನೆಸಿ. ತೆಂಗಿನತುರಿ ಜೊತೆ ಹುಳಿ, ಜೀರಿಗೆ, ಉಪ್ಪು , ಬೆಲ್ಲ, ಕೆಂಪುಮೆಣಸು, ಅರಸಿನ ಸೇರಿಸಿ ನುಣ್ಣಗೆ ರುಬ್ಬಿ. ನಂತರ ತೊಳೆದ ಅಕ್ಕಿ,  ಸ್ವಲ್ಪ ನೀರು ಸೇರಿಸಿ ತರಿ ತರಿಯಾಗಿ ರುಬ್ಬಿ. ನಂತರ ತಗಟೆ ಸೊಪ್ಪು ತೊಳೆದು, ಸಣ್ಣಗೆ ಹೆಚ್ಚಿ ಹಿಟ್ಟಿಗೆ ಸೇರಿಸಿ ಸರಿಯಾಗಿ ಬೆರೆಸಿ. ನಂತರ ಬಾಡಿಸಿ ತೊಳೆದ ಬಾಳೆಲೆಯಲ್ಲಿ  ಎರಡು ಸೌಟು ಹಿಟ್ಟು ಹಾಕಿ ದಪ್ಪಕ್ಕೆ ಮಡಚಿ ಇಡ್ಲಿಪಾತ್ರೆಯಲ್ಲಿ ಹಾಕಿ ಒಂದು ಗಂಟೆ ಉಗಿಯಲ್ಲಿ ಬೇಯಿಸಿ. ಈಗ ಆರೋಗ್ಯಕರವಾದ  ತಗಟೆ ಪತ್ರೊಡೆ ಸವಿಯಲು ಸಿದ್ಧ.

ಗೆಣಸು ಸೊಪ್ಪಿನ ಪತ್ರೊಡೆ 
ಬೇಕಾಗುವ ಸಾಮಗ್ರಿ:
1 ಕಪ್‌ ಬೆಳ್ತಿಗೆ ಅಕ್ಕಿ , 1 ಕಪ್‌ ಕುಚ್ಚಲಕ್ಕಿ , 1 ಹಿಡಿ ಉದ್ದಿನಬೇಳೆ, 3-4 ಕೆಂಪುಮೆಣಸು, 1/2 ಚಮಚ ಹುಳಿರಸ, 1/2 ಚಮಚ ಬೆಲ್ಲ, 3-4 ಕೆಂಪುಮೆಣಸು, 1/2 ಚಮಚ ಕೊತ್ತಂಬರಿ, ಚಿಟಿಕೆ ಅರಸಿನ, ರುಚಿಗೆ ಬೇಕಾದಷ್ಟು ಉಪ್ಪು , 2 ಕಟ್ಟು ಗೆಣಸು ಸೊಪ್ಪು.

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು 5-6 ಗಂಟೆ ನೆನೆಸಿ. ನಂತರ ನೆನೆಸಿದ ಉದ್ದಿನಬೇಳೆಯನ್ನು ತೊಳೆದು ಕೆಂಪುಮೆಣಸು, ಹುಳಿರಸ, ಬೆಲ್ಲ, ಕೊತ್ತಂಬರಿ, ಅರಸಿನ ಸೇರಿಸಿ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ ತೊಳೆದ ಅಕ್ಕಿ, ಸ್ವಲ್ಪ ನೀರು ಸೇರಿಸಿ ತರಿ ತರಿಯಾಗಿ ರುಬ್ಬಿ. ನಂತರ ತೊಳೆದು ಸ್ವತ್ಛಗೊಳಿಸಿದ ಎಳೆ ಗೆಣಸು ಸೊಪ್ಪು ಸಣ್ಣಗೆ ಹೆಚ್ಚಿ ಹಿಟ್ಟಿಗೆ ಸೇರಿಸಿ ಸರಿಯಾಗಿ ಬೆರೆಸಿ. ನಂತರ ಬಾಡಿಸಿ ತೊಳೆದ ಬಾಳೆಲೆಯಲ್ಲಿ 2 ಸೌಟು ಹಿಟ್ಟು ಹಾಕಿ ದಪ್ಪಕ್ಕೆ ಮಡಚಿ ಇಡ್ಲಿ ಪಾತ್ರೆಯಲ್ಲಿ ಇಟ್ಟು ಒಂದು ಗಂಟೆ ಉಗಿಯಲ್ಲಿ ಬೇಯಿಸಿ. ಈಗ ರುಚಿಯಾದ ಗೆಣಸು ಸೊಪ್ಪಿನ ಪತ್ರೊಡೆ ತಿನ್ನಲು ಸಿದ್ಧ.

Advertisement

ವಿಟಾಮಿನ್‌ ಸೊಪ್ಪಿನ ಪತ್ರೊಡೆ 
ಬೇಕಾಗುವ ಸಾಮಗ್ರಿ:
ಒಂದೂವರೆ ಕಪ್‌ ಬೆಳ್ತಿಗೆ ಅಕ್ಕಿ, 1 ಚಮಚ ಕೊತ್ತಂಬರಿ, 2 ಚಮಚ ಜೀರಿಗೆ, 5-6 ಒಣಮೆಣಸು, ಸ್ವಲ್ಪ ಹುಳಿ, 1/4 ಕಪ್‌ ತೆಂಗಿನತುರಿ, ಸ್ವಲ್ಪ ಬೆಲ್ಲ , 4 ಹಿಡಿ ವಿಟಾಮಿನ್‌ ಸೊಪ್ಪು , ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಅಕ್ಕಿಯನ್ನು ನೀರಲ್ಲಿ ಒಂದು ಗಂಟೆ ನೆನೆಸಿ. ತೆಂಗಿನತುರಿ, ಒಣಮೆಣಸು, ಕೊತ್ತಂಬರಿ, ಜೀರಿಗೆ, ಉಪ್ಪು, ಹುಳಿ ಸೇರಿಸಿ ನುಣ್ಣಗೆ ರುಬ್ಬಿ. ನಂತರ ತೊಳೆದ ಅಕ್ಕಿ ಸೇರಿಸಿ ತರಿ ತರಿಯಾಗಿ ರುಬ್ಬಿ. ಬೆಲ್ಲ ಸೇರಿಸಿ. ನಂತರ ವಿಟಾಮಿನ್‌ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿ ಹಿಟ್ಟಿಗೆ ಸೇರಿಸಿ ಸರಿಯಾಗಿ ಬೆರೆಸಿ. ನಂತರ ಬಾಡಿಸಿದ ಬಾಳೆಲೆಯಲ್ಲಿ ಹಿಟ್ಟು ಹಾಕಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಿ. ಈಗ ಪೌಷ್ಟಿಕ ವಿಟಾಮಿನ್‌ ಸೊಪ್ಪಿನ ಪತ್ರೊಡೆ ತಿನ್ನಲು ಸಿದ್ಧ.

ಕರಿಬೇವು ಸೊಪ್ಪಿನ ಪತ್ರೊಡೆ 
ಬೇಕಾಗುವ ಸಾಮಗ್ರಿ:
1 ಕಪ್‌ ಬೆಳ್ತಿಗೆ ಅಕ್ಕಿ, 3-4 ಕಂತೆ ಎಳತಾದ ಕರಿಬೇವು ಸೊಪ್ಪು , 2 ಚಮಚ ಹೆಸರುಕಾಳು, ನೆಲ್ಲಕಾಯಿ ಗಾತ್ರದ ಹುಣಸೆ, ನೆಲ್ಲಿಕಾಯಿ ಗಾತ್ರದ ಬೆಲ್ಲ, 5-6 ಒಣಮೆಣಸು, 1 ಚಮಚ ಕೊತ್ತಂಬರಿ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಅಕ್ಕಿ, ಹೆಸರುಕಾಳನ್ನು 3-4 ಗಂಟೆ ನೆನೆಸಿ ಇಡಿ. ನಂತರ ತೊಳೆದು ಹುಳಿ, ಬೆಲ್ಲ, ಒಣಮೆಣಸು, ಕೊತ್ತಂಬರಿ, ಉಪ್ಪು ಎಲ್ಲಾ ಸೇರಿಸಿ ತರಿ ತರಿಯಾಗಿ ರುಬ್ಬಿ. ನಂತರ ತೊಳೆದ ಕರಿಬೇವು ಸೊಪ್ಪನ್ನು ಸಣ್ಣಗೆ ಹೆಚ್ಚಿ ಹಿಟ್ಟಿಗೆ ಸೇರಿಸಿ ಸರಿಯಾಗಿ ಕಲಸಿ. ನಂತರ ಬಾಡಿಸಿದ ಬಾಳೆಲೆಯಲ್ಲಿ ಹಿಟ್ಟು ಹಾಕಿ ಮಡಚಿ ಇಡ್ಲಿ ಪಾತ್ರೆಯಲ್ಲಿ 1/2 ಗಂಟೆ ಬೇಯಿಸಿ.

ಪತ್ರೊಡೆ ಸಿಹಿ ಉಸ್ಲಿ 
ಬೇಕಾಗುವ ಸಾಮಗ್ರಿ:
2 ಪತ್ರೊಡೆ, 1/4 ಕಪ್‌ ಬೆಲ್ಲ, 1/4 ಕಪ್‌ ತೆಂಗಿನತುರಿ, 4 ಚಮಚ ಎಣ್ಣೆ , 2 ಚಮಚ ಉದ್ದಿನಬೇಳೆ, 1 ಚಮಚ ಸಾಸಿವೆ, 1 ಕೆಂಪುಮೆಣಸು, 1 ಎಸಳು ಕರಿಬೇವು.

ತಯಾರಿಸುವ ವಿಧಾನ: ಪತ್ರೊಡೆಯನ್ನು ಪುಡಿ ಮಾಡಿ. ಬೆಲ್ಲ ಪುಡಿ ಮಾಡಿ ಕಾಯಿತುರಿಯೊಂದಿಗೆ ಬೆರೆಸಿ. ನಂತರ ಪುಡಿ ಮಾಡಿದ ಪತ್ರೊಡೆಯೊಂದಿಗೆ ಬೆರೆಸಿ. ನಂತರ ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ ಕರಿಬೇವು ಬೆರೆಸಿದ ಪತ್ರೊಡೆ ಹಾಕಿ ತೊಳಸಿ. ಬಿಸಿಯಾದಾಗ ಒಲೆಯಿಂದ ಕೆಳಗಿಳಿಸಿ. ಈ ರೀತಿ ಎಲ್ಲಾ ಪತ್ರೊಡೆಯಿಂದ ಸಿಹಿ ಉಸ್ಲಿ , ಖಾರ ಉಸ್ಲಿ ಮಾಡಿ ಸವಿಯಬಹುದು.

ಸರಸ್ವತಿ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next