ಬೆಳಗಾವಿ: ರಾಜ್ಯದಲ್ಲಿ ಭೀಕರ ಪ್ರವಾಹ ಮತ್ತು ಮಳೆಯಿಂದ ಉಂಟಾಗಿರುವ ಹಾನಿ ಬಗ್ಗೆ ರಾಜ್ಯ ಸರ್ಕಾರದ ಪರಿಹಾರ ಪ್ರಸ್ತಾವನೆ ಆಧರಿಸಿ ಮತ್ತೊಮ್ಮೆ ಕೇಂದ್ರ ತಂಡ ಪರಿಶೀಲನೆ ಕೈಗೊಳ್ಳಲಿದೆ ಎಂದು ಕೇಂದ್ರ ಸರ್ಕಾರದ ನೆರೆ ಹಾನಿ ಅಧ್ಯಯನ ತಂಡದ ನೇತೃತ್ವ ವಹಿಸಿರುವ ಕೇಂದ್ರ ಗೃಹ ವ್ಯವಹಾರಗಳ ಇಲಾಖೆಯ ಆಡಳಿತ ವಿಭಾಗದ ಜಂಟಿ ನಿರ್ದೇಶಕ ಪ್ರಕಾಶ್ ಹೇಳಿದರು.
ಚಿಕ್ಕೋಡಿ ಹಾಗೂ ಕಾಗವಾಡ ತಾಲೂಕಿನಲ್ಲಿ ನೆರೆ ಹಾವಳಿಯಿಂದ ತೀವ್ರ ತೊಂದರೆಗೆ ಒಳಗಾಗಿರುವ ಪ್ರದೇಶಗಳ ಪರಿಶೀಲನೆ ನಡೆಸಿ ಕಾಗವಾಡ ತಾಲೂಕಿನ ಶೇಡಬಾಳ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು. ಕೇಂದ್ರ ತಂಡದ ಏಳು ಅಧಿಕಾರಿಗಳು ಭಾನುವಾರ ಬೆಳಗಾವಿ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಲ್ಲಿ ಸಂಚರಿಸಿ, ಹಾನಿ ಪರಿಶೀಲಿಸಿದ್ದಾರೆ. ಸೋಮವಾರ ಬಾಗಲಕೋಟೆ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿ, ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಲಿದ್ದಾರೆ.
ರಾಜ್ಯದ ಆರು ಜಿಲ್ಲೆಗಳಲ್ಲಿ ನೆರೆ ಹಾವಳಿ ಪರಿಸ್ಥಿತಿ ಬಹಳ ಭೀಕರವಾಗಿದೆ ಎಂದರು. ಈಗಿನ ಸ್ಥಿತಿ ನೋಡಿದರೆ ಪ್ರವಾಹ ಪೀಡಿತ ಜಿಲ್ಲೆಗಳು ತುರ್ತಾಗಿ ಸಹಜ ಸ್ಥಿತಿಗೆ ಬರುವುದು ಕಷ್ಟ. ಸಂತ್ರಸ್ತರು ಮತ್ತು ರೈತರಿಗೆ ಪರಿಹಾರ ಒದಗಿಸಲು ಸಮಯಾವಕಾಶ ಬೇಕು. ಆದರೂ, ಆದ್ಯತೆ ಮೇರೆಗೆ ತ್ವರಿತ ಪರಿಹಾರ ವಿತರಿ ಸುವುದೇ ನಮ್ಮ ಮೊದಲ ಆದ್ಯತೆ. ಪ್ರವಾಹ ಬಾಧಿತ ಸ್ಥಳಗಳಲ್ಲಿನ ಜನರ ರಕ್ಷಣೆ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಹಾಗೂ ಪುನರ್ವಸತಿ ನಿಟ್ಟಿನಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ.
ಇದರಿಂದಾಗಿ ಜನ-ಜಾನುವಾರುಗಳ ಜೀವರಕ್ಷಣೆ ಸಾಧ್ಯವಾಗಿದೆ. ಸಾಕಷ್ಟು ಸಾವು-ನೋವು ತಪ್ಪಿದೆ ಎಂದು ಜಿಲ್ಲಾಡಳಿತದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಅಧಿಕಾರಿಗಳ ತಂಡ ಚಿಕ್ಕೋಡಿ ತಾಲೂಕಿನ ಮಾಂಜರಿ ಸೇತುವೆ ಬಳಿ ಕೃಷ್ಣಾ ನದಿಯ ಪ್ರವಾಹದಿಂದ ಆಗಿರುವ ಬೆಳೆ ಹಾನಿಯ ಪರಿಶೀಲನೆ ನಡೆಸಿತು.
ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆದಿದೆ. ರಾಜ್ಯ ಸರ್ಕಾರದ ವರದಿ ಆಧರಿಸಿ ಕೇಂದ್ರ ತಂಡದ ಮತ್ತೊಂದು ಭೇಟಿ ನಿಗದಿಪಡಿಸಲಾಗುವುದು. ಸೋಮವಾರ ರಾಜ್ಯ ಸರ್ಕಾರ ಒಟ್ಟಾರೆ ಹಾನಿಯ ಕುರಿತ ಪ್ರಸ್ತಾವನೆ ಸಲ್ಲಿಸಲಿದ್ದು, ನಂತರ ಎರಡನೇ ಭೇಟಿ ಬಗ್ಗೆ ಸಮಯ ನಿಗದಿಪಡಿಸಲಾಗುವುದು.
-ಪ್ರಕಾಶ್, ಕೇಂದ್ರ ಗೃಹ ವ್ಯವಹಾರಗಳ ಇಲಾಖೆಯ ಆಡಳಿತ ವಿಭಾಗದ ಜಂಟಿ ನಿರ್ದೇಶಕ