ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಮಾಡುವ ವಿಚಾರದಲ್ಲಿ ಅನರ್ಹ ಶಾಸಕ ಡಾ. ಕೆ. ಸುಧಾಕರ್ ಹಾಗೂ ಗೌರಿಬಿದನೂರು ಕ್ಷೇತ್ರದ ಶಾಸಕರಾದ ಮಾಜಿ ಕೃಷಿ ಸಚಿವ ಶಿವಶಂಕರರೆಡ್ಡಿ ನಡುವೆ ವಾಕ್ಸಮರ ಮುಂದುವರಿದೆ.
ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಮಾಡಿಕೊಳ್ಳಲಿ ಅದಕ್ಕೆ ನಮ್ಮ ತಕಾರರು ಇಲ್ಲ ಆದರೆ ಗೌರಿಬಿದನೂರು ಕ್ಷೇತ್ರದ ತೋಂಡೇಬಾವಿ ಹೋಬಳಿಯನ್ನು ಸೇರಿಸುವ ಪ್ರಯತ್ನವನ್ನು ಡಾ.ಕೆ. ಸುಧಾಕರ್ ಮಾಡುತ್ತಿದ್ದಾರೆ. ಸುಧಾಕರ್ ತೋಂಡೇಬಾವಿ ತಂಟೆಗೆ ಬಂದರೆ ಕೈ ಕತ್ತರಿಸುವ ಕೆಲಸವನ್ನು ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದು ಶಿವಶಂಕರರೆಡ್ಡಿ ಈ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಅಗುತ್ತಿದೆ.
ಗೌರಿಬಿದನೂರು ತಾಲ್ಲೂಕಿಗೆ ಸೇರಿರುವ ಮಂಚೇನಹಳ್ಳಿ ಹೋಬಳಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದ್ದು ಇದೀಗ ಮಂಚೇನಹಳ್ಳಿ ತಾಲೂಕು ಮಾಡುವ ವಿಚಾರದಲ್ಲಿ ಸುಧಾಕರ್ ಹಾಗೂ ಶಿವಶಂಕರರೆಡ್ಡಿ ನಡುವೆ ಸಾಕಷ್ಡು ಮಾತಿನ ಸಮರ ನಡೆಯುತ್ತಿದೆ.
ಮಂತ್ರಿಯಾದರೂ ಶಿವಶಂಕರರೆಡ್ಡಿ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಮಾಡಲಿಲ್ಲ ಎಂದು ಸುಧಾಕರ್ ಹೋದಕಡೆಯಲ್ಲಾ ಪ್ರಚಾರ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಶಿವಶಂಕರರೆಡ್ಡಿ, ಮಂಚೇನಹಳ್ಳಿ ತಾಲೂಕು ಮಾಡಲು ನನ್ನದು ತಕಾರರು ಇಲ್ಲ. ಆದರೆ ಹೊಸ ತಾಲೂಕಿಗೆ ಗೌರಿಬಿದನೂರು ತಾಲ್ಲೂಕಿನ ತೋಂಡೇಬಾವಿ ಹೋಬಳಿಯನ್ನು ಸೇರಿಸುವ ಕೆಲಸಕ್ಕೆ ಸುಧಾಕರ್ ಮುಂದಾಗಿದ್ದಾರೆ. ಇದಕ್ಕೆ ಅವಕಾಶವನ್ನು ನೀಡುವುದಿಲ್ಲ, ತೋಂಡೇಬಾವಿ ತಂಟೆಗೆ ಬಂದರೆ ಕೈ ಕತ್ತರಿಸುವ ಕೆಲಸ ಮಾಡುತ್ತೇನೆ, ಬೇಕಾದರೆ ಮಂಚೇನಹಳ್ಳಿಗೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಅಥವ ಮಂಡಿಕಲ್ ಹೋಬಳಿ ಸೇರಿಸಿಕೊಳ್ಳಿ ಎಂದರು.
ಇದಕ್ಕೆ ನಮ್ಮವರೇ ಸುಧಾಕರ್ ಜೊತೆ ಕೈ ಜೋಡಿಸಿದ್ದಾರೆ. ಈ ಬಗ್ಗೆ ತೋಂಡೇಬಾವಿಯಲ್ಲಿಯೆ ಸಭೆ ನಡೆಸಿ ಹೇಳುವೆ ಎಂದರು.