ಶಾರ್ಜಾ: ಮಂಗಳವಾರ ಶಾರ್ಜಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್- ಕೋಲ್ಕತ ನೈಟ್ ರೈಡರ್ಸ್ ನಡುವೆ ರೋಚಕ ಪಂದ್ಯ ನಡೆದು ಅಲ್ಲಿ ಕೋಲ್ಕತ ಗೆದ್ದಿತ್ತು. ಈ ವೇಳೆ ಒಂದು ಚಕಮಕಿ ನಡೆದಿದೆ, ಅದೀಗ ಬಹಳ ದೊಡ್ಡ ವಾಗ್ವಾದಕ್ಕೆ ಕಾರಣವಾಗಿದೆ.
ಡೆಲ್ಲಿ ಆಟಗಾರ ಆರ್.ಅಶ್ವಿನ್ ಹಾಗೂ ಕೋಲ್ಕತ ನಾಯಕ ಇಯಾನ್ ಮಾರ್ಗನ್, ಟಿಮ್ ಸೌಥಿ ನಡುವೆ ಒಂದು ಸಣ್ಣ ವಿಚಾರಕ್ಕೆ ನಡೆದ ವಾಗ್ವಾದ ಈಗ ದೊಡ್ಡದಾಗಿದೆ.
ಡೆಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ 19ನೇ ಓವರ್ ಕೊನೆಯ ಎಸೆತದಲ್ಲಿ ಕ್ಷೇತ್ರ ರಕ್ಷಕ ಎಸೆದ ಚೆಂಡು ರಿಷಭ್ ಪಂತ್ ಭುಜಕ್ಕೆ ಬಡಿದು ದೂರ ಹೋಯಿತು. ಆಗ ಮತ್ತೂಂದು ತುದಿಯಲ್ಲಿದ್ದ ಅಶ್ವಿನ್ ಓವರ್ ಥ್ರೋ ಲೆಕ್ಕಾಚಾರದಲ್ಲಿ ರನ್‌ಗೆ ಓಡಿದರು. ಈ ವೇಳೆ ಟಿಮ್ ಸೌದಿ ಅಶ್ವಿನ್‌ರನ್ನು ತಡೆದರು. ಕೂಡಲೇ ನಾಯಕ ಮಾರ್ಗನ್ ಕೂಡಾ ವಾಗ್ವಾದಕ್ಕೆ ಮುಂದಾದರು. ಅದನ್ನು ಅಶ್ವಿನ್ ಪ್ರತಿಭಟಿಸಿದರು. ಮುಂದೆ ಕೋಲ್ಕತ ಬೌಲಿಂಗ್ ಆರಂಭವಾದಾಗ ಅಶ್ವಿನ್ ಬೌಲಿಂಗ್‌ನಲ್ಲೇ ಮಾರ್ಗನ್ ಔಟಾದರು!
ಇದನ್ನೂ ಓದಿ:ಐಪಿಎಲ್ ನಿಂದ ಹೊರಬಿದ್ದ ಅರ್ಜುನ್ ತೆಂಡೂಲ್ಕರ್: ಮುಂಬೈಗೆ ಬದಲಿ ಆಟಗಾರನ ಸೇರ್ಪಡೆ
ಮಾರ್ಗನ್ ಹೇಳುವುದೇನು?: ಭುಜಕ್ಕೆ ಬಿದ್ದ ಚೆಂಡು ದೂರ ಹಾರಿದಾಗ ಓವರ್ ಥ್ರೋ ಲೆಕ್ಕದಲ್ಲಿ ರನ್‌ಗಾಗಿ ಓಡಬಾರದು. ಅದು ನೈತಿಕವಲ್ಲ, ಇದು ಭವಿಷ್ಯದ ಆಟಗಾರರಿಗೆ ಕೆಟ್ಟ ಮಾದರಿ ಹಾಕಿಕೊಟ್ಟಂತೆ ಎಂದು ಮಾರ್ಗನ್ ಹೇಳುತ್ತಾರೆ.
ಆದರೆ 2019ರ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಬೆನ್ ಸ್ಟೋಕ್ಸ್ ಬ್ಯಾಟಿಗೆ ಚೆಂಡು ಬಡಿದು ಬೌಂಡರಿ ಹೋಗಿತ್ತು. ಆಗ ಅಂಪೈರ್ ಅದನ್ನು ಓವರ್ ಥ್ರೋ ಎಂದು ಪರಿಗಣಿಸಿ ಬೌಂಡರಿ ನೀಡಿದ್ದರು. ಅದರ ಪರಿಣಾಮವೇ ನ್ಯೂಜಿಲೆಂಡ್ ಸೋತಿದ್ದು, ಇಂಗ್ಲೆಂಡ್ ವಿಶ್ವಕಪ್ ಗೆದ್ದಿದ್ದು! ಆಗ ಇಂಗ್ಲೆಂಡ್ ನಾಯಕರಾಗಿದ್ದ ಮಾರ್ಗನ್ ಉಸಿರೆತ್ತಿರಲಿಲ್ಲ. ಆಗ ಮೌನವಾಗಿದ್ದ ಮಾರ್ಗನ್ ಈಗ ವಿರೋಧಿಸಿದ್ದನ್ನು ಸೆಹ್ವಾಗ್ ತರಾಟೆಗೆ ತೆಗೆದುಕೊಂಡಿದ್ದಾರೆ.