Advertisement

ಉತ್ತರದ ಮದುವೆಗೆ ದಕ್ಷಿಣದ ಸವಿರುಚಿ : ಸಹೋದರರ ತಂಡದಿಂದ ನವ ಖಾದ್ಯೋದ್ಯಮ

12:35 PM Dec 02, 2021 | Team Udayavani |

ಹುಬ್ಬಳ್ಳಿ : ಬಾಯಿ ಚಪ್ಪರಿಸುವಂತಹ ರುಚಿಕಟ್ಟಾದ ದಕ್ಷಿಣ ಭಾರತದ ತರಹೇವಾರಿ ತಿಂಡಿ ತಿನಿಸುಗಳು, ಪಾಕ ವಿಧಾನ ಉತ್ತರ ಭಾರತದ ಮದುವೆ ಸಮಾರಂಭಗಳಲ್ಲಿ ಘಮಗುಡುತ್ತಿದೆ. ಸಹೋದರರಿಬ್ಬರು ತಂಡ ಕಟ್ಟಿಕೊಂಡು ಕ್ಯಾಟರಿಂಗ್‌ ಮೂಲಕ ಅಲ್ಲಿನ ಜನರಿಗೆ ಈ ಭಾಗದ ರಸವತ್ತಾದ ಭಕ್ಷಭೋಜನ ಉಣಬಡಿಸುತ್ತಿದ್ದಾರೆ. ಬಾಣಸಿಗರು, ಮಸಾಲೆ ಸೇರಿದಂತೆ ಪ್ರತಿಯೊಂದು ಅಡುಗೆ ಸಾಮಗ್ರಿ ಈ ಭಾಗದ್ದೇ ಆಗಿದೆ.

Advertisement

ಉತ್ತರ ಕರ್ನಾಟಕದಲ್ಲಿ ಮೊದಲ ದಾವಣಗೆರೆ ಬೆಣ್ಣೆ ದೋಸೆ ಪರಿಚಯಿಸಿದ ಮುದ್ದಳ್ಳಿ ಕುಟುಂಬದ ಸಹೋದರರಾದ ಮಲ್ಲಿಕಾರ್ಜುನ ಮುದ್ದಳ್ಳಿ, ವೀರೇಶ ಮುದ್ದಳ್ಳಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ಈ ಭಾಗದ ತಿಂಡಿ, ತಿನಿಸು, ಊಟದ ಸವಿಯನ್ನು ಕಳೆದ 10 ವರ್ಷಗಳಿಂದ ಉತ್ತರ ಭಾರತದ ಮದುವೆ ಸಮಾರಂಭಗಳಲ್ಲಿ ಪರಿಚಯಿಸುತ್ತಿದ್ದಾರೆ. ಪ್ರತಿ ಸೀಸನ್‌ನಲ್ಲಿ ಆ ಭಾಗದ ಸುಮಾರು 60-70 ಮದುವೆಗಳಿಗೆ ದಕ್ಷಿಣ ಭಾರತದ ತರಹೇವಾರಿ ಖಾದ್ಯಗಳು ಇಷ್ಟವಾಗುತ್ತಿವೆ. ರುಚಿಕರ ಆಹಾರ ಪದಾರ್ಥಗಳೊಂದಿಗೆ ಗ್ರಾಮೀಣ ಸಂಸ್ಕೃತಿ ಸೆಟ್‌ ಗಳಿಂದ ಗಮನ ಸೆಳೆಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ದಕ್ಷಿಣ ಭಾರತದ ಖಾದ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಕೈ ಹಿಡಿದ ಬೆಣ್ಣೆ ರುಚಿ: ನಗರದಲ್ಲಿ ನೆಲೆಸಿ ವ್ಯಾಪಾರ ವ್ಯವಹಾರ ನಡೆಸುತ್ತಿರುವ ರಾಜಸ್ಥಾನ, ಗುಜರಾತ ಮೂಲದವರು ಇವರ ಬೆಣ್ಣೆ ದೋಸೆ ರುಚಿಗೆ ಮನ ಸೋತಿದ್ದರು. ಹೀಗಾಗಿ ತಮ್ಮ ಮೂಲ ಸ್ಥಳಗಳಲ್ಲಿ ನಡೆಯುವ ಮದುವೆ, ಸಮಾರಂಭಗಳಿಗೆ ಇವರನ್ನು ಕರೆದುಕೊಂಡು ಹೋಗಿ ದಕ್ಷಿಣ ಭಾರತದ ಅಡುಗೆ ರುಚಿ ಉಣಬಡಿಸುತ್ತಿದ್ದರು.

ಇದನ್ನೂ ಓದಿ : ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ ಬಂದವ 2ನೇ ಮದುವೆಯಾಗಿ ಅವಳನ್ನೂ ಕೊಂದೇ ಬಿಟ್ಟ

ಒಂದೆರಡು ವರ್ಷ ಆಗುತ್ತಿದ್ದಂತೆ ಕ್ಯಾಟರಿಂಗ್‌ ವ್ಯವಸ್ಥೆ ರೂಪಿಸಿಕೊಂಡು ನೇರವಾಗಿ ಮದುವೆ ಸಮಾರಂಭಗಳಿಗೆ ದಕ್ಷಿಣ ಭಾರತದ ತಿಂಡಿ-ತಿನಿಸುಗಳನ್ನು ರುಚಿ ತೋರಲು ಮುಂದಾದರು. ಇದೀಗ ಒಂದು ಉದ್ಯಮವಾಗಿ ರೂಪುಗೊಂಡಿದ್ದು, ಇಲ್ಲಿನ ಹೋಟೆಲ್‌ ಹಾಗೂ ಕ್ಯಾಟರಿಂಗ್‌ ಸೇರಿ ಸುಮಾರು 120ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡಿದ್ದಾರೆ.

Advertisement

ರಾಜಸ್ಥಾನದ ಜೋಧಪುರ ಕೇಂದ್ರೀಕರಿಸಿಕೊಂಡು ಗುಜರಾತ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಲ್ಲೂ ಕಾರ್ಯ ವಿಸ್ತರಿಸಿಕೊಂಡಿದ್ದಾರೆ.

ಎಲ್ಲರೂ ಇಲ್ಲಿನವರೇ: ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳಲ್ಲಿ ಹೆಸರುವಾಸಿಯಾದ ಖಾದ್ಯಗಳನ್ನು ಪರಿಚಯಿಸುತ್ತಿದ್ದಾರೆ. ಅಡುಗೆಗೆ ಬೇಕಾಗುವ ಪದಾರ್ಥಗಳನ್ನು ಇಲ್ಲಿಂದಲೇ ತೆಗೆದುಕೊಂಡು ಹೋಗಲಾಗುತ್ತಿದೆ. ಸುಮಾರು 80 ಯುವಕರ ತಂಡ, ಬಾಣಸಿಗರು ಕೂಡ ಇಲ್ಲಿನವರೇ. ಒಮ್ಮೆ ಹೋದವರು 6 ತಿಂಗಳ
ಕಾಲ ಅಲ್ಲಿಯೇ ಉಳಿದು ಸೀಸನ್‌ ಮುಗಿಸಿ ವಾಪಸಾಗುತ್ತಾರೆ.

– ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next