Advertisement

3.30 ಲ. ರೂ. ವ್ಯಯಿಸಿದರೂ ಕಾಮಗಾರಿ ಅಪೂರ್ಣ

11:12 AM Nov 08, 2018 | Team Udayavani |

ವೇಣೂರು: ಒಂದು ಕಾಲದಲ್ಲಿ ವೇಣೂರು ಪರಿಸರದ ಜನತೆಯ ನೀರಿನ ಅಗತ್ಯ ಪೂರೈಸುತ್ತಿದ್ದ ಪುರಾತನ ಕೆರೆ ಈಗ ಅಭಿವೃದ್ಧಿ ಮರೀಚಿಕೆಯಾಗಿ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ವೇಣೂರು ಗ್ರಾ.ಪಂ. ವ್ಯಾಪ್ತಿಯ ಮೂಡುಕೋಡಿ ಎರಡಾಲುವಿನ ಸರಕಾರಿ ಜಾಗದಲ್ಲಿರುವ ಕೆರೆ ಹಲವು ವರ್ಷಗಳ ಹಿಂದೆ ವೇಣೂರಿನ ಜನತೆಗೆ ವರದಾನವಾಗಿತ್ತು. ಅನಂತರದ ದಿನಗಳಲ್ಲಿ ಕೆರೆ ಪಾಳು ಬಿದ್ದಿತ್ತು. ಪ್ರತಿ ಗ್ರಾಮಸಭೆಗಳಲ್ಲಿ ಕೆರೆ ಅಭಿವೃದ್ಧಿಪಡಿಸಿ ಜನತೆಗೆ ನೀರು ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತ ಬಂದಿದ್ದರು. ಕಳೆದ ಜನವರಿಯಲ್ಲಿ ಜಿ.ಪಂ. ಅನುದಾನದಡಿ 3.30 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆದು ಅಭಿವೃದ್ಧಿ ಪಡಿಸಲಾಯಿತು. ಆದರೆ ಕೆರೆ ಪೂರ್ಣ ಅಭಿವೃದ್ಧಿ ಆಗಲೇ ಇಲ್ಲ. ಕೆರೆ ಅಭಿವೃದ್ಧಿಗೆ ಜನಪ್ರತಿನಿಧಿಗಳು ಅನುದಾನ ಇರಿಸಲೇ ಇಲ್ಲ.

ಒತ್ತುವರಿ ಆರೋಪ
ಈ ಮಧ್ಯೆ ಕೆರೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಬೇಲಿ ಹಾಕಿ ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಗ್ರಾಮಸ್ಥರು ಪಂ.ಗೆ ದೂರು ನೀಡಿ ಕೆರೆ ಒತ್ತುವರಿಯನ್ನು ತೆರವುಗೊಳಿಸಿ ಅಭಿವೃದ್ಧಿಪಡಿಸುವಂತೆ ಲಿಖಿತ ಮನವಿ ನೀಡಿದ್ದರು. ಆಗ ಕಾರ್ಯಪ್ರವೃತ್ತರಾದ ಆ ಭಾಗದ ಪಂ. ಸದಸ್ಯರು ಕಳೆದ ಮಾರ್ಚ್‌ ತಿಂಗಳಲ್ಲಿ ಒತ್ತುವರಿ ಮಾಡಿದ ವ್ಯಕ್ತಿಗಳ ಜತೆ ಮಾತುಕತೆ ನಡೆಸಿದ್ದು, ಪಂ.ಗೆ ಬಿಟ್ಟು ಕೊಡುವುದಾಗಿ ಒಪ್ಪಿಕೊಂಡಿದ್ದರು.

ನಿರ್ಲಕ್ಷ್ಯ  ಆರೋಪ
ಕೆರೆ ವಶಕ್ಕೆ ಪಡೆದುಕೊಳ್ಳಲು ವೇಣೂರು ಗ್ರಾ.ಪಂ. ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಜಿ.ಪಂ. ಅನುದಾನದಡಿ 3.30 ಲಕ್ಷ ರೂ. ವೆಚ್ಚದ ಕಾಮಗಾರಿ ನಿಷ್ಪ್ರಯೋಜಕವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಕೆರೆ ಅಭಿವೃದ್ಧಿಗೆ ಸಾಮಾನ್ಯ ಸಭೆಗಳಲ್ಲಿ, ಗ್ರಾಮಸಭೆಗಳಲ್ಲಿ ಹಲವು ಬಾರಿ ನಿರ್ಣಯ ಕೈಗೊಳ್ಳಲಾಗಿದ್ದರೂ ಪಂ. ಮಾತ್ರ ಅಭಿವೃದ್ಧಿಗೆ ಮನಸ್ಸು ಮಾಡುತ್ತಿಲ್ಲ. ಈ ಬಗ್ಗೆ ಪಂ. ಅಧಿಕಾರಿಗಳಲ್ಲಿ ವಿಚಾರಿಸಿದರೆ ಉಡಾಫೆಯ ಉತ್ತರ ನೀಡುತ್ತಾರೆ. ಪಂ. ಇದನ್ನು ಗಂಭೀರವಾಗಿ ಪರಿಗಣಿಸಿ ಅಭಿವೃದ್ಧಿಗೆ ಒತ್ತು ನೀಡಬೇಕು. ಒತ್ತುವರಿ ತೆರವುಗೊಳಿಸದೇ ಇದ್ದಲ್ಲಿ ಸರಕಾರಕ್ಕೆ ಲಿಖಿತ ದೂರು ನೀಡುತ್ತೇವೆ ಎಂದು ಗ್ರಾಮಸ್ಥರಾದ ಅನೂಪ್‌ ಜೆ. ಪಾಯಸ್‌ ತಿಳಿಸಿದ್ದಾರೆ.

Advertisement

ಸಾಮಾನ್ಯ ಸಭೆಯಲ್ಲಿ ತೀರ್ಮಾನ
ಎರಡಾಲು ಕೆರೆ ಒತ್ತುವರಿ ಮಾಡಲಾಗಿದೆ ಕೆಲವು ಗ್ರಾಮಸ್ಥರು ದೂರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳಕ್ಕೆ ತೆರಳಿ ಅಲ್ಲಿನ ಸ್ಥಿತಿಯನ್ನು ವೀಕ್ಷಿಸಿ, ಒತ್ತುವರಿ ತೆರವು ಹಾಗೂ ಅಭಿವೃದ್ಧಿಯ ಬಗ್ಗೆ ಸಾಮಾನ್ಯಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ.
– ಮೋಹಿನಿ ವಿ. ಶೆಟ್ಟಿ
ಅಧ್ಯಕ್ಷರು, ಗ್ರಾ.ಪಂ. ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next