ಬ್ರಹ್ಮಾವರ: ಮನುಷ್ಯ ಮನಸ್ಸಿನ ಸಂಬಂ ಧಿ. ಮನಸ್ಸಿನಲ್ಲಿ ಭಗವಂತನ ಸ್ವರೂಪ ಇರುತ್ತದೆ. ನಮ್ಮ ಮನಸ್ಸಿನಲ್ಲಿರುವ ಅಹಂಕಾರ ಹೋಗಲಾಡಿಸಲು ದೇವರ ಪ್ರಾರ್ಥನೆ ಮಾಡಬೇಕು ಎಂದು ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು.
ಬಾರ್ಕೂರು ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಉಡುಪಿ ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜ ಹಾಗೂ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಸಹಿತ ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಚತುಃರ್ವಿಧ ಪುರುಷಾರ್ಥಗಳ ಸಿದ್ದಿಗೆ ಮನುಷ್ಯ ಹಾತೊರೆಯಬೇಕು. ಆದರೆ ಇಂದಿನ ಮನುಷ್ಯನ ಪರಂಪರೆ ಧರ್ಮ ಮತ್ತು ಮೋಕ್ಷವನ್ನು ಮರೆತು ಅರ್ಥ ಕಾಮದ ಹಿಂದೆ ಬಿದ್ದಿದ್ದಾನೆ ಎಂದರು.
ಆತ್ಮ ಜ್ಞಾನದಿಂದ ನಮ್ಮನ್ನು ನಾವು ಕಾಣಬಹುದು. ಅದಕ್ಕೆ ಶ್ರೀ ಕೃಷ್ಣ ಹೇಳಿದ್ದಾನೆ ಆತ್ಮಜ್ಞಾನವನ್ನು ಹೊಂದು. ಇದರಿಂದ ನಿನ್ನ ಕರ್ತವ್ಯದ ಅರಿವಾಗುತ್ತದೆ ಎಂದರು. ನಾವು ಹುಟ್ಟುತ್ತಾ ಪಾಪ ಪುಣ್ಯಗಳ ಹೊರೆಯನ್ನು ಹೊತ್ತು ಕೊಂಡು ಬಂದಿದ್ದೇವೆ. ಹಿಂದೆ ಇದ್ದಿದ್ದು ಗೊತ್ತಿಲ್ಲ. ಮುಂದೆ ಇರುವುದು ಗೊತ್ತಿಲ್ಲ. ಇರುವುದನ್ನು ಧರ್ಮ, ಭಕ್ತಿ ಮಾರ್ಗದಲ್ಲಿ ಸಾಗಿ ಮುಂದಿನ ದಾರಿಯನ್ನು ಸುಲಭ ಮಾಡಿಕೊಳ್ಳಬೇಕು ಎಂದರು.ಜಿಲ್ಲಾ ಸೋಮಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ. ಗೋಪಾಲ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಎಚ್. ಧನಂಜಯ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಗೋಪಾಲ ಗಾಣಿಗ ಚಲ್ಲೆಮಕ್ಕಿ, ಉದ್ಯಮಿಗಳಾದ ಕೆ.ಎಂ. ರಾಂ, ಸುಂದರ್ ರಾವ್, ಸಂದೇಶ್ ಕುಮಾರ್, ಬಿ.ವಿ. ರಾವ್, ವಿದ್ಯೋದಯ ಸಮಿತಿ ಅಧ್ಯಕ್ಷ ವಿಜಯೇಂದ್ರ ಗಾಣಿಗ, ಉದ್ಯಮಿ ನಾಗೇಶ್ ಮಾರಾಳಿ, ಜಿ.ಆರ್. ಚಂದ್ರಯ್ಯ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಮಹಾಪ್ರಬಂಧಕ ಕೆ.ಜಿ. ಗಾಣಿಗ, ಮುಂಬೈ ಗಾಣಿಗ ಸಮಾಜದ ಗೌರವಾಧ್ಯಕ್ಷ ಜಗನ್ನಾಥ ಎಂ. ಗಾಣಿಗ, ಭದ್ರಾವತಿಯ ಪ್ರಗತಿಪರ ಕೃಷಿಕ ಕೃಷ್ಣಯ್ಯ, ಮಂಜುನಾಥ್ ಆರ್., ಜನಾರ್ಧನ್ ರಾವ್ ಮೊದಲಾದವರು ಉಪಸ್ಥಿತರಿದ್ದರು.ರಘುರಾಮ್ ಬೈಕಾಡಿ ಸ್ವಾಗತಿಸಿ, ಕೆ.ಎಂ. ಶೇಖರ್ ಕಾರ್ಯಕ್ರಮ ನಿರೂಪಿಸಿದರು.