Advertisement

ಸುನಾದದಲ್ಲಿ ವೇಣು ನಿನಾದ

10:16 AM Jul 14, 2017 | |

ಕಲಾರತ್ನಗಾನಂ ಎಂಬ ಉಕ್ತಿಯಂತೆ ಲಲಿತಕಲೆಗಳಲ್ಲಿಯೇ ರತ್ನಪ್ರಾಯವಾದುದು ಸಂಗೀತ. ಭಗವಂತನ ಸಾಕ್ಷಾತ್ಕಾರಕ್ಕಾಗಿ ಮಾನವನು ಅನೇಕ ಮಾರ್ಗಗಳನ್ನು ಅನುಸರಿಸಿದ್ದರೂ ಸಂಗೀತ ಕಲೆಯು ಮಹೋನ್ನತವಾದುದು. ನಾದಾನುಸಂಧಾನದಿಂದ ಬಾಹ್ಯವನ್ನು ಮರೆಸಿ, ಭಾವನಾ ಪ್ರಪಂಚಕ್ಕೆ ಒಯ್ದು, ಆತ್ಮ ವಿಕಾಸಕ್ಕೂ,ಪರಿಪೂರ್ಣತೆಗೂ ಎಡೆ ಮಾಡಿಕೊಡುವ ಶಕ್ತಿ ಸಂಗೀತದ್ದು. ರಾಗ, ಭಾವ, ಲಯ, ರಸ, ಸಾಹಿತ್ಯದ ಸಮ್ಮಿಲನದಿಂದಾಗುವ ರಸಪಾಕವೇ ಸಂಗೀತ. ಹಳ್ಳಿ ಹಳ್ಳಿಯಲ್ಲೂ ಸಂಗೀತವನ್ನು ಬೆಳೆಸುವುದರ ಉದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆ ಸುನಾದ.

Advertisement

ಇತ್ತೀಚೆಗೆ ಸುನಾದ ಯುವದನಿಯ 155ನೆಯ ಸಂಚಿಕೆ ಜುಲೈ 2ರಂದು ಸುನಾದ ಸಭಾಂಗಣದಲ್ಲಿ ಸಂಪನ್ನಗೊಂಡಿತು .ಮೊದಲಿಗೆ ಕು| ಶ್ರದ್ಧಾ ಸ್ಫೂರ್ತಿದಾಯಕವಾಗಿ ಕಛೇರಿಯನ್ನು ನಡೆಸಿಕೊಟ್ಟರು. ಇವರಿಗೆ ವಯಲಿನ್‌ನಲ್ಲಿ ಡಾ| ರಾಮಕೃಷ್ಣ ಭಟ್‌ ಹಾಗೂ ಮೃದಂಗದಲ್ಲಿ ವೆಂಕಟಯಶಸ್ವಿ ಸಹಕರಿಸಿದರು.

ಅನಂತರ ಶಿವಮೊಗ್ಗದ ವಿ| ಆನಂದ ರಾಮ ಭಟ್‌ ಇವರಿಂದ ಕೊಳಲು ವಾದನ ಕಛೇರಿ ನಡೆಯಿತು. ವಯಲಿನ್‌ನಲ್ಲಿ ಡಾ| ರಾಮಕೃಷ್ಣ ಭಟ್‌ ಹಾಗೂ ಮೃದಂಗದಲ್ಲಿ ಅಕ್ಷಯನಾರಾಯಣ ಕಾಂಚನ, ಮೋರ್ಚಿಂಗ್‌ನಲ್ಲಿ ವಿ| ಶ್ಯಾಮ ಭಟ್‌ ಸುಳ್ಯ ಇವರು ಸಹಕರಿಸಿದರು. ಅಭೋಗಿ ರಾಗದ ಎವ್ವರಿ ಬೋಧ ವರ್ಣದೊಂದಿಗೆ ಕಾರ್ಯಕ್ರಮ ಆರಂಭಿಸಿದ ಇವರು ಚಕ್ರವಾಕ ರಾಗದ ಗಜಾನನಯುತಂ ಕೃತಿಯನ್ನು ಚುರುಕಾದ ಸ್ವರ ಪ್ರಸ್ತಾರದೊಂದಿಗೆ ಪ್ರಸ್ತುತಪಡಿಸಿದರು. ಅನಂತರ ಸಾರಂಗದ ಎಂತಭಾಗ್ಯಮು ಕೃತಿಯು ಹೃದ್ಯವಾಗಿ ನಿರೂಪಿತಗೊಂಡಿತು. ಮಾಯಾಮಾಳವಗೌಳ ರಾಗದ ಭಾವಪೂರ್ಣವಾದ ಆಲಾಪನೆ ಹಾಗೂ ಉತ್ತಮ ಕಲ್ಪನಾ ಸ್ವರಗಳೊಂದಿಗೆ ದೇವದೇವ ಕಲಯಾಮಿತೆ ಮನೋಜ್ಞವಾಗಿ ಪ್ರಸ್ತುತಗೊಂಡಿತು. ಕಾಪಿನಾರಾಯಣಿ ರಾಗದ ಸರಸಸಾಮದಾನ ದ್ರುತಗತಿಯಲ್ಲಿ ಮೂಡಿಬಂದಿತು. ಷಣ್ಮುಖಪ್ರಿಯದ ಆಲಾಪನೆಯು ಜೀವಸ್ವರ ನೆಲೆ ಯಲ್ಲಿ ಸಂಚರಿಸಿದ ಪರಿಯು ಮನೋಜ್ಞವಾಗಿತ್ತು.ಮರಿವೇರೆದಿಕ್ಕೆವರಯ್ಯ ರಾಮ ಕೃತಿಯು ನೆರವಲ್‌ ಹಾಗೂ ಸುಂದರವಾದ ಸ್ವರ ಜೋಡಣೆಯಿಂದ ಸಿಂಗರಿಸಲ್ಪಟ್ಟಿತು. 

ವಯಲಿನ್‌ನಲ್ಲಿ ಡಾ| ರಾಮಕೃಷ್ಣ ಭಟ್‌ ಸಮರ್ಥವಾಗಿ ಸಾಥ್‌ ನೀಡಿದರೆ, ಉತ್ತಮ ಲಯ ವಿನ್ಯಾಸದೊಂದಿಗೆ, ನಾದಮಯ ನುಡಿಸಾಣಿಕೆಯಿಂದ  ಅಕ್ಷಯನಾರಾಯಣ ಕಾಂಚನ ಹಾಗೂ ವಿ| ಶ್ಯಾಮ ಭಟ್‌ ಸುಳ್ಯ ಕಛೇರಿಯನ್ನು ಕಳೆಗಟ್ಟಿಸಿದರು. ಅನಂತರ ಅನ್ನಮಾಚಾರ್ಯ ಅವರ ನಾನಾಟಿ ಬದುಕು ನಾಟಕಮು, ಇಷ್ಟು ದಿನ ಈ ವೈಕುಂಠ ದೇವರನಾಮ ಉತ್ತಮವಾಗಿ ಮೂಡಿಬಂದಿತು. ಲಾಲ್‌ಗ‌ುಡಿ ಜಯರಾಮನ್‌ ಅವರ ಖಮಾಚ್‌ ರಾಗದ ತಿಲ್ಲಾನದೊಂದಿಗೆ ಕಛೇರಿಯು ಮುಕ್ತಾಯಗೊಂಡಿತು. ವಿ| ಮಾಲತಿ ಹಾಗೂ ದತ್ತಾತ್ರೇಯ ರಾವ್‌ ಕಾರ್ಯಕ್ರಮ ನಿರೂಪಿಸಿದರು.

    ವಿ| ಕಾಂಚನ ಎ. ಈಶ್ವರ ಭಟ್‌ ಅವರ ನೇತೃತ್ವದಲ್ಲಿ ಸುನಾದ ಸಂಸ್ಥೆಯ ವತಿಯಿಂದ ಪ್ರತೀ ತಿಂಗಳು (ಸುನಾದ ಯುವದನಿ), ಪ್ರತೀ ವಾರ (ಸುನಾದ ಗೃಹ ಸಂಗಮ) ಕಾರ್ಯಕ್ರಮಗಳು ಹಲವಾರು ವರ್ಷಗಳಿಂದ ಯಾವುದೇ ಸಾರ್ವಜನಿಕ ಸಂಘ ಸಂಸ್ಥೆಗಳ ಸಹಾಯಹಸ್ತವಿಲ್ಲದೇ ನಡೆಯುತ್ತಿರುವುದು ಅವರ ಕತೃìತ್ವ ಶಕ್ತಿಗೆ ಹಿಡಿದ ಕೈಗನ್ನಡಿ. ಪುತ್ತೂರಿನ ಆಸುಪಾಸಿನಲ್ಲಿ ಶಾಸ್ತ್ರೀಯ ಸಂಗೀತವನ್ನು ಬೆಳೆಸುವ ಹಾಗೂ ಅದರ ಅಭಿರುಚಿಯನ್ನು ಪಸರಿಸುವ ನಿಟ್ಟಿನಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವ ಕಾರ್ಯದಲ್ಲಿ ಶ್ರಮಿಸುತ್ತಿರುವ ವಿ| ಕಾಂಚನ ಎ. ಈಶ್ವರ ಭಟ್‌ ಅವರು ಅಭಿನಂದನಾರ್ಹರು.

Advertisement

ವಿ| ಶಿಲ್ಪಾ ಸಿ. ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next