Advertisement
ತಾಲೂಕು ಆಸ್ಪತ್ರೆಗಳು ನಿರ್ಮಾಣವಾಗಿ ಹಲವಾರು ವರ್ಷಗಳಾದರೂ ವೆಂಟಿಲೇಟರ್ ಮತ್ತು ಆಕ್ಸಿಜನ್ ಹಾಸಿಗೆಗಳಿಲ್ಲದೆ ನಲುಗಿದ್ದವು. ಜೊತೆಗೆ ಚಿಕಿತ್ಸೆಗಾಗಿ ಗಾಯಾಳು ಅಥವಾ ರೋಗಿಗಳು ಬಂದರೂ ವೆಂಟಿಲೇಟರ್, ಆಕ್ಸಿಜನ್ ಹಾಸಿಗೆ ಸೌಲಭ್ಯಗಳಿರಲಿಲ್ಲ.ಆದರೆ, ಕೋವಿಡ್-19 ಪಾದಾರ್ಪಣೆಯಿಂದ ಇದೇ ಮೊದಲ ಬಾರಿಗೆ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು ಈ ಸೌಲಭ್ಯ ಕಾಣುವಂತಾಗಿದೆ.
Related Articles
Advertisement
ಸರ್ಕಾರದ ಕಣ್ತೆರೆಸಿದ ವೈರಾಣು: ತಾಲೂಕು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೂಕ್ತ ಸಂದರ್ಭದಲ್ಲಿ ವೆಂಟಿಲೇಟರ್ ಇಲ್ಲದೇ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ವೆಂಟಿಲೇಟರ್ ನೀಡುವಂತೆ ಆಗಾಗ ಸರ್ಕಾರದ ಗಮನಕ್ಕೆ ವೈದ್ಯಾಧಿಕಾರಿಗಳು ತರುತ್ತಿದ್ದರು. ಆದರೆ, ಅದನ್ನು ಯಾವ ಸರ್ಕಾರವೂ ಈವರೆಗೆ ಕಾರ್ಯರೂಪಕ್ಕೆ ತಂದಿರಲಿಲ್ಲ. ಆದರೆ, ಈಗ ವಿಶ್ವವ್ಯಾಪಿ ತನ್ನ ಕಬಂಧಬಾಹು ವಿಸ್ತರಿಸಿರುವ ಕೋವಿಡ್‌ವೈರಾಣು ಸರ್ಕಾರವನ್ನೇ ಬೆಚ್ಚಿ ಬೀಳಿ ಸಿರುವುದರಿಂದ ತಾಲೂಕು ಆಸ್ಪತ್ರೆಗಳಲ್ಲೂ ವೆಂಟಿ ಲೇಟರ್ ಮತ್ತು ಆಕ್ಸಿಜನ್ ಹಾಸಿಗೆಗಳ ವ್ಯವಸ್ಥೆ ಮಾಡಿ ಕೋವಿಡ್ ಮರಣ ಪ್ರಮಾಣ ತಗ್ಗಿಸಲು ಮುಂದಾಗಿರುವುದು ಭವಿಷ್ಯಕ್ಕೂ ಸಹಕಾರಿಯಾಗಿದೆ. ಒಟ್ಟಾರೆ ತಾಲೂಕು ಆಸ್ಪತ್ರೆಗಳಿಗೆ ವೆಂಟಿಲೇಟರ್ ಮತ್ತು ಆಕ್ಸಿಜನ್ ಸೌಲಭ್ಯ ಸಿಗಲು ಕೋವಿಡ್ ವೈರಾಣು ಬರಬೇಕಾಯಿತು ಎಂಬಂತಾಗಿದೆ.
ತಜ್ಞ ನೌಕರರನ್ನು ನೇಮಿಸಿದಿದ್ದರೆ ವೆಂಟಿಲೇಟರ್‌ಗಳು ಮೂಲೆಗುಂಪು : ಪ್ರತಿದಿನ ಕೆ.ಆರ್. ಆಸ್ಪತ್ರೆ ಆಕ್ಸಿಜನ್ ವಾರ್ಡ್‌ನಲ್ಲಿ 25ರಿಂದ 30 ಮಂದಿ ಹಾಗೂ ವೆಂಟಿಲೇಟರ್‌ನಲ್ಲಿ 20 ಮಂದಿ ಚಿಕಿತ್ಸೆಗಾಗಿ ಗ್ರಾಮಾಂತರ ಪ್ರದೇಶಗಳಿಂದ ಬರುತ್ತಿದ್ದರು. ಸದ್ಯಕ್ಕೆ ತಾಲೂಕು ಕೇಂದ್ರಗಳಲ್ಲಿ ವೆಂಟಿಲೇಟರ್ ಮತ್ತು ಆಕ್ಸಿಜನ್ ಸೌಲಭ್ಯ ಕಲ್ಪಿಸಿರುವುದರಿಂದ ಜಿಲ್ಲಾಸ್ಪತ್ರೆ, ಕೆ.ಆರ್. ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಿಗೆ ಒತ್ತಡಕಡಿಮೆಯಾಗಲಿದೆ. ಜೊತೆಗೆ ಎಲ್ಲಾ ತಾಲೂಕು ಆಸ್ಪತ್ರೆಗಳಿಗೂ ವೆಂಟಿಲೇಟರ್ ನಿರ್ವಹಣೆಗೆ ತಜ್ಞ ಸಿಬ್ಬಂದಿ ನೇಮಿಸಿದರಷ್ಟೇ ಅದರ ಪ್ರಯೋಜನ ಪಡೆಯಲು ಸಾಧ್ಯ. ಇಲ್ಲವಾದರೆ, ಅವು ಮೂಲೆಸೇರುತ್ತವೆ ಎಂದು ಕೆ.ಆರ್. ಆಸ್ಪತ್ರೆ ವೈದ್ಯ ಅಧೀಕ್ಷಕ ಡಾ| ನಂಜುಂಡಸ್ವಾಮಿ ತಿಳಿಸಿದ್ದಾರೆ.
ಕೆ.ಆರ್.ಆಸ್ಪತ್ರೆಯಲ್ಲಿ ತಗ್ಗಲಿದೆ ಒತ್ತಡ : ಪ್ರತಿದಿನ ಗ್ರಾಮಾಂತರ ಪ್ರದೇಶಗಳಿಂದ ವೆಂಟಿಲೇಟರ್ ಮತ್ತು ಆಕ್ಸಿಜನ್‌ಗಾಗಿ 25ರಿಂದ30 ಮಂದಿ ರೋಗಿಗಳು ನಗರದ ಕೆ.ಆರ್. ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಕೆ.ಆರ್. ಆಸ್ಪತ್ರೆಯೊಂದರಲ್ಲೆನಿತ್ಯ 25 ಮಂದಿ ಆಕ್ಸಿಜನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ, ವೆಂಟಿಲೇಟರ್‌ಗಾಗಿ 15ರಿಂದ 20 ಮಂದಿ ಬರುತ್ತಿದ್ದರು. ಇನ್ನು ಮುಂದೆ ನಗರದ ಆಸ್ಪತ್ರೆಗಳಿಗೆ ಈ ಒತ್ತಡ ಕಡಿಮೆಯಾಗಲಿದ್ದು, ಗ್ರಾಮೀಣ ಪ್ರದೇಶದ ರೋಗಿಗಳಿಗೆ ಹತ್ತಿರದ ತಾಲೂಕು ಆಸ್ಪತ್ರೆಗಳಲ್ಲೇ ಸೂಕ್ತ ಕಾಲದಲ್ಲಿ ಸಮಪರ್ಕ ಚಿಕಿತ್ಸೆ ಸಿಗಲಿದೆ.
-ಸತೀಶ್ ದೇಪುರ