Advertisement
ಈ ಭಾಗದಲ್ಲಿ ಕಳೆದ 30-35 ವರ್ಷದ ಹಿಂದೆ ನಿರ್ಮಿಸಿದ ಕಿಂಡಿ ಅಣೆಕಟ್ಟು (ಕಾಲು ಸಂಕ) ಇತ್ತೀಚಿನ ವರ್ಷಗಳಲ್ಲಿ ತೀರಾ ದುಃಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ನದಿಯಲ್ಲಿ ಹಿನ್ನೀರ ಸಂಗ್ರಹ ಕಡಿಮೆಯಾಗಿ, ಇದನ್ನು ಅವಲಂಬಿಸಿರುವ ಬಿಜೂರು ಹಾಗೂ ತಗ್ಗರ್ಸೆ ಗ್ರಾಮದ ಕೃಷಿಕರು ಸಂಕಷ್ಟಕ್ಕೀಡಾಗಿದ್ದರು. ಹೀಗಾಗಿ ಈ ಭಾಗದಲ್ಲಿ ಸುಸಜ್ಜಿತ ಕಿಂಡಿ ಅಣೆಕಟ್ಟನ್ನು ನಿರ್ಮಿಸಿಕೊಡುವಂತೆ ಎರಡು ಗ್ರಾಮದ ಗ್ರಾಮಸ್ಥರು ಹಿಂದಿನ ಶಾಸಕರಿಗೆ ಮನವಿ ನೀಡಿದ್ದರು. ಬೇಡಿಕೆಗೆ ಸ್ಪಂದಿಸಿದ ಅಂದಿನ ಶಾಸಕ ಕೆ. ಗೋಪಾಲ ಪೂಜಾರಿಯವರು ಸಣ್ಣ ನೀರಾವರಿ ಇಲಾಖೆಯಿಂದ ನೂತನ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿದ್ದರು. 6.60 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ವೆಂಟೆಡ್ ಡ್ಯಾಮ್, ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.
94 ಮೀ. ಉದ್ದ ಹಾಗೂ 5.5 ಮೀ ಅಗಲವಿದೆ. ಕಿಂಡಿ ಅಣೆಕಟ್ಟು, ಕಾಲು ಸಂಕದ ಮಾದರಿಯಲ್ಲಿರುವ ಕಾರಣ ವಾಹನಗಳು ಸಂಚರಿಸುತ್ತಿರಲಿಲ್ಲ, ಇದ ರಿಂದಾಗಿ ತಗ್ಗರ್ಸೆ ಉದ್ದಾಬೆಟ್ಟು ಭಾಗದ ನಿವಾಸಿಗಳು ತಮ್ಮ ವಾಹನಗಳನ್ನು ಬಿಜೂರಿನ ಅರೆಕಲ್ಲು ಬಳಿ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ತೆರಳುತ್ತಿದ್ದರು. ಅಲ್ಲದೇ ಮಳೆಗಾಲದಲ್ಲಿ ಈ ಕಿಂಡಿ ಅಣೆಕಟ್ಟಿನ ಸಂಚರಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಈ ಕುರಿತು ಸೇತುವೆ ಅಪಾಯದ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು. ಹೊಸ ಕಿಂಡಿ ಅಣೆಕಟ್ಟು ಸುಸಜ್ಜಿತವಾಗಿರುವು ದಲ್ಲದೇ, 5.5 ಮೀ. ಅಗಲವಿರುವುದರಿಂದ ವಾಹನ ಸಂಚಾರಕ್ಕೂ ಅನುಕೂಲವಾಗಿದೆ. ಇದಕ್ಕೆ ಮೆಕ್ಯಾನಿಕಲ್ ಕ್ರೆಸ್ಟ್‌ಗೇಟ್ ಅಳವಡಿಸಲಾಗುತ್ತಿದೆ. ಕಿಂಡಿ ಅಣೆಕಟ್ಟಿನ ಬಳಿ ನದಿದಂಡೆ ಕುಸಿಯದಂತೆ ನದಿಯ ಎರಡು ಮಗ್ಗುಲ್ಲಲ್ಲಿ ಸುಮಾರು 100 ಮೀ. ಉದ್ದದವರೆಗೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡಲಾಗಿದೆ.