ಮುಂಬಯಿ : ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗುವ ಸ್ಫರ್ಧೆಗೆ ಈಗ ಮಾಜಿ ವೇಗದ ಎಸೆಗಾರ, ಹಾಲಿ ಜೂನಿಯರ್ ನ್ಯಾಶನಲ್ ಚೀಫ್ ಸೆಲೆಕ್ಟರ್ ಆಗಿರುವ ವೆಂಕೇಶ್ ಪ್ರಸಾದ್ ಅವರೂ ಸೇರಿಕೊಂಡಿದ್ದಾರೆ.
ಮಾಜಿ ಇಂಡಿಯಾ ಟೀಮ್ ನಿರ್ದೇಶಕ ರವಿ ಶಾಸ್ತ್ರೀ ಮತ್ತು ವೆಂಕಟೇಶ್ ಪ್ರಸಾದ್ ಅವರು ಭಾರತೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆಯ ರೇಸ್‌ನಲ್ಲಿರುವ ಪ್ರಮುಖರಾಗಿದ್ದಾರೆ.
ಅನೂಹ್ಯ ಸನ್ನಿವೇಶದಲ್ಲಿ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿರುವ ಕಾರಣ ಭಾರತೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆ ಈಗ ತೆರವಾಗಿದೆ.
ಕೋಚ್ ಹುದ್ದೆಗೆ ಅರ್ಜಿ ಹಾಕಿರುವ 47ರ ಹರೆಯದ ವೆಂಕಟೇಶ್ ಪ್ರಸಾದ್ ಅವರು 1990ರ ದಶಕದಲ್ಲಿ 33 ಟೆಸ್ಟ್ ಹಾಗೂ 162 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ವರ್ಷ ಸೆಪ್ಟಂಬರ್‌ನಲ್ಲಿ ಅವರು ಜೂನಿಯರ್ ಇಂಡಿಯಾ ಚೀಫ್ ಸೆಲೆಕ್ಟರ್ ಹುದ್ದೆಯ ಮೂರು ವರ್ಷಗಳ ಕಾರ್ಯಾವಧಿಯನ್ನು ಮುಗಿಸಲಿದ್ದಾರೆ.
ಅಂದ ಹಾಗೆ ವೆಂಕಟೇಶ್ ಪ್ರಸಾದ ಅವರೀಗ ವೀರೇಂದ್ರ ಸೆಹವಾಗ್, ಟಾಮ್ ಮೂಡಿ, ಲಾಲಚಂದ್ ರಾಜಪೂತ್ ಮತ್ತು ದೊಡ್ಡ ಗಣೇಶ್ ಮೊದಲಾದವರೊಂದಿಗೆ ಕೋಚ್ ಹುದ್ದೆಗಾಗಿ ಸೆಣಸಬೇಕಾಗಿದೆ.