ಸಾಗರ: ಈಚೆಗೆ ಶಿವಮೊಗ್ಗದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಿಗಾಗಿ ಆಯೋಜಿಸಿದ್ದ ಅಂತ್ಯೋದಯ ರಾಜ್ಯಮಟ್ಟದ ಸಮಾವೇಶ ಬಿಜೆಪಿ ಪಕ್ಷ ಸಂಘಟನೆಗೆ ಬಳಸಿಕೊಂಡಿರುವುದನ್ನು ಮಾಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ವೆಂಕಟೇಶ್ ಮೆಳವರಿಗೆ ಖಂಡಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಇಲಾಖೆ ಮ್ತು ಸಮಾಜ ಕಲ್ಯಾಣ ಇಲಾಖೆಯಿಂದ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪಂಚಾಯ್ತಿ ಸಬಲೀಕರಣಕ್ಕೆ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಪ್ರಮುಖರು ಪಕ್ಷದ ಸಾಧನೆ ಬಿಂಬಿಸಿಕೊಂಡಿದ್ದು ದುರದೃಷ್ಟಕರ ಸಂಗತಿ ಎಂದು ಹೇಳಿದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಯೋಗ ಖಾತ್ರಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನರೇಂದ್ರ ಮೋದಿ, ಜೆ.ಪಿ.ನಡ್ಡಾ ಇನ್ನಿತರರ ಗುಣಗಾನ ಮಾಡಿ, ಮೋದಿಯವರು ಉದ್ಯೋಗ ಖಾತ್ರಿ ಜಾರಿಗೆ ತಂದಿದ್ದು ಎಂದು ತಪ್ಪು ಮಾಹಿತಿ ಬಿತ್ತರಿಸುವ ಕೆಲಸ ಮಾಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದ್ದು ಡಾ. ಮನಮೋಹನ್ ಸಿಂಗ್ ಎನ್ನುವುದನ್ನು ಬಹುಶಃ ಯಡಿಯೂರಪ್ಪ ಮರೆತಿದ್ದಾರೆ ಎಂದು ಕಾಣುತ್ತದೆ. ಸಂಸದ ಬಿ.ವೈ.ರಾಘವೇಂದ್ರ ಬಂದು ಕಿವಿಯಲ್ಲಿ ಹೇಳಿದ ಮೇಲೆ ಯಡಿಯೂರಪ್ಪ ಅವರು ಬೇರೆ ವಿಷಯ ಪ್ರಸ್ತಾಪ ಮಾಡಿದರು. ಒಟ್ಟಾರೆ ಅಂತ್ಯೋದಯ ಸಮಾವೇಶ ಇನ್ನೊಂದು ಹಂತದಲ್ಲಿ ಗ್ರಾಮ ಪಂಚಾಯ್ತಿ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನ ನಡೆಸಿದೆ ಎಂದು ದೂರಿದರು.
ಪ್ರಸ್ತುತ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ಕಾಮಗಾರಿಗೆ ಶೇ. 10ರಷ್ಟು ಮಾತ್ರ ಅನುದಾನ ಇರಿಸಲಾಗಿದೆ. ಇದರಿಂದ ರಸ್ತೆ ಅಭಿವೃದ್ಧಿ ಆಗುತ್ತಿಲ್ಲ. ಮೆಟಿರಿಯಲ್ ಬಿಲ್ ಆಗದೆ ನಾಲ್ಕು ವರ್ಷವಾಯಿತು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಕ್ರೀಡಾಹಬ್ಬದ ಹೆಸರಿನಲ್ಲಿ ಪಂಚಾಯ್ತಿಯಿಂದ 9 ಸಾವಿರ ರೂ. ಸಂಗ್ರಹ ಮಾಡಿಸಿದ್ದಾರೆ. ಯಾವ ಬಿಜೆಪಿ ಜನಪ್ರತಿನಿಧಿಗೂ ಗ್ರಾಮ ಪಂಚಾಯ್ತಿ ಏಳಿಗೆಯಾಗುವುದು ಇಷ್ಟವಿಲ್ಲ. ಮನೆಮನೆಗೆ ಗಂಗೆ ಯೋಜನೆ ಅಡಿ ಬರೂರು, ಉಳ್ಳೂರು, ತ್ಯಾಗರ್ತಿ ಮೂರು ಗ್ರಾಮ ಪಂಚಾಯ್ತಿಗೆ 60 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಉಳಿದ ಗ್ರಾಮ ಪಂಚಾಯ್ತಿಗೆ ನೀಡಿದ ಅನುದಾನ ತೀರ ಕಡಿಮೆ ಇದ್ದು ದೊಡ್ಡ ಮೊತ್ತ ನೀಡಿ ದೊಡ್ಡಮಟ್ಟದಲ್ಲಿ ಕಮಿಷನ್ ಹೊಡೆಯುವ ತಂತ್ರಗಾರಿಕೆ ಇದಾಗಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ 12 ಅಂಗನವಾಡಿಗಳನ್ನು ತಲಾ 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದು ಈತನಕ ಉದ್ಘಾಟನಾ ಭಾಗ್ಯ ಕಂಡಿಲ್ಲ. ಸ್ಥಳೀಯ ಸಂಸ್ಥೆ ಸದಸ್ಯರಿಂದ ಆಯ್ಕೆಯಾಗಿ ಹೋಗಿರುವ ಡಿ.ಎಸ್.ಅರುಣ್ ಗ್ರಾಮ ಪಂಚಾಯ್ತಿ ಸದಸ್ಯರ ಗೌರವಧನ ಹೆಚ್ಚಳ ಮಾಡುವ ಪ್ರಸ್ತಾಪವನ್ನು ಕೈಬಿಡಬೇಕು. ಯಾವ ಗ್ರಾಮ ಪಂಚಾಯ್ತಿ ಸದಸ್ಯರೂ ಗೌರವಧನಕ್ಕಾಗಿ ಕೆಲಸ ಮಾಡುತ್ತಿಲ್ಲ. ಅದರ ಬದಲು ಪಂಚಾಯ್ತಿಗೆ ಹೆಚ್ಚಿನ ಅನುದಾನ ತರಿಸುವ ನಿಟ್ಟಿನಲ್ಲಿ ಗಮನ ಹರಿಸಲಿ ಎಂದು ಒತ್ತಾಯಿಸಿದ ಅವರು, 15ನೇ ಹಣಕಾಸು ಯೋಜನೆಯಡಿ ಎಂಆರ್‌ಎಫ್ ಸ್ಕೀಂಗೆ 1.50 ಲಕ್ಷ ರೂ. ತೆಗೆದಿರಿಸುವಂತೆ ಪಂಚಾಯ್ತಿ ಮೇಲೆ ಒತ್ತಡ ಹೇರುತ್ತಿರುವುದನ್ನು ನಿಲ್ಲಿಸಬೇಕು. ಪ್ರತಿ ಗ್ರಾಮ ಪಂಚಾಯ್ತಿಗೆ ಸೋಲಾರ್ ಅಳವಡಿಸುವ ಯೋಜನೆಯಲ್ಲಿ ಸಹ ಭ್ರಷ್ಟಾಚಾರ ನಡೆದಿದ್ದು ಈತನಕ ಸೋಲಾರ್ ಪರಿಕರಗಳು ಪಂಚಾಯ್ತಿ ತಲುಪಿದ್ದರೂ ಅಳವಡಿಸುವ ಕೆಲಸ ಮಾಡಿಲ್ಲ. ಮೋದಿಯವರು ಪಂಚಾಯತ್ ದಿವಸ್ ಆಚರಿಸುವ ಬದಲು ಗ್ರಾಮ ಪಂಚಾಯ್ತಿ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವುದು ಸೂಕ್ತ ಎಂದರು.
ಗೋಷ್ಟಿಯಲ್ಲಿ ಸಿರಿವಂತೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮನೋಜ್ ಜನ್ನೆಹಕ್ಲು, ಭೀಮನೇರಿ ಗ್ರಾಮ ಪಂಚಾಯ್ತಿ ಸದಸ್ಯರಾದ ಎಚ್.ನಾರಾಯಣ ಸೂರನಗದ್ದೆ, ಮಹಾಬಲ ಕೌತಿ, ಸಿರಿವಂತೆ ಗ್ರಾಮ ಪಂಚಾಯ್ತಿ ಸದಸ್ಯ ಲೋಕೇಶ್ ಗಾಳಿಪುರ, ಕೆಳದಿ ಗ್ರಾಮ ಪಂಚಾಯ್ತಿ ಸದಸ್ಯ ಸಂದೀಪ್ ಹಾಜರಿದ್ದರು.