ಅಬುಧಾಬಿ: ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಜಯ ಸಾಧಿಸಿದೆ. ಆಲ್ ರೌಂಡ್ ಪ್ರದರ್ಶನ ತೋರಿದ ಕೆಕೆಆರ್ ತಂಡ ಏಳು ವಿಕೆಟ್ ಗಳ ಗೆಲುವು ಸಾಧಿಸಿದೆ.
ಕೆಕೆಆರ್ ತಂಡದ ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ ಮತ್ತೆ ಮಿಂಚಿದರು. ಆರ್ ಸಿಬಿ ವಿರುದ್ಧ ಅಜೇಯ ಆಟವಾಡಿದ್ದ ವೆಂಕಟೇಶ್, ಮುಂಬೈ ವಿರುದ್ಧ ಅರ್ಧಶತಕ ಬಾರಿಸಿದರು.
ಪಂದ್ಯದ ಬಳಿಕ ರಾಹುಲ್ ತ್ರಿಪಾಠಿ ಜೊತೆ ಸಂದರ್ಶನದಲ್ಲಿ ಮಾತನಾಡಿದ ವೆಂಕಟೇಶ್ ತಮ್ಮ ಕೆಲವು ರೋಚಕ ಮಾಹಿತಿ ನೀಡಿದರು. ನಾನು ಮೊದಲಿನಿಂದಲೂ ಕೆಕೆಆರ್ ತಂಡಕ್ಕೆ ಸೇರಲು ಬಯಸಿದ್ದೆ. ಅದಕ್ಕೆ ಕಾರಣ ಸೌರವ್ ಗಂಗೂಲಿ. ನಾನು ಸೌರವ್ ಗಂಗೂಲಿ ಅವರನ್ನು ಬಹಳಷ್ಟು ಆರಾಧಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಧೋನಿ ಪಡೆಗೆ ಕೊಹ್ಲಿ ಬಳಗದ ಸವಾಲು
“ನಾನು ದಾದಾ ಅವರ ದೊಡ್ಡ ಅಭಿಮಾನಿ. ಅವರು ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರಲ್ಲಿ ನಾನೂ ಒಬ್ಬನಾಗಿದ್ದೇನೆ. ಪರೋಕ್ಷವಾಗಿ ನನ್ನ ಬ್ಯಾಟಿಂಗ್‌ನಲ್ಲಿ ದಾದಾ ದೊಡ್ಡ ಪಾತ್ರ ವಹಿಸಿದ್ದಾರೆ. ನಾನು ಚಿಕ್ಕವನಿದ್ದಾಗ ಬಲಗೈ ಬ್ಯಾಟಿಂಗ್ ಮಾಡುತ್ತಿದ್ದೆ. ಆದರೆ ನಾನು ದಾದಾರನ್ನು ನಿಖರವಾಗಿ ಅನುಕರಿಸಲು ಬಯಸುತ್ತೇನೆ. ಅವರು ಸಿಕ್ಸರ್ ಬಾರಿಸುವ ರೀತಿ, ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ರೀತಿಯಿಂದ ಅವರು ನನ್ನ ಜೀವನದಲ್ಲಿ ಅರಿವಿಲ್ಲದೆ ಒಂದು ದೊಡ್ಡ ಪಾತ್ರ ಹೊಂದಿದ್ದಾರೆ. ಅದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ “ಎಂದು ಅಯ್ಯರ್ ವಿವರಿಸಿದರು.
ಅಯ್ಯರ್ ಮತ್ತು ಗಂಗೂಲಿ ನಡುವೆ ಸಾಮಾನ್ಯವಾಗಿರುವ ಇನ್ನೊಂದು ಅಂಶವೆಂದರೆ ಇಬ್ಬರೂ ಮಧ್ಯಮ ವೇಗದ ಬೌಲರ್ ಕೂಡ. ದಾದಾರಂತೆಯೇ, ವೆಂಕಟೇಶ್ ಅಯ್ಯರ್ ಕೂಡಾ ಎಡಗೈ ಬ್ಯಾಟ್ಸ್‌ಮನ್ ಆಗಿದ್ದರೂ ಸಹ ಅವರು ಬಲಗೈ ಬೌಲಿಂಗ್ ಮಾಡುತ್ತಾರೆ.