Advertisement

ಅಮೃತವಾಹಿನಿಯೊಂದು ಹರಿಯುತಿದೆ…

09:30 AM May 11, 2018 | |

“ದುರಂತ ನಾಯಕನ ಪಾತ್ರಕ್ಕೆ ನಿಮ್ಮ ಮುಖ ಲಾಯಕ್ಕಿದೆ …’
“ಹಸಿರು ರಿಬ್ಬನ್‌’ ಚಿತ್ರವನ್ನು ನಿರ್ದೇಶಿಸುವ ಸಂದರ್ಭದಲ್ಲಿ ಹಿರಿಯ ಕವಿ ಡಾ.ಎಚ್‌.ಎಸ್‌. ವೆಂಕಟೇಶ್‌ ಮೂರ್ತಿ ಅವರನ್ನು ನೋಡಿ ನಿರ್ಮಾಪಕ ಸಂಪತ್‌ ಕುಮಾರ್‌ ಹೀಗೆ ಹೇಳಿದರಂತೆ. ನಿರ್ದೇಶಕ ನರೇಂದ್ರ ಬಾಬು ಸಹ ಅದನ್ನು ಅನುಮೋದಿಸಿದ್ದಾರೆ. ಹಾಗೆ ಹೇಳಿದವರು ಸುಮ್ಮನೆ ಕುಳಿತಿಲ್ಲ. ಸೀದಾ ವೆಂಕಟೇಶ್‌ ಮೂರ್ತಿ ಅವರನ್ನು “ಅಮೃತವಾಹಿನಿ’ ಎಂಬ ಚಿತ್ರಕ್ಕೆ ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರೆ. ಹಾಗಾದರೆ, ವೆಂಕಟೇಶ್‌ ಮೂರ್ತಿಗಳು ಚಿತ್ರದಲ್ಲಿ ದುರಂತ ನಾಯಕನಾಗಿ ಕಾಣಿಸಿಕೊಳ್ಳುತ್ತಾರಾ? ಗೊತ್ತಿಲ್ಲ. ಅದು ಚಿತ್ರ ನೋಡಿದ ಮೇಲೆಯೇ ಹೇಳಬೇಕು ಮತ್ತು ಅದಕ್ಕೆ ಚಿತ್ರ ಮೊದಲು ಮುಗಿಯಬೇಕು. ಈಗೇನಿದ್ದರೂ ಚಿತ್ರ ಪ್ರಾರಂಭವಾದ ಸಂಭ್ರಮವಷ್ಟೇ. 

Advertisement

“ಅಮೃತವಾಹಿನಿ’ ಮೊನ್ನೆ ಭಾನುವಾರ ಬಸವನಗುಡಿ ರಸ್ತೆಯಲ್ಲಿರುವ ನವ ಬೃಂದಾವನದಲ್ಲಿ ಪ್ರಾರಂಭವಾಯಿತು. ಕ್ಯಾಮೆರಾ ಸ್ವಿಚ್‌ ಆನ್‌ ಮಾಡುವುದಕ್ಕೆ ನಾಗತಿಹಳ್ಳಿ ಚಂದ್ರಶೇಖರ್‌ ಬಂದಿದ್ದರು. ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವುದಕ್ಕೆ ರಮೇಶ್‌ ಅರವಿಂದ್‌ ಇದ್ದರು. ಅದಲ್ಲದೆ, ತಮ್ಮ ಮಿತ್ರ ಹೀರೋ ಆಗುತ್ತಿರುವುದನ್ನು ನೋಡುವುದಕ್ಕೆ ಹಿರಿಯ ಸಾಹಿತಿ ಬಿ.ಆರ್‌. ಲಕ್ಷ್ಮಣ್‌ ರಾವ್‌, ಗಾಯಕಿ ಬಿ.ಕೆ. ಸುಮಿತ್ರಾ, ವೈ.ಕೆ. ಮುದ್ದುಕೃಷ್ಣ ಮುಂತಾದವರು ಹಾಜರಿದ್ದರು. ಮೊದಲ ದೃಶ್ಯದ ಚಿತ್ರೀಕರಣ ಮುಗಿದು, ಹಾರೈಸಲು ಬಂದವರನ್ನೆಲ್ಲಾ ಮಾತಾಡಿಸಿ, ಚಿತ್ರತಂಡದವರು ಮಾಧ್ಯಮದವರೆದುರು ಕುಳಿತರು.

ವಿಶೇಷವೆಂದರೆ, ಈ ಚಿತ್ರಕ್ಕಾಗಿಯೇ ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲರಿಂದ ಕಥೆ ಬರೆಸಲಾಗಿದೆಯಂತೆ. “ನಮ್ಮ ಕಾಲದಲ್ಲಿ ಕೂಡು ಕುಟುಂಬವಿತ್ತು. ಕ್ರಮೇಣ ದೊಡ್ಡಪ್ಪ, ಚಿಕ್ಕಪ್ಪಗಳೆಲ್ಲಾ ದೂರ ಹೋಗಿ ತಂದೆ-ತಾಯಿ-ಮಕ್ಕಳು- ಮೊಮ್ಮಕಳು ಅಂತಾಯಿತು. ಈಗ ಕುಟುಂಬ ಎಂದರೆ ತಂದೆ-ತಾಯಿ ಸಹ ಇಲ್ಲ. ಈ ವಿಘಟನೆಯು ವರ್ತಮಾನದ ಅತ್ಯಂತ ಬಿಕ್ಕಟ್ಟಾದ ಸಮಸ್ಯೆ. ಈ ವಿಷಯವನ್ನಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಇದು ಇವತ್ತಿನ ಚಿತ್ರ. ಯಾರು ಎಷ್ಟೇ ದೂರವಾದರೂ, ಮಾನವತೆಯ ಪ್ರೀತಿಯ ಝರಿ ಅಮೃತವಾಹಿನಿಯಾಗಿ ಹರಿಯುತ್ತಲೇ ಇರುತ್ತದೆ. “ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ …’ ಎಂಬ ಕವಿತೆಯೇ ಇಲ್ಲವೇ? ಆ ನಂಬಿಕೆಯನ್ನು ಸ್ಥಾಪಿಸಬೇಕು. ಅದನ್ನು ತೋರಿಸುವ ಚಿತ್ರ ಇದು. ಇದು ಜನ ಮೆಚ್ಚುವಂತಹ ಚಿತ್ರವಾಗಲಿದೆ ಎನ್ನುವ ನಂಬಿಕೆ ಇದೆ’ ಎಂದರು.

ಇನ್ನು ಈ ವಯಸ್ಸಿನಲ್ಲಿ ಬಣ್ಣ ಹಚ್ಚುವ ಕುರಿತು ಮಾತನಾಡಿದ ಅವರು, “ನಾನು ಬಣ್ಣ ಹಚ್ಚಬಹುದು ಎಂಬ ಕಲ್ಪನೇಲೇ ಇರಲಿಲ್ಲ. ನನ್ನ ಪಾಡಿಗೆ ಬರೆದುಕೊಂಡು ಇದ್ದೆ. ಈ ನಿರ್ಮಾಪಕರ ಕಣ್ಣು ಬಿತ್ತು. ದುರಂತ ನಾಯಕ ಆಗೋಕೆ ನಿಮ್ಮ ಮುಖ ಲಾಯಕ್ಕಿದೆ ಅಂತ ಹೇಳಿದರು. ನಿರ್ದೇಶಕರು ಅದೇ ರೀತಿ ಹೇಳಿದರು. ಈ ತಂಡದಲ್ಲಿ ಅನನುಭವಿ ಎಂದರೆ ನಾನೊಬ್ಬನೇ. ಇವರೆಲ್ಲರ ಜೊತೆಗೆ ಸೇರಿ ಅನುಭವಿ ಆಗಬೇಕು’ ಎಂದರು.

ಚಿತ್ರದಲ್ಲಿ ಮೂರ್ತಿಗಳಿಗೆ ಜೋಡಿಯಾಗಿ ವತ್ಸಲಾ ಮೋಹನ್‌ ನಟಿಸುತ್ತಿದ್ದಾರೆ. ಇದವರ 16ನೇ ಚಿತ್ರವಂತೆ. “ನಾವು ಬಹಳ ಪ್ರೀತಿಸುವ ಮತ್ತು ಗೌರವಿಸುವ ವೆಂಕಟೇಶ್‌ ಮೂರ್ತಿಗಳ ಜೊತೆಗೆ ನಟಿಸುತ್ತಿರುವುದಕ್ಕೆ ಬಹಳ ಖುಷಿ ಇದೆ. ಇದು ನಮ್ಮದೇ ತಂಡ ಎನಿಸುತ್ತಿದೆ. ಪಾತ್ರದ ಬಗ್ಗೆ ಹೆಚ್ಚು ಗೊತ್ತಿಲ್ಲ. ನಿರ್ಮಾಪಕರು ಕರೆದರು, ಬಂದೆ’ ಎಂದರು.

Advertisement

ಈ ಚಿತ್ರವನ್ನು “ಓ ಗುಲಾಬಿಯೇ’, “ಪಲ್ಲಕ್ಕಿ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ನರೇಂದ್ರ ಬಾಬು ನಿರ್ದೇಶಿಸಿದ್ದಾರೆ. ಈ ತರಹದ ಚಿತ್ರ, ತಂಡ ಎಲ್ಲವೂ ವರಿಗೆ ಹೊಸದಂತೆ. “ಇದು ನನ್ನ ಮಟ್ಟಿಗೆ ಹೊಸ ಸಂಪರ್ಕ, ಹೊಸ ಜಗತ್ತು. ಹಾಗಾಗಿ ಜವಾಬ್ದಾರಿ ಜಾಸ್ತಿ. ಈ ಸವಾಲನ್ನು ಸರಿಯಾಗಿ ಸ್ವೀಕರಿಸುತ್ತೇನೆ ಎಂಬ ನಂಬಿಕೆ ನನಗಿದೆ’ ಎಂದರು.

“ಅಮೃತವಾಹಿನಿ’ ಚಿತ್ರವನ್ನು ಸಂಪತ್‌ ಕುಮಾರ್‌ ನಿರ್ಮಿಸುತ್ತಿದ್ದಾರೆ. ಇನ್ನು ಗಿರಿಧರ್‌ ದಿವಾನ್‌ ಛಾಯಾಗ್ರಹಣ ಮಾಡಿದರೆ, ಉಪಾಸನಾ ಮೋಹನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಗಿರಿಧರ್‌ಗೆ ಇದು ಮೊದಲ ಚಿತ್ರವಾದರೆ, ಮೋಹನ್‌ಗೆ ಇದು ಎರಡನೆಯ ಚಿತ್ರ. ಸಂತೋಷ್‌ ಕರ್ಕಿ, ಸುಪ್ರಿಯಾ, ಬೇಬಿ ರುಥ್ವಿ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next