Advertisement
ಭಗವಂತನು ನೆಲೆಸಿದ ನೆಲವೇ ಸುಕ್ಷೇತ್ರ. ಶ್ರೀ ವೆಂಕಟೇಶ ದೇವರು ಕಲ್ಲಿನಲ್ಲಿ ಉದ್ಭವಿಸಿದ ಕ್ಷೇತ್ರವೇ ವೆಂಕಟಾಪುರ. ವಿಶೇಷವೆಂದರೆ, ಇಡೀ ರಾಜ್ಯದಲ್ಲಿಯೇ ಲಕ್ಷ್ಮೀ-ವೆಂಕಟೇಶ್ವರ, ಪದ್ಮಾವತಿ ದೇವಿಯ ಉದ್ಭವಮೂರ್ತಿ ಇರುವ ಏಕೈಕ ದೇವಾಲಯ ಇದು. ನಂತರ 2ನೇ ತಿರುಪತಿ ಎಂದೂ ಈ ಕ್ಷೇತ್ರ ಪ್ರಸಿದ್ಧಿ ಪಡೆದಿದೆ.
Related Articles
ಪೇಶ್ವೆಯರ ಕಾಲದಿಂದ ವತನಿ ಹಕ್ಕುಗಳನ್ನು ಪಡೆದು, ಪರಂಪರಾನುಗತವಾಗಿ ಕಾಯ್ದುಕೊಂಡು ಬಂದ ಮನೆತನಗಳಲ್ಲಿ ವೆಂಕಪ್ಪಯ್ಯ ದೇಸಾಯಿಯವರ ಮನೆತನವೊ ಒಂದು. ಅದು, ಸೊರಟೂರ ಗ್ರಾಮದಲ್ಲಿತ್ತು. ತಿರುಪತಿಯ ವೆಂಕಟೇಶ್ವರನೇ ಈ ದೇಸಾಯರ ಕುಲದೇವರು. ದೇಸಾಯರು, ಪ್ರತಿವರ್ಷ ನವರಾತ್ರಿ ಉತ್ಸವಕ್ಕೆ ತಿರುಪತಿಗೆ ತಪ್ಪದೇ ಹೋಗಿ ಬರುವ ಪರಿಪಾಠ ಇಟ್ಟುಕೊಂಡಿದ್ದರು. ವೃದ್ಧಾಪ್ಯದಿಂದಅಸ್ವಸ್ಥಗೊಂಡ ದೇಸಾಯಿ ಅವರಿಗೆ ತಿರುಪತಿಗೆ ಹೋಗಲು ಅಸಾಧ್ಯವಾಯಿತು. ಆಗ ಶ್ರೀನಿವಾಸನ ದರ್ಶನವಿಲ್ಲದೇ ಊಟ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಉಪವಾಸ ಕೈಗೊಂಡರು. ಅವರ ಕನಸಲ್ಲಿ ಬಂದ “ಶ್ರೀನಿವಾಸ’ - “ಭಕ್ತ ಶ್ರೇಷ್ಠನೇ ಚಿಂತೆ ಬಿಡು. ನಿನ್ನ ಈ ಗ್ರಾಮದ (ಸೊರಟೂರು) ಉತ್ತರ ದಿಕ್ಕಿಗೆ ಇರುವ ಗುಡ್ಡದ ಓರೆಯಲ್ಲಿ ಬಂದು ನಿಂತಿರುವೆ. ನನ್ನ ಮೇಲೆ ಹುತ್ತ ಬೆಳೆದಿದ್ದು, ದನಕಾಯುವರು ಅದನ್ನು ಕೊಟ್ಟಿಗೆ ಮಾಡಿದ್ದಾರೆ. ಆದರೂ ದಿನನಿತ್ಯ ನನ್ನ ಮೇಲೆ ಗೋಕ್ಷೀರಾಭಿಷೇಕ ಆಗುತ್ತಿದೆ. ಇದೇ ಸ್ಥಳದಲ್ಲಿ ನನಗೆ ಸೇವೆ ಸಲ್ಲಿಸು’ ಎಂದು ಸಂದೇಶವಿತ್ತನಂತೆ.
Advertisement
ಅದರಂತೆ, ತಿಪ್ಪೆಯ ಮೇಲಿನ ಹುತ್ತವನ್ನು ತೆಗೆಯುತ್ತಿದ್ದಂತೆ ಅದರ ಬುಡದಲ್ಲಿ ಚಿಕ್ಕದೊಂದು ಕರೀ ಬಂಡೆಗಲ್ಲಿನ ಮೇಲೆ ರೇಖಾ ರೂಪದಲ್ಲಿದ್ದ ಶ್ರೀ ವೆಂಕಟೇಶ್ವರನ ವಿಗ್ರಹ ಕಂಡು ದೇಸಾಯಿ ಹರ್ಷಗೊಂಡರು. ಆ ವರ್ಷ ನವರಾತ್ರಿ ಉತ್ಸವವನ್ನು ಅಲ್ಲಿಯೇ ಆಚರಿಸಿ, ಚಿಕ್ಕ ಗುಡಿಯನ್ನು ಕಟ್ಟಿಸಿ ಪೂಜೆ ಮಾಡಲು ಆರಂಭಿಸಿದರು. ನಿತ್ಯ ಪೂಜೆ, ಪುನಸ್ಕಾರಗಳು ನಡೆಯಲು, ದೇಸಾಯವರು ಕೂಡಲಿ ಶೃಂಗೇರಿ ಮಠಕ್ಕೆ ಇಡೀ ಗ್ರಾಮವನ್ನು ದಾನ ಮಾಡಿದರು. ಅದರಂತೆ ಶ್ರೀಮಠದವರು ಪೂಜೆಗೆ ಅರ್ಚಕರನ್ನು ನೇಮಿಸಿ, 1913ರಲ್ಲಿ ಶ್ರೀ ಲಕ್ಷ್ಮೀ-ವೆಂಕಟೇಶ ಟ್ರಸ್ಟ್ ರಚಿಸಿದರು. ವೆಂಕಪ್ಪಯ್ಯ ಶ್ರೀನಿವಾಸ ದೇಸಾಯಿ ಅವರನ್ನು ಟ್ರಸ್ಟ್‌ನ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.
ಲಕ್ಷ್ಮೀದೇವಿ-ಪದ್ಮಾವತಿಯೂ ಉದ್ಭವಬ್ರಹ್ಮಾನಂದ ಗುರುಗಳು ಗರ್ಭಗುಡಿ ಸುತ್ತಲೂ ಪೋಳಿಗಳನ್ನು ಕಟ್ಟಿಸಿದರು. ಗರ್ಭಗುಡಿಯಲ್ಲಿಯ ವೆಂಕಟಪತಿಯ ಎಡಗಡೆ ಮೂಲೆಯ ಕಂಬದ ಕೆಳಗಿದ್ದ ಬಂಡೆಗಲ್ಲಿನ ಮೇಲೆ ನಿತ್ಯವೂ ಭಕ್ತರು ಮತ್ತು ಅರ್ಚಕರು ತೆಂಗಿನಕಾಯಿ ಒಡೆಯುತ್ತಿದ್ದರು. ಒಂದು ದಿನ ಶ್ರೀಗಳಿಗೆ, ಕೇವಲ ಹೊರಗಿನ ವೈಭವ ಬೆಳೆಸುತ್ತಿರಿ. ಆದರೆ ನನ್ನ ತಲೆಯ ಮೇಲೆ ಮೂಲೆಕಂಬ ನಿಂತಿದೆ. ಮೊದಲು ಅದನ್ನು ತೆಗೆಯಿರಿ ಎಂದು ಲಕ್ಷ್ಮೀದೇವಿಯ ಆದೇಶವಾಯಿತಂತೆ. ಅದರಂತೆ ಗರ್ಭಗುಡಿ ವಿಸ್ತರಿಸಲಾಯಿತು. ಗರ್ಭಗುಡಿಯ ಅಡಿಪಾಯ ತೆಗೆಯುವಾಗ ಎರಡು ಮೂರ್ತಿಗಳು ಒಂದೇ ಬಂಡೆಗಲ್ಲಿನಲ್ಲಿರುವುದು ಕಂಡಿತು. ಅಂದಿನಿಂದ, ಅದರ ಮೇಲೆ ಕಾಯಿ ಒಡೆಯುವುದನ್ನು ನಿಲ್ಲಿಸಲಾಯಿತು. ಇಲ್ಲಿರುವ ವೆಂಕಟೇಶ ಶಂಖ, ಚಕ್ರ, ಗದೆ, ಪದ್ಮಗಳೊಂದಿಗೆ ನಿಂತಿದ್ದಾನೆ. ಎಡಗಡೆ ಮೂಲೆಯ ಭಾಗದಲ್ಲಿ ಪದ್ಮಾವತಿ ಮೂರ್ತಿ ಕಂಗೊಳಿಸುತ್ತವೆ. ವೆಂಕಟಾಪುರದ ದೇವಸ್ಥಾನದ ಆವರಣದಲ್ಲಿ ದತ್ತಾತ್ರೇಯ, ಹನುಮಂತ, ಗಣೇಶ, ನಾಗ ದೇವತೆ, ಕಾಶಿ ವಿಶ್ವನಾಥ ಮತ್ತು ವರಹದೇವರು ಮೂರ್ತಿಗಳಿವೆ. ದೇವಸ್ಥಾನದ ಎದುರು ದೀಪಸ್ತಂಭವಿದೆ. ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ಸಮಾಧಿಯೂ ಇಲ್ಲಿದೆ. ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯಾಹ್ನ 2ರ ವರೆಗೆ, ಮಧ್ಯಾಹ್ನ 4ರಿಂದ ರಾತ್ರಿ 9ರ ವರೆಗೆ ದೇವರ ದರ್ಶನ ಇರುತ್ತದೆ. ಮಧ್ಯಾಹ್ನ ನಿತ್ಯ ಅನ್ನಸಂತರ್ಪಣೆ ನಡೆಯುತ್ತದೆ. ಪ್ರತಿವರ್ಷ ನವರಾತ್ರಿ ಉತ್ಸವದ ಕೊನೆಯ ದಿನ ವಿಜಯದಶಮಿ ದಿನದಂದು ವೆಂಕಟೇಶ್ವರ ರಥೋತ್ಸವ ಜರಗುತ್ತದೆ. ಬಸ್ ಸೌಲಭ್ಯ
ಹುಬ್ಬಳ್ಳಿ (71 ಕಿ.ಮೀ.), ಗದಗ (23 ಕಿ.ಮೀ.) ಮತ್ತು ಶಿರಹಟ್ಟಿ (8 ಕಿ.ಮೀ.) ಬಸ್ ನಿಲ್ದಾಣದಿಂದ ಬಸ್‌ಗಳ ಸೌಲಭ್ಯ ಸೀಮಿತವಾಗಿ ಇರುವುದರಿಂದ ಸ್ವಂತ ವಾಹನದಲ್ಲಿ ವೆಂಕಟಾಪುರಕ್ಕೆ ತೆರಳುವುದು ಸೂಕ್ತ. ಇಲ್ಲಿ ಎಲ್ಲ ಮೂಲ ಸೌಲಭ್ಯ ಇರುವುದರಿಂದ ಕುಟುಂಬ ಸಮೇತ ಪ್ರವಾಸ ಕೈಗೊಳ್ಳಬಹುದು. ಶರಣು ಹುಬ್ಬಳ್ಳಿ