ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ ಧಿಕಾರವಧಿ ಪೂರ್ಣಗೊಳಿಸುವುದಿಲ್ಲ. ಐದಾರು ತಿಂಗಳ ಬಳಿಕ ಗಡ್ಡಧಾರಿಯೊಬ್ಬರು ಸಿಎಂ ಆಗಲಿದ್ದಾರೆ ಎಂದು ಮೈಲಾರದ ಮೈಲಾರಲಿಂಗೇಶ್ವರ ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ ಹೇಳಿರುವ ಭವಿಷ್ಯ ಶುದ್ಧ ಸುಳ್ಳು. ಅವರು ಪ್ರಚಾರದ ಗೀಳಿಗಾಗಿ ಸುಳ್ಳು ಹೇಳಿ ನಾಡಿನ ಭಕ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಮೈಲಾರದ ಗೊರವಯ್ಯ ರಾಮಪ್ಪಜ್ಜ ದೂರಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅ ಧಿಕಾರವಧಿ ಪೂರ್ಣಗೊಳಿಸುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಪ್ರಚಾರಕ್ಕಾಗಿ ಸುಳ್ಳು ಹೇಳುತ್ತಿರುವ ವೆಂಕಪ್ಪಯ್ಯ ಹೇಳಿಕೆಯನ್ನು ಯಾರೂ ನಂಬಬಾರದು. ಮೈಲಾರದಲ್ಲಿ ಮೈಲಾರಲಿಂಗೇಶ್ವರ ದೇವರ ಕಾರ್ಣಿಕವನ್ನು ವರ್ಷಕ್ಕೊಮ್ಮೆ ಗೊರಯ್ಯನವರು ನುಡಿಯುವುದು ಹಿಂದಿನಿಂದಲೂ ಬಂದಿರುವ ಪದ್ಧತಿ. 11 ದಿನ ಕಠಿಣ ಉಪವಾಸ ಮಾಡಿ ಭರತ ಹುಣ್ಣಿಮೆ ಸಂದರ್ಭದಲ್ಲಿ ರಥಸಪ್ತಮಿ ದಿನ ಮೈಲಾರಲಿಂಗೇಶ್ವರನ ಬಿಲ್‌ನ್ನು ಏರಿ ಮೈಲಾರಲಿಂಗೇಶ್ವರ ದೇವರು ಕೊಟ್ಟ ವಾಣಿಯನ್ನು ಕಾರ್ಣಿಕವಾಗಿ ನಾನೇ ನುಡಿಯುತ್ತೇನೆ. ನಾನು ಏನು ಕಾರ್ಣಿಕ ಹೇಳಿದ್ದೇನೆ ಎಂಬುದು ನನಗೇ ಗೊತ್ತಿರುವುದಿಲ್ಲ, ಅರ್ಧ ಗಂಟೆ ಬಳಿಕ ವಿಷಯ ತಿಳಿದುಕೊಳ್ಳುತ್ತೇನೆ. ಹೀಗಿರುವಾಗ ವೆಂಕಪ್ಪಯ್ಯ ಒಡೆಯರ ಅವರು “ನಾನು ನುಡಿಯನ್ನು ಹೇಳಿ ಕೊಟ್ಟ ಹಾಗೆ ಗೊರವಯ್ಯ ನುಡಿಯುತ್ತಾರೆ’ ಎಂದು ಹೇಳಿರುವುದೂ ಸಹ ಸುಳ್ಳು ಎಂದರು.
ಧರ್ಮದರ್ಶಿಯಾಗಿರುವ ವೆಂಕಪ್ಪ ಒಡೆಯರ ಅರ್ಚಕ ಸೇವೆ ಮಾಡುವುದನ್ನು ಬಿಟ್ಟು ಮೈಲಾರಲಿಂಗೇಶ್ವರ ಕ್ಷೇತ್ರದ ಹೆಸರು ಹೇಳಿಕೊಂಡು 3 ತಿಂಗಳು, 6 ತಿಂಗಳಿಗೊಮ್ಮೆ ವಾಣಿ ನುಡಿಯುತ್ತಿರುವುದು ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಇದನ್ನು ನಾನು ಹಾಗೂ ದೇವಸ್ಥಾನದ ಬಾಬುದಾರರು ಖಂಡಿಸುತ್ತೇವೆ. ಪ್ರತಿ ವರ್ಷ ನಡೆಯುವ ಕಾರ್ಣಿಕಕ್ಕೆ ಸಾಕಷ್ಟು ಮಹತ್ವವಿದೆ. ನಾಡಿನ ಜನತೆ ಕಾರ್ಣಿಕದ ಆಧಾರದ ಮೇಲೆ ಮಳೆ, ಬೆಳೆ, ರಾಜಕೀಯ ಲೆಕ್ಕಾಚಾರ ನಡೆಸುತ್ತಾರೆ. ಆದರೆ, ಇತ್ತೀಚೆಗೆ ವೆಂಕಪ್ಪಯ್ಯ ಒಡೆಯರ ಈ ಕಾರ್ಣಿಕಕ್ಕೆ ಹಾಗೂ ಮೈಲಾರಲಿಂಗೇಶ್ವರ ಕ್ಷೇತ್ರಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಕಾರಣ ಮುಜರಾಯಿ ಇಲಾಖೆಯವರು ವೆಂಕಪ್ಪಯ್ಯ ನೀಡುವ ಹೇಳಿಕೆಗಳು ಅ ಧಿಕೃತವಲ್ಲ ಎಂಬ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.
ದೇವಸ್ಥಾನದ ಬಾಬುದಾರ ನಿಂಗಪ್ಪ ಮಾತನಾಡಿ, ಪ್ರಚಾರಕ್ಕಾಗಿ ಸುಳ್ಳು ಹೇಳಿಕೆ ನೀಡುತ್ತಿರುವ ವೆಂಕಪ್ಪಯ್ಯ ಅವರಿಗೆ ಭವಿಷ್ಯ ಹೇಳುವ ಹುಚ್ಚು ಇದ್ದರೆ ಧರ್ಮದರ್ಶಿ ಹುದ್ದೆ ಬಿಟ್ಟು ಬೇರೆ ಕಡೆ ಭವಿಷ್ಯ ಹೇಳುವ ಬೋರ್ಡ್ ಹಾಕಿಕೊಂಡು ಭವಿಷ್ಯ ಹೇಳಲಿ. ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಹೀಗೆಯೇ ಸುಳ್ಳು ಹೇಳಿ ಬೆಳ್ಳಿ ಹೆಲಿಕಾಪ್ಟರ್ ತರಿಸಿಕೊಂಡಿದ್ದು, ಅದನ್ನು ತಮ್ಮ ಮನೆಗೆ ಒಯ್ದಿದ್ದರು. ಆಗ ಭಕ್ತರು ಪ್ರಶ್ನಿಸಿದ ಬಳಿಕ ಈಗ ತಂದು ದೇವಸ್ಥಾನದಲ್ಲಿ ಇಟ್ಟಿದ್ದಾರೆ. ಕಾರಣ ಇವರ ಸುಳ್ಳು ಹೇಳಿಕೆಗಳನ್ನು ಮುಜರಾಯಿ ಇಲಾಖೆ ಗಂಭೀರವಾಗಿ ಪರಿಗಣಿಸಿ ಅವರನ್ನು ದೇವಸ್ಥಾನದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದರು.