Advertisement

ಸಾಹಿತ್ಯಕ್ಕೆ ತಳುಕಿನ ವೆಂಕಣಯ್ಯ ಮನೆತನದ ಕೊಡುಗೆ

10:03 PM May 10, 2019 | Lakshmi GovindaRaj |

ಮೈಸೂರು: ತಳುಕಿನ ವೆಂಕಣಯ್ಯ ಮನೆತನ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ನಿತ್ಯೋತ್ಸವ ಕವಿ ಪ್ರೊ. ನಿಸಾರ್‌ ಅಹಮದ್‌ ಹೇಳಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಹೊಯ್ಸಳ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಪ್ರಕಾಶಕ ಟಿ.ಎಸ್‌. ಛಾಯಾಪತಿ ಅವರ 75ನೇ ಹುಟ್ಟುಹಬ್ಬ ಮತ್ತು ಅಭಿನಂದನ ಸಮಾರಂಭದಲ್ಲಿ ಮಾತನಾಡಿದರು.

ಸಾಹಿತ್ಯಾಭಿರುಚಿ ಎನ್ನುವುದು ಛಾಯಾಪತಿ ಅವರ ವಂಶಪಾರಂಪರ್ಯವಾಗಿ ಬೆಳೆದು ಬಂದಿದೆ. ಇವರ ಕುಟುಂಬದ ತರಾಸು, ತಳುಕಿನ ವೆಂಕಣಯ್ಯ, ಸೇರಿದಂತೆ ಹಲವರು ಕನ್ನಡ ಸಾಹಿತ್ಯಕ್ಕೆ ಮೌಲ್ಯಯುತ ಹಾಗೂ ಗಂಭೀರ ಕೃತಿಗಳನ್ನು ನೀಡಿದ್ದಾರೆ.

ಜೊತೆಗೆ ಛಾಯಾಪತಿಯವರು ಕೂಡ ತಮ್ಮ ತಂದೆಯಂತೆ ಪ್ರಕಾಶಕರಾಗಿ ಸಾವಿರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ ಎಂದು ಹೇಳಿದರು. ನಮ್ಮ ಸರಕಾರ ಯಾರ್ಯಾರಿಗೋ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತದೆ. ಆದರೆ ಉತ್ತಮ ಪ್ರಕಾಶಕರಾಗಿ ಸಾಹಿತ್ಯ ಕ್ಷೇತ್ರಕ್ಕೆ ದುಡಿಯುತ್ತಿರುವ ಟಿ.ಎಸ್‌. ಛಾಯಾಪತಿ ಅವರನ್ನು ಗುರುತಿಸಲಿಲ್ಲ.

ಇದು ಬೇಸರದ ಸಂಗತಿ. ರಾಜ್ಯೋತ್ಸವ ಪ್ರಶಸ್ತಿ ಬಂದರೆ ದೊಡ್ಡವರಾಗುತ್ತವೆ ಎಂಬುದಲ್ಲ, ಬದಲಿಗೆ ಅದೊಂದು ಸರಕಾರದ ಅಧೀಕೃತ ಮುದ್ರೆಯಷ್ಟೇ. ಮುಂದಾದರು ಕನ್ನಡ ನಾಡಲ್ಲಿ ಹಲವಾರು ಸಾಹಿತಿಗಳು, ಬರಹಗಗಾರರು, ಪ್ರಕಾಶಕರು ಇದ್ದಾರೆ ಅವರನ್ನು ಗುರುತಿಸುವ ಕೆಲಸವಾಗಲಿ ಎಂದರು.

Advertisement

ನನ್ನದು ಮತ್ತು ಟಿ.ಎನ್‌. ಛಾಯಾಪತಿ ಅವರದು 45 ವರ್ಷಗಳ ಸ್ನೇಹ. ನಮ್ಮಿಬ್ಬರ ಮಧ್ಯೆ ಹಲವು ಬಾರಿ ಮಾತಿನ ಚಕಮಕಿ ನಡೆದಿದೆ. ಆದರೂ ಅಣ್ಣನಂತೆ ನನ್ನನ್ನು ನೋಡಿಕೊಂಡಿದ್ದಾರೆ. ನನ್ನ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಲೇಖಕನನ್ನು ಔದಾರ್ಯದಿಂದ ನೋಡಿಕೊಳ್ಳುವ ಉದಾರ ಮನಸ್ಸು ಟಿ.ಎನ್‌. ಛಾಯಾಪತಿ ಅವರಲ್ಲಿ ಇದೆ. ಅವರು ಹಣ, ಆಸ್ತಿ, ಮನೆಗಳನ್ನು ಸಂಪಾದಿಸಿರುವುದಕ್ಕಿಂತ ಹೆಚ್ಚು ಸ್ನೇಹ ಸಂಪಾದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಟಿ.ಎಸ್‌. ಛಾಯಾಪತಿ ಶತೋತ್ತರ ಬದುಕಲಿ ಎಂದು ಹಾರೈಸಿದರು.

ಸ್ನೇಹಜೀವಿ: ಸಾಹಿತಿ ಎಚ್‌.ಎಸ್‌.ವೆಂಕಟೇಶ ಮೂರ್ತಿ ಮಾತನಾಡಿ, ಮೈಸೂರು-ಬೆಂಗಳೂರು ಅಕ್ಕಪಕ್ಕದಲ್ಲಿದ್ದರೂ ಸಂಸ್ಕೃತಿ ಸ್ವರೂಪ ಭಿನ್ನವಾಗಿದೆ. ಪುಸ್ತಕ ಪ್ರಕಾಶನದಲ್ಲಂತೂ ಈ ಮಾತು ನಿಜವಾಗಿದೆ. ಸಮಕಾಲೀನ ಸಾಹಿತ್ಯ ಬೆಂಗಳೂರಿನಲ್ಲಿ ಪ್ರಕಟವಾದರೆ, ಪ್ರಾಚೀನ, ಗಂಭೀರ, ಸಂಶೋಧನಾ ಗ್ರಂಥಗಳು ಮೈಸೂರಿನಲ್ಲಿ ಪ್ರಕಟವಾಗುತ್ತವೆ.

ಪ್ರಕಾಶಕರಿಗೆ ಒಂದು ಘನತೆ ತಂದುಕೊಟ್ಟ ಊರು ಮೈಸೂರು. ಟಿ.ಎನ್‌. ಛಾಯಾಪತಿ ಕಲಾವಂತಿಕೆ ಹಾಗೂ ಗುಣಮಟ್ಟದ ದೃಷ್ಟಿಯಿಂದ ಉತ್ತಮ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ನನ್ನ ಪಾಲಿಗೆ ಬರೀಯ ಪ್ರಕಾಶಕರಾಗಿ ಉಳಿಯದೆ, ಕುಟುಂಬದ ಹಿರಿಯರಾಗಿ ಉಳಿದ ಅಪ್ಪಟ್ಟ ಸ್ನೇಹಜೀವಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕವಿ ಪ್ರೊ.ಎಚ್‌.ಎಸ್‌. ವೆಂಕಟೇಶಮೂರ್ತಿ, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌, ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ ಸೇರಿದಂತೆ ಮತ್ತಿತರರು ಇದ್ದರು.

ಮೋದಿ ಮಾತನ್ನೇ ಖಂಡಿಸಿದ ಪ್ರಸಾದ್‌ ರಾಜಕೀಯ ಪ್ರೌಢಿಮೆ: ನನಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌ ಮೇಲೆ ಇದ್ದ ಅಭಿಮಾನ ಮತ್ತಷ್ಟು ಇಮ್ಮಡಿಯಾಗಿದೆ. ಕಾರಣ ಪ್ರಧಾನಿ ಮೋದಿಯವರು, ರಾಜೀವ್‌ ಗಾಂಧಿಯವರನ್ನು ಮಹಾಭ್ರಷ್ಟ ಎಂದು ಹೇಳಿದ್ದರು.

ಆದರೆ ಅದೇ ಪಕ್ಷದಲ್ಲಿದ್ದುಕೊಂಡು ಪ್ರಧಾನಿ ಮಾತನ್ನು ಪ್ರಸಾದ್‌ ನೇರವಾಗಿ ಖಂಡಿಸಿದರು. ಇದು ವ್ಯಕ್ತಿಯಲ್ಲಿರುವ ಬದ್ಧತೆ, ಪ್ರಾಮಾಣಿಕತೆ ಹಾಗೂ ರಾಜಕೀಯ ಪ್ರೌಢಿಮೆಯನ್ನು ತೋರಿಸುತ್ತದೆ. ರಾಜೀವ್‌ ಗಾಂಧಿ ಒಬ್ಬ ಪ್ರಬುದ್ಧ ರಾಜಕಾರಣಿಯಾಗಿದ್ದರು ಎಂದು ಕವಿ ಪ್ರೊ. ನಿಸಾರ್‌ ಅಹಮದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next