ಹೊಸದಿಲ್ಲಿ : ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ದೇಶದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ವಿರುದ್ದ ಮಹಾಭಿಯೋಗ ಕೈಗೊಳ್ಳಲು ನೀಡಿದ್ದ ನೊಟೀಸನ್ನು ಇಂದು ಸೋಮವಾರ ಬೆಳಗ್ಗೆ ತಿರಸ್ಕರಿಸಿದ್ದಾರೆ.
ರಾಜ್ಯ ಸಭೆಯ ಅಧ್ಯಕ್ಷರೂ ಆಗಿರುವ ವೆಂಕಯ್ಯ ನಾಯ್ಡು ಈ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಉನ್ನ ಕಾನೂನು ಮತ್ತು ಸಾಂವಿಧಾನಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು.
”ಮಹಾಭಿಯೋಗ ಗೊತ್ತುವಳಿಯಲ್ಲಿ ಮಾಡಲಾಗಿರುವ ಎಲ್ಲ ಐದು ಆರೋಪಗಳನ್ನು ಮತ್ತು ಅದರೊಂದಿಗಿನ ಎಲ್ಲ ದಾಖಲೆ ಪತ್ರಗಳನ್ನು ನಾನು ಕೂಲಂಕಷವಾಗಿ ಪರಿಶೀಲಿಸಿದ್ದೇನೆ. ಗೊತ್ತುವಳಿಯಲ್ಲಿ ಮಂಡಿಸಲಾಗಿರುವ ನಿಜಾಂಶಗಳು ಸತ್ವಪೂರ್ಣವಾಗಿಲ್ಲದಿರುವುದನ್ನು ಕಂಡುಕೊಂಡಿದ್ದೇನೆ. ಗೊತ್ತುವಳಿಯಲ್ಲಿ ಮಾಡಲಾಗಿರುವ ಆರೋಪಗಳಿಂದ ಸಿಜೆಐ ಅವರು ದುವರ್ತನೆಯ ಅಪರಾಧ ಎಸಗಿದ್ದಾರೆ ಎನ್ನುವುದನ್ನು ಸಾಬೀತು ಮಾಡಲು ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಯಾವುದೇ ನ್ಯಾಯೋಚಿತ ಮನಸ್ಸು ಬರಲು ಸಾಧ್ಯವಿದೆ” ಎಂದು ನಾಯ್ಡು ಹೇಳಿದ್ದಾರೆ.
ಸಿಜೆಐ ವಿರುದ್ಧದ ಮಹಾಭಿಯೋಗದ ಗೊತ್ತುವಳಿ ನ್ಯಾಯಾಂಗ ಪರೀಕ್ಷೆಯಲ್ಲಿ ಪಾಸಾದೀತೇ ಎಂಬ ಬಗ್ಗೆ ನಾಯ್ಡು ಅವರು ಕಾನೂನು ಪರಿಣತರೊಂದಿಗೆ ಸಮಾಲೋಚನೆ ನಡೆಸಿದ ಒಂದು ದಿನದ ತರುವಾಯ ಉಪ ರಾಷ್ಟ್ರಪತಿ ನಾಯ್ಡು ಅವರು ಮಹಾ ಅಭಿಯೋಗದ ಗೊತ್ತುವಳಿಯನ್ನು ತಿರಸ್ಕರಿಸಿದ್ದಾರೆ.