Advertisement

ಮಹಾಮುಖಭಂಗ : ಕಾಂಗ್ರೆಸ್‌ ಸಹಿತ ವಿಪಕ್ಷಗಳಿಗೆ ಭಾರೀ ಹಿನ್ನಡೆ

08:51 AM Apr 24, 2018 | Team Udayavani |

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ವಿರುದ್ಧದ ಕಾಂಗ್ರೆಸ್‌ ಸಹಿತ ಏಳು ವಿಪಕ್ಷಗಳ ಮಹಾಭಿಯೋಗ ಪ್ರಸ್ತಾವಕ್ಕೆ ಭಾರೀ ಮುಖಭಂಗವಾಗಿದೆ. ರಾಜ್ಯಸಭೆ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಹಾಭಿಯೋಗ ಪ್ರಸ್ತಾವವನ್ನು ಸೋಮವಾರ ತಿರಸ್ಕರಿಸಿದ್ದಾರೆ. ಹೈದರಾಬಾದ್‌ನಿಂದ ಪ್ರವಾಸ ಮೊಟಕುಗೊಳಿಸಿ ರವಿವಾರವೇ ದಿಲ್ಲಿಗೆ ಧಾವಿಸಿದ ನಾಯ್ಡು, ಕಾನೂನು ತಜ್ಞರು ಹಾಗೂ ಇತರ ಪರಿಣತರ ಜತೆ ಚರ್ಚೆ ನಡೆಸಿ ನೋಟಿಸ್‌ನಲ್ಲಿ ಉಲ್ಲೇಖೀಸಿದ ಆರೋಪಗಳು ಮಹಾಭಿಯೋಗಗೊಳಿಸುವಷ್ಟು ಗಂಭೀರವಾದದ್ದಲ್ಲ ಮತ್ತು ನೋಟಿಸ್‌ ನೀಡಿದ ಅನಂತರ ಸಂಸದರು ಪತ್ರಿಕಾಗೋಷ್ಠಿ ನಡೆಸಿ ವಿವರ ಬಹಿರಂಗಗೊಳಿಸಿರುವುದು ಸಂಸದೀಯ ನಡಾವಳಿಗಳ ಉಲ್ಲಂಘನೆಯಾಗಿದೆ ಎಂಬ ಕಾರಣ ನೀಡಿ ತಿರಸ್ಕರಿಸಿದ್ದಾರೆ.

Advertisement

ಸಭಾಪತಿ ವೆಂಕಯ್ಯ ನಾಯ್ಡು ಅವರ ಈ ನಿರ್ಧಾರವನ್ನು ಬಿಜೆಪಿ ಹಾಗೂ ಪ್ರಮುಖ ಕಾನೂನು ತಜ್ಞರು ಸ್ವಾಗತಿಸಿದ್ದರೆ, ಕಾಂಗ್ರೆಸ್‌ ತಿರಸ್ಕರಿಸಿದೆ. ಜತೆಗೆ ನಾಯ್ಡು ಅವರ ನಿರ್ಧಾರ ವಿರೋಧಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗುವುದಾಗಿ ಹೇಳಿದೆ.

ಸುಪ್ರೀಂ ಕೋರ್ಟ್‌ಗೆ ಕಾಂಗ್ರೆಸ್‌ ಮೊರೆ
ಮಹಾಭಿಯೋಗ ನೋಟಿಸ್‌ ತಿರಸ್ಕಾರಗೊಂಡ ಬಳಿಕ ಮಾತನಾಡಿದ ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌, ಇದರ ವಿರುದ್ಧ ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುತ್ತೇವೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಸಿಜೆಐ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಆಗ್ರಹಿಸುತ್ತೇವೆ ಎಂದಿದ್ದಾರೆ. ಈ ಅರ್ಜಿಯನ್ನು ಲಿಸ್ಟ್‌ ಮಾಡುವುದು ಸಹಿತ ಯಾವುದೇ ಕ್ರಮವನ್ನೂ ಅವರು ಮಾಡಬಾರದು. ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಸಿಬಲ್‌ ಹೇಳಿದ್ದಾರೆ.

ಕಲಾಪ ಆರಂಭಕ್ಕೂ ಮುನ್ನ ಚರ್ಚೆ
ಸೋಮವಾರ ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಸುಪ್ರೀಂ ಕೋರ್ಟ್‌ ಕಲಾಪಗಳು 15 ನಿಮಿಷ ತಡವಾಗಿ ಶುರುವಾಗಿವೆ. ಕಾಂಗ್ರೆಸ್‌ ಸಹಿತ ಏಳು ವಿಪಕ್ಷಗಳು ಸಲ್ಲಿಸಿದ್ದ ಮಹಾಭಿಯೋಗ ಪ್ರಸ್ತಾವ ಸಂಬಂಧ ಸಿಜೆಐ ದೀಪಕ್‌ ಮಿಶ್ರಾ ಅವರು, ಸಹೋದ್ಯೋಗಿ ಜಡ್ಜ್ ಗಳ ಜತೆ ಚರ್ಚೆ ನಡೆಸಿ 10.45ರ ಹೊತ್ತಿಗೆ ನ್ಯಾ| ಎ.ಎಂ.ಖಾನ್ವಿಲ್ಕರ್‌ ಮತ್ತು ನ್ಯಾ| ಡಿ.ವೈ. ಚಂದ್ರಚೂಡ್‌ ಅವರೊಂದಿಗೆ ಕೋರ್ಟ್‌ ಹಾಲ್‌ ಪ್ರವೇಶಿಸಿದರು. ಆಗ ಅಲ್ಲೇ ಕಾಯುತ್ತಿದ್ದ ಬಿಜೆಪಿ ನಾಯಕ ಸುಬ್ರಹ್ಮಣ್ಯನ್‌ ಸ್ವಾಮಿ ಅವರು, ಅಯೋಧ್ಯೆ ಕೇಸನ್ನು ತುರ್ತಾಗಿ ವಿಚಾರಣೆಗೆ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಆಗ ಸಿಜೆಐ ದೀಪಕ್‌ ಮಿಶ್ರಾ ಅವರು ನಗುತ್ತಲೇ ಸಾಧ್ಯವಿಲ್ಲ ಎಂದು ಹೇಳಿದರು.

ಜನರಿಂದ ಪದೇ ಪದೆ ಸೋಲುತ್ತಲೇ ಬಂದಿರುವ ಕಾಂಗ್ರೆಸ್‌, ಅರೆಬೆಂದ, ತಪ್ಪಾದ ಮತ್ತು ಪ್ರಾಯೋಜಿತ ಅರ್ಜಿ ಮೂಲಕ, ಕೋರ್ಟ್‌ ಹಾಲ್‌ಗ‌ಳ ಮೂಲಕ ದೇಶದ ಆಳ್ವಿಕೆ ನಡೆಸಲು ಸಾಧ್ಯವಿಲ್ಲ.
– ರವಿಶಂಕರ್‌ ಪ್ರಸಾದ್‌, ಕೇಂದ್ರ ಕಾನೂನು ಸಚಿವ

Advertisement

ನಾಯ್ಡು ಅವರು ಕಾನೂನು ತಜ್ಞರ ಜತೆ ಸಮಾಲೋಚಿಸಿ, ಇದು ಮಹಾಭಿಯೋಗಕ್ಕೆ ತಕ್ಕುದಾದ ಪ್ರಕರಣವಲ್ಲ ಎಂಬ ಕಾರಣದಿಂದಾಗಿ ತಿರಸ್ಕರಿಸಿದ್ದಾರೆ.
– ಸೋಲಿ ಸೊರಾಬ್ಜಿ, ಮಾಜಿ ಅಟಾರ್ನಿ ಜನರಲ್‌

ಸಭಾಪತಿ ಅವರಿಗೆ ಮಾತ್ರ ಈ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿದೆ ಮತ್ತು ನನ್ನ ಪ್ರಕಾರ ಅವರ ನಿರ್ಧಾರ ಸರಿ. ಮಹಾಭಿಯೋಗಕ್ಕಾಗಿ ನೀಡಲಾಗಿರುವ ಪ್ರಸ್ತಾವದಲ್ಲಿ ಸರಿಯಾದ ಆಧಾರಗಳೇ ಇಲ್ಲ.
– ಫಾಲಿ ನಾರೀಮನ್‌, ಸುಪ್ರೀಂ ಹಿರಿಯ ವಕೀಲ

Advertisement

Udayavani is now on Telegram. Click here to join our channel and stay updated with the latest news.

Next