ನವದೆಹಲಿ: ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸಮನ್ಸ್ ಕಳುಹಿಸುವುದು ಎಷ್ಟು ಸಮಂಜಸ ಎಂದು ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಸಭಾಧ್ಯಕ್ಷ ವೆಂಕಯ್ಯನಾಯ್ಡು ಅವರು ಶುಕ್ರವಾರ ಸ್ಪಷ್ಟನೆ ನೀಡುವ ಮೂಲಕ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆಂದು ವರದಿ ತಿಳಿಸಿದೆ.
ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದ್ದೇನು?
ಲೋಕಸಭೆಯಾಗಲಿ, ರಾಜ್ಯಸಭೆಯಾಗಲಿ ಅಧಿವೇಶನ ನಡೆಯುತ್ತಿದ್ದರು ಕೂಡಾ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಸಲ್ಪಡುವ ವಿಚಾರದಲ್ಲಿ ಸಂಸದರಿಗೆ ಯಾವುದೇ ವಿಶೇಷ ವಿನಾಯ್ತಿ ಇಲ್ಲ. ಅಷ್ಟೇ ಅಲ್ಲ ತನಿಖಾ ಸಂಸ್ಥೆಗಳು ಜಾರಿಗೊಳಿಸುವ ಸಮನ್ಸ್ ಅನ್ನು ಕೂಡಾ ನಿರ್ಲಕ್ಷಿಸುವಂತಿಲ್ಲ ಎಂದು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಸ್ಪಷ್ಟನೆ ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ.
“ಗುರುವಾರ ಮಧ್ಯಾಹ್ನ 12.30ಕ್ಕೆ ವಿಚಾರಣೆಗೆ ಹಾಜರಾಗಿ ಎಂದು ಜಾರಿ ನಿರ್ದೇಶನಾಲಯ ಕಳುಹಿಸಿರುವ ಸಮನ್ಸ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಸತ್ ಅಧಿವೇಶನ ನಡೆಯುತ್ತಿದೆ. ನಾನು ಇಲ್ಲಿ ಪ್ರತಿಪಕ್ಷ ನಾಯಕ. ಅಧಿವೇಶನ ನಡೆಯುತ್ತಿರುವಾಗ ಸಮನ್ಸ್ ಕಳುಹಿಸುವುದು ಎಷ್ಟು ಸರಿ? ನಾನು ಕಾನೂನು ಪಾಲಿಸುವಾತ. ನಾನು ವಿಚಾರಣೆಗೆ ಹಾಜರಾಗುತ್ತೇನೆ. ಆದರೆ ಇ.ಡಿ ಈ ಸಮಯದಲ್ಲಿ ಸಮನ್ಸ್ ಕೊಡುವುದು ನ್ಯಾಯ ಸಮ್ಮತವೇ? ಎಂದು ಪ್ರಶ್ನಿಸಿದ್ದರು.
ಸಂಸತ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ತನಿಖಾ ಸಂಸ್ಥೆಗಳಿಂದ ತಮಗೆ ವಿನಾಯ್ತಿ ಇದೆ ಎಂಬ ತಪ್ಪು ಕಲ್ಪನೆ ಸಂಸದರಲ್ಲಿದೆ ಎಂದು ವೆಂಕಯ್ಯ ನಾಯ್ಡು ಅವರು ಪ್ರತಿಭಟನಾ ನಿರತ ಸಂಸದರನ್ನು ಉದ್ದೇಶಿಸಿ ಹೇಳಿದ್ದರು.
ಸಂವಿಧಾನದ ಕಲಂ 105ರ ಪ್ರಕಾರ ಲೋಕಸಭಾ ಸದಸ್ಯರು ಕೆಲವೊಂದು ವಿನಾಯ್ತಿ ಹೊಂದಿದ್ದಾರೆ. ಹೀಗಾಗಿ ನೀವು (ಸಂಸದರು) ಯಾವುದೇ ಅಡೆತಡೆ ಇಲ್ಲದೆ ನಿಮ್ಮ ಕಾರ್ಯವನ್ನು ನಿರ್ವಹಿಸಬಹುದಾಗಿದೆ ಎಂದು ತಿಳಿಸಿದೆ.
“ಸಿವಿಲ್ ಪ್ರಕರಣಗಳಲ್ಲಿ ಅಧಿವೇಶನ ಆರಂಭವಾಗುವ 40 ದಿನ ಮೊದಲು ಅಥವಾ ಸಮಿತಿಯ ಸಭೆಯ ಮುನ್ನ ಅಥವಾ ಕಲಾಪ ಆರಂಭಗೊಂಡ ನಂತರ ಲೋಕಸಭಾ ಸದಸ್ಯರನ್ನು ಬಂಧಿಸುವಂತಿಲ್ಲ ಎಂಬ ವಿನಾಯ್ತಿ ಇದೆ. ಆದರೆ ಈ ವಿನಾಯ್ತಿ ಸೆಕ್ಷನ್ 135 ಎ ಅಡಿಯಲ್ಲಿ ಈಗಾಗಲೇ ಅಳವಡಿಸಲಾಗಿದೆ ಎಂದು ನಾಯ್ಡು ವಿವರಣೆ ನೀಡಿದ್ದಾರೆ.
ಸಿವಿಲ್ ಪ್ರಕರಣದಲ್ಲಿ ವಿನಾಯ್ತಿ ಇದ್ದರೂ ಕೂಡಾ ಕ್ರಿಮಿನಲ್ ಪ್ರಕರಣಗಳಲ್ಲಿ ಲೋಕಸಭಾ ಸದಸ್ಯರಿಗೆ ಜನಸಾಮಾನ್ಯರಿಗೆ ಅನ್ವಯವಾಗುವ ರೀತಿಯಲ್ಲೇ ಕಾನೂನು ಅನ್ವಯವಾಗುತ್ತದೆ. ಅಂದರೆ ಕ್ರಿಮಿನಲ್ ಪ್ರಕರಣಗಳಲ್ಲಿ ಅಧಿವೇಶನ ನಡೆಯುತ್ತಿದ್ದರೂ ಕೂಡಾ ಲೋಕಸಭಾ ಸದಸ್ಯರಾದವರಿಗೆ ಯಾವುದೇ ವಿಶೇಷ ವಿನಾಯ್ತಿ ಇಲ್ಲ ಎಂದು ನಾಯ್ಡು ಸ್ಪಷ್ಟನೆ ನೀಡಿರುವುದಾಗಿ ವರದಿ ತಿಳಿಸಿದೆ.