Advertisement

ಮನುಕುಲ ಕಲ್ಯಾಣಕ್ಕಾಗಿ ವೇಮನರ ಸಮದರ್ಶಿತ್ವ

05:40 PM Jan 19, 2022 | Team Udayavani |

ಭರತ ಭೂಮಿಯಲ್ಲಿ ಜೀವನ ಮೌಲ್ಯಗಳು ‌ ಕುಸಿತ ಕಂಡಾಗಲೆಲ್ಲ ಸತು³ರುಷರು ಜನಿಸಿದರು. ಭಕ್ತಿ, ಜ್ಞಾನ, ಕರ್ಮ ಮಾರ್ಗಗಳ ಮೂಲಕ ಜೀವನ ಮೌಲ್ಯಗಳನ್ನು ಮತ್ತೆ ಪ್ರತಿಪಾದಿಸಿದರು, ಪ್ರಚುರಪಡಿಸಿದರು, ಪ್ರತಿಷ್ಠಾಪಿಸಿದರು. 15ನೇ ಶತಮಾನದಲ್ಲಿ ಈ ಕಾರ್ಯವನ್ನು ಬಹಳ ಸಮರ್ಥವಾಗಿ ಮಾಡಿದವರು ಮಹಾಯೋಗಿ ಶ್ರೀ ವೇಮನರು.

Advertisement

ವೇಮನರು ದೇಶ ಕಂಡ ಒಬ್ಬ ಉದಾತ್ತ ಯೋಗಿ, ಮಹಾನ್‌ ದಾರ್ಶನಿಕ, ತತ್ವದರ್ಶಕ, ಸಮಾಜ ಸುಧಾರಕ ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಕ. ಕನ್ನಡದ ಸರ್ವಜ್ಞನಂತೆ, ತಮಿಳಿನ ತಿರುವಳ್ಳುವರ್‌ರಂತೆ ವೇಮನರು ಸ್ವಾನುಭವ ಸಾರ್ವಭೌಮರು. ಇವರು ಮೂಲತಃ ತೆಲುಗುನಾಡಿನವರಾದ್ದರಿಂದ ತಮ್ಮ ಮಾತೃಭಾಷೆಯಲ್ಲಿಯೇ ಸ್ವಾನುಭವ ಸಾಹಿತ್ಯ ರಚಿಸಿದ್ದಾರೆ. ಆಟವೆಲದಿ ಛಂದಸ್ಸಿನಲ್ಲಿ, ಸುಲಭ ಶೈಲಿಯಲ್ಲಿ, ಜನರಾಡುವ ಭಾಷೆಯಲ್ಲಿ ಒಟ್ಟು ಹದಿನೈದು ಸಾವಿರ ಪದ್ಯಗಳನ್ನು ರಚಿಸಿದ ಬಗ್ಗೆ ಅವರೇ ಒಂದೆಡೆ ಹೀಗೆ ಬರೆದಿದ್ದಾರೆ.

ಶ್ರೀಕರ ಶಿವತತ್ವ ಶೀಲನೆ; ವೇಮನರ ಹದಿನೈದು

ಸಾವಿರ ಪದ್ಯಗಳನು,

ಲೋಕದಲಿ ಪಠಿಸೆ, ಪ್ರಾಕೃತರು ದಡ ಸೇರ್ವರು.

Advertisement

ವಿಶ್ವದಾಭಿರಾಮ ಕೇಳು ವೇಮ.

ವೇಮನರು ತಮ್ಮ ಪದ್ಯಗಳಲ್ಲಿ ಗೃಹಸಂಸಾರದಿಂದ ಹಿಡಿದು ವಿಶ್ವರಹಸ್ಯದವರೆಗೆ ಎಲ್ಲ ವಿಷಯಗಳ ಬಗೆಗೆ ಎಂದೆಂದಿಗೂ ಮರೆಯಲಾರದಂಥ ಸುವರ್ಣ ಸೂತ್ರಗಳನ್ನು ಹೇಳಿರುವರು. ಅವರ ಬರಹವು ಲೌಕಿಕವಿದ್ದಲ್ಲಿ ಅಲ್ಲಿ ನೀತಿಪರವಿದೆ. ಆಧ್ಯಾತ್ಮಿಕವಿದ್ದಲ್ಲಿ ದಾರ್ಶನಿಕವಿದೆ.

ವೇಮನರು ನೀತಿ ಧರ್ಮಗಳ ಬೋಧನೆ ಮೂಲಕ ಮಾನವನಲ್ಲಿ ಜನ್ಮಜನ್ಮಾಂತರಗಳಿಂದ ಅಂಟಿಕೊಂಡಿರುವ ಅಜ್ಞಾನದ ಮೋಡ ಸರಿಸಿ ಬೆಳಕಿನ ಕಡೆ ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ. ಹೀಗಾಗಿ ವೇಮನರ ಮಾತುಗಳು ಬರಿ ಮಾತುಗಳಲ್ಲ. ಅವು ವೇದವೇ ಆಗಿವೆ, ವೇದಾಂತವೇ ಆಗಿವೆ. ನಾವು ಅವರ ಮಾತುಗಳನ್ನು ವೇದ-ಉಪನಿಷತ್ತುಗಳ ಜೊತೆಜೊತೆಯಲ್ಲಿ ನೋಡಿದಾಗ ನಮಗೆ ವೇಮನರ ಮಾತುಗಳೆಲ್ಲ ವೇದವಾಖ್ಯಗಳೇ ಎಂಬ ಅರಿವಾಗುತ್ತದೆ.

ವೇಮನರು ಗುಣಕ್ಕೆ ಪ್ರಾಧಾನ್ಯತೆಯನ್ನಿತ್ತರು. ನೀತಿಗೆ ಪಟ್ಟ ಕಟ್ಟಿದರು. ಹೃದಯ ಪರಿಶುದ್ಧಿ, ನೀತಿಯ ನೆಲಗಟ್ಟಿನ ಮೇಲೆ ನಿಂತ ಜೀವನ, ಎಲ್ಲರೊಡನೆ ಅವೈರ, ಸರ್ವರೊಡನೆ ಮೈತ್ರಿ, ಸಕಲ ಜೀವಿಗಳಲ್ಲಿ ಕರುಣೆ, ಎಲ್ಲ ಕೃತಿಗಳಲ್ಲಿ ಅಹಿಂಸೆ, ಎಲ್ಲ ಕಾಲದಲ್ಲಿಯೂ ಸತ್ಯ ಇವು ವೇಮನರು ಎತ್ತಿಹಿಡಿದ ತತ್ವಗಳು. ಮನುಕುಲದ ಅಸ್ತಿತ್ವಕ್ಕೆ ಮತ್ತು ಕಲ್ಯಾಣಕ್ಕೆ ವೇಮನರು ಒಂದು ಶ್ರೇಷ್ಠ ಮಂತ್ರವನ್ನು, ಸೂತ್ರವನ್ನು ಜಗದ ಜನರಿಗೆ ಬಹಳ ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದಾರೆ. ಅದುವೇ “ಸಮದರ್ಶಿತ್ವ’. ಸಕಲ ಜೀವಿಗಳನ್ನು ಸಮಾನವಾಗಿ ಕಾಣಬೇಕು.

ಸಕಲ ಭೂತಗಳನ್ನೂ ಸಮಾನ ದೃಷ್ಟಿಯಿಂದ ನೋಡಬೇಕು. “ಸಮತ್ವಂ ಯೋಗಮುಚ್ಯತೇ’ ಸಮತ್ವವೇ ಯೋಗವೆನಿಸುತ್ತದೆ. ಯಾರಲ್ಲಿ ಎಲ್ಲರನ್ನು ಸಮನಾಗಿ ನೋಡುವ ಯೋಗ್ಯತೆ ಇದೆಯೋ ಅವನೇ ನಿಜವಾದ ಯೋಗಿ ಎಂದು ಹೇಳಿದ್ದಾರೆ ವೇಮನರು.

ವೇಮನರ ಈ ಸಮದರ್ಶಿತ್ವದಲ್ಲಿ “ಪರಿಸರ ಸಮತೋಲನ’ ತತ್ವ ಅಡಗಿದೆ. ಎಲ್ಲ ಜೀವರಾಶಿಗಳು ಒಂದು ಮತ್ತೂಂದನ್ನು ಅವಲಂಬಿಸಿವೆ. ಇಲ್ಲಿ ಯಾವುದೇ ಜೀವಿ ಸ್ವಾವಲಂಬಿಯಲ್ಲ. ಸರಪಳಿಯಂತೆ ಸಂಬಂಧ ಹೆಣೆದುಕೊಂಡಿವೆ. ಇದನ್ನೇ “ಪರಿಸರ ಸಮತೋಲನ’ ಎಂದು ಕರೆಯುತ್ತೇವೆ. ಮಾನವ ತನ್ನ ಅಜ್ಞಾನ, ಅರಿವಿನ ಕೊರತೆಯಿಂದಾಗಿ, ಮಿತಿಮೀರಿದ ಸ್ವಾರ್ಥದಿಂದಾಗಿ ಪರಿಸರವನ್ನು ಯಥೇತ್ಛವಾಗಿ ನಾಶ ಮಾಡುತ್ತಿದ್ದಾನೆ. ಅನೇಕ ಜೀವ ಪ್ರಬೇಧಗಳು ಅಳುವಿನಂಚಿನಲ್ಲಿವೆ. ಹೀಗಾಗಿ, ಸರಪಳಿಯಂತೆ ಹೆಣೆದುಕೊಂಡಿರುವ
ಜೀವಿಗಳ ಸಂಬಂಧದ ಕೊಂಡಿ ಕಳಚಿದೆ.

ಜೀವ ಸಂಕುಲದ ಸಂರಕ್ಷಣೆಯಾದಾಗ ತನ್ನ ಸಂರಕ್ಷಣೆಯಾಗುತ್ತದೆ ಎಂಬ ಸಾಮಾನ್ಯ ಅರಿವೂ ಇನ್ನು ಮೂಡುತ್ತಿಲ್ಲ. ಹೀಗಾಗಿ ಕೊರೊನದಂಥ ಮಹಾಮಾರಿಗೆ ಹಾಗೂ ಪ್ರಕೃತಿ ವಿಕೋಪಗಳಿಗೆ ಮಾನವ ಬಲಿಯಾಗುತ್ತಿದ್ದಾನೆ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ಇಂಥ ಅನೇಕ ಮಹಾಮಾರಿಗಳಿಗೆ ಮತ್ತು ವಿಕೋಪಗಳಿಗೆ ಬಲಿಯಾಗಬೇಕಾಗುತ್ತದೆ. ಹೀಗಾಗಿ ನಾವು ಸಮದರ್ಶಿತ್ವದ ಮಹತ್ವ ಮತ್ತು ಅವಶ್ಯಕತೆ ಅರಿತುಕೊಳ್ಳಬೇಕಾಗಿದೆ.

ಈ ಏಕದೇವನ ಭಾವವನ್ನು ವೇಮನ ಯೋಗಿಗಳು ಹೀಗೆ ಹೇಳಿದ್ದಾರೆ,

“ಧ್ವಜವನೆತ್ತಿ ಸಾರು ದೇವನೊಬ್ಬನೆಂದು

ನಿಜವಿದಿಹುದು ಒಳಗೆ ನಿಂತಿರುವನು

ಚೊಕ್ಕನೋಡಲವಣ ಸಂತಸದಿ ಮುಳುಗುವೆ,

ವಿಶ್ವದಾಭಿರಾಮ ಕೇಳು ವೇಮ’

ಸಕಲ ಜೀವಿಗಳಲ್ಲಿ ಪರತತ್ವವನ್ನು ಕಾಣುವ ಈ ಮೌಲ್ಯವನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಮೇಲು-ಕೀಳು, ಉಚ್ಚ-ನೀಚ, ಕರಿಯ-ಬಿಳಿಯ, ಹೆಣ್ಣು-ಗಂಡು ಎಂಬ ಬೇಧ ಮಾಯವಾಗಿ ಸಮಾನತೆಯ ಸಮಾಜ ಕಟ್ಟಲು ಅನುಕೂಲವಾಗುವುದು.

ಇಂದು ಎಲ್ಲೆಡೆ ಭಿನ್ನತೆಯ, ತಾರತಮ್ಯದ ತಾಂಡವ ನೃತ್ಯ ನಡೆದಿದೆ. ಜಾತಿಯ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ, ಪ್ರಾಂತ್ಯದ ಹೆಸರಿನಲ್ಲಿ ಪರಸ್ಪರ ಅವಿಶ್ವಾಸ, ದ್ವೇಷ, ಅಸೂಯೆ ಬಿತ್ತುವ ಕೆಲಸ ನಡೆದಿದೆ. ಇದು ನಿಲ್ಲಬೇಕು. ಮನುಕುಲದ ಕಲ್ಯಾಣ ದೃಷ್ಟಿಯಿಂದ ವೇಮನರ ಸಮದೃಷ್ಟಿ ಸೂತ್ರವನ್ನು ಪಾಲಿಸುವುದು ಅತ್ಯಗತ್ಯವಾಗಿದೆ. ನಾವೆಲ್ಲ ಒಂದೇ ಎಂಬ ಭಾವ ಬೆಳೆಸಿಕೊಳ್ಳಬೇಕಿದೆ.
ಗೋವಿಂದಪ್ಪ ಬ. ಗೌಡಪ್ಪಗೋಳ,
ನಿವೃತ್ತ ಉಪ ಆಯುಕ್ತರು,
ವಾಣಿಜ್ಯ ತೆರಿಗೆಗಳ ಇಲಾಖೆ, ಹುಬ್ಬಳ್ಳಿ

ಜ. 19 ಮಹಾಯೋಗಿ ವೇಮನರ 610ನೇ ಜಯಂತಿ. ವೇಮನರು ಜಗತ್ತಿಗೆ ಸಾರಿದ ಸಂದೇಶ, ತತ್ವಜ್ಞಾನ ಮತ್ತು ಜಾಗೃತಿಯನ್ನು ಜನರಲ್ಲಿ ಮೂಡಿಸಬೇಕು, ಶಾಂತಿ ಸೌಹಾರ್ದತೆಯ ಪರಿಮಳ ಪಸರಿಸುವಂತಾಗಬೇಕು, ತನ್ಮೂಲಕ ಪರಸ್ಪರ ಸುಖ-ದುಃಖಗಳಿಗೆ ಸ್ಪಂದನೆ ನೀಡುವ ಸುಸಂಸ್ಕೃತ ಸಮಾಜ ನಮ್ಮದಾಗಬೇಕು ಎಂದು ನಾಡಿನಾದ್ಯಂತ ವೇಮನರ ಜಯಂತಿಯನ್ನು ಭಕ್ತಿ ಭಾವದಿಂದ, ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next