ದೊಮ್ಮಸಂದ್ರ: ಇನ್ನುಮುಂದೆ ಸರ್ಕಾರದಿಂದಲೇ ವೇಮನ ಜಯಂತಿ ಆಚರಿಸುವುದಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು. ದೊಮ್ಮಸಂದ್ರ ರೆಡ್ಡಿ ಜನಸಂಘ ಶನಿವಾರ ಹಮ್ಮಿಕೊಂಡಿದ್ದ ವೇಮನ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ರೆಡ್ಡಿ ಸಮುದಾಯ ಬೆಳವಣಿಗೆಗೆ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮ ಪ್ರತಿಷ್ಠಾನಕ್ಕೆ ತಲಾ 1 ಕೋಟಿ ರೂ. ನೀಡುವ ಜತೆಗೆ ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.
ಸಮಾರಮಭದ ಸಾನ್ನಿಧ್ಯ ವಹಿಸಿದ್ದ ಶ್ರೀ ವೇಮನಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲ ಜಾತಿ, ಧರ್ಮದವರೂ ಧಾರ್ಮಿಕ ಚಿಂತನೆ ಜತೆಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗುವ ಮೂಲಕ ಆರ್ಥಿಕ ದುರ್ಬಲರಿಗೆ ನೆರವಾಗಬೇಕು ಎಂದು ಕರೆ ನೀಡಿದರು.
ಓಂಕಾರ ಆಶ್ರಮದ ಶ್ರೀ ಶಂಕರಾನಂದ ಸ್ವಾಮೀಜಿ ಉಪನ್ಯಾಸ ನೀಡಿದರು. ಇದೇ ವೇಳೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಶ್ರೀ ವೇಮನಾನಂದ ಸ್ವಾಮೀಜಿ ಸನ್ಮಾನಿಸಿದರು. ದೊಮ್ಮಸಂದ್ರ ಗ್ರಾ.ಪಂ ಅಧ್ಯಕ್ಷ ಉಮೇಶಬಾಬು, ಗ್ರಾ.ಪಂ ಸದಸ್ಯರಾದ ಧನರಾಜು, ಸುರೇಶ್, ರಾಜ್ಯ ರೆಡ್ಡಿ ಸಂಘದ ಉಪಾಧ್ಯಕ್ಷ ಕೈಕೊಂಡ್ರಹಳ್ಳಿ ಶೇಖರರೆಡ್ಡಿ, ಚಂದ್ರಶೇಖರ್, ರಾಜೇಶ್, ಕೇಬಲ್ ದೇವರಾಜು ಇತರರಿದ್ದರು.
ಪ್ರವರ್ಗ “2ಎ’ಗೆ ಸೇರಿಸುವ ಚಿಂತನೆ: ರಾಜ್ಯದ 20 ಜಿಲ್ಲೆಗಳ 80 ತಾಲೂಕುಗಳಲ್ಲಿರುವ ರೆಡ್ಡಿ ಸಮುದಾಯದ ಜನರಲ್ಲಿ ಹೆಚ್ಚಿನವರು ಬಡವರಾಗಿರುವ ಕಾರಣ, ಸಮುದಾಯವನ್ನು ಪ್ರವರ್ಗ “2ಎ’ಗೆ ಸೇರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ರೆಡ್ಡಿ ಸಮುದಾಯದ ಜತೆ ಹಲವು ಸಮುದಾಯಗಳಿಂದಲೂ ಈ ಬೇಡಿಕೆ ಬಂದಿದ್ದು, ಪ್ರಸ್ತುತ ಸರ್ಕಾರದ ಅವಧಿ ಮುಗಿಯುವ ಮುನ್ನವೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.