ಶಾರ್ಜಾ: ಬಹಳ ರೋಚಕವಾಗಿ ಆರಂಭಗೊಂಡ ವನಿತಾ ಚಾಲೆಂಜರ್ ಟಿ20 ಸರಣಿಯಲ್ಲಿ ವೆಲಾಸಿಟಿ ತಂಡ ಕಳೆದೆರಡು ಬಾರಿಯ ಚಾಂಪಿಯನ್ ಸೂಪರ್‌ನೋವಾಸ್ ವಿರುದ್ಧ 5 ವಿಕೆಟ್ ಅಂತರದ ಅಮೋಘ ಜಯ ಸಾಧಿಸಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಸೂಪರ್‌ನೋವಾಸ್ 8 ವಿಕೆಟಿಗೆ 126 ರನ್ ಗಳಿಸಿದರೆ, ಮಿಥಾಲಿ ರಾಜ್ ನಾಯಕತ್ವದ ವೆಲಾಸಿಟಿ ಒಂದು ಎಸೆತ ಬಾಕಿ ಇರುವಾಗ 5 ವಿಕೆಟಿಗೆ 129 ರನ್ ಬಾರಿಸಿ ಗೆದ್ದು ಬಂದಿತು.
ವಿಜೇತ ತಂಡದ ಪರ ದಕ್ಷಿಣ ಆಫ್ರಿಕಾದ ಸುನೆ ಲುಸ್ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡವನ್ನು ದಡ ಮುಟ್ಟಿಸಿದರು. ಅವರ ಗಳಿಕೆ 21 ಎಸೆತಗಳಿಂದ ಅಜೇಯ 37 ರನ್ (4 ಬೌಂಡರಿ, 1 ಸಿಕ್ಸರ್). ಸುಷ್ಮಾ ವರ್ಮ 34, ಕನ್ನಡತಿ ವೇದಾ ಕೃಷ°ಮೂರ್ತಿ 29 ಮತ್ತು ಶಫಾಲಿ ವರ್ಮ 17 ರನ್ ಮಾಡಿದರು.
ಇದಕ್ಕೂ ಮುನ್ನ ಸೂಪರ್‌ನೋವಾಸ್ ಪರ ಚಾಮರಿ ಅತಪಟ್ಟು ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಬಿರುಸಿನ ಆಟವಾಡಿದರು. ಉಳಿದಂತೆ ವೆಲಾಸಿಟಿ ತಂಡದ ಏಕ್ತಾ ಬಿಷ್ಟ್ 3, ಲೀಗ್ ಕ್ಯಾಸ್ಪರೆಕ್ ಮತ್ತು ಜಹನಾರಾ ಆಲಂ ತಲಾ 2 ವಿಕೆಟ್ ಉರುಳಿಸಿದರು. ಚಾಮರಿ 39 ಎಸೆತಗಳಿಂದ 44 ರನ್ ಹೊಡೆದರು. 2 ಬೌಂಡರಿ, 2 ಸಿಕ್ಸರ್‌ಗಳನ್ನು ಇದು ಒಳಗೊಂಡಿತ್ತು.
ಚಾಮರಿ ನಿರ್ಗಮನದ ಬಳಿಕ ಕೌರ್ ಬಿರುಸಿನ ಆಟದ ಸೂಚನೆ ನೀಡಿದರು. 27 ಎಸೆತಗಳಿಂದ, ಒಂದು ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 31 ರನ್ ಹೊಡೆದರು. ಆಗ ಆಲಂ ಈ ದೊಡ್ಡ ವಿಕೆಟ್ ಉರುಳಿಸಿ ತಂಡಕ್ಕೆ ಮೇಲುಗೈ ಒದಗಿಸಿದರು.
ಓಪನರ್ ಪ್ರಿಯಾ ಪೂನಿಯಾ 11 ರನ್ನಿಗೆ ಔಟಾದರೆ, ಭಾರತದ ಮತ್ತೋರ್ವ ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಕೇವಲ 7 ರನ್ ಮಾಡಿ ಏಕ್ತಾ ಬಿಷ್ಟ್ ಎಸೆತದಲ್ಲಿ ಬೌಲ್ಡ್ ಆದರು.
ಲೀಗ್ ಕ್ಯಾಸ್ಪರೆಕ್ 6ನೇ ಓವರಿನಲ್ಲಿ ಪ್ರಿಯಾ ಪೂನಿಯಾ ವಿಕೆಟ್ ಕಿತ್ತು ವೆಲಾಸಿಟಿಗೆ ಮೊದಲ ಯಶಸ್ಸು ತಂದಿತ್ತರು. ಚಾಮರಿ ಅವರ ಬಿಗ್ ವಿಕೆಟ್ ಜಹನಾರಾ ಆಲಂ ಪಾಲಾಯಿತು. ಆಗಸಕ್ಕೆ ನೆಗೆದ ಚೆಂಡನ್ನು ವೇದಾ ಕೃಷ್ಟಮೂರ್ತಿ ಅಷ್ಟೇ ಸೊಗಸಾಗಿ ಕ್ಯಾಚ್ ಪಡೆದರು. ಬಿಷ್ಟ್ 20ನೇ ಓವರಿನ ಅಂತಿಮ 2 ಎಸೆತಗಳಲ್ಲಿ ವಿಕೆಟ್ ಬೇಟೆಯಾಡಿದರು.
ಸಂಕ್ಷಿಪ್ತ ಸ್ಕೋರ್:
ಸೂಪರ್‌ನೋವಾಸ್-8 ವಿಕೆಟಿಗೆ 126 (ಚಾಮರಿ 44, ಹರ್ಮನ್‌ಪ್ರೀತ್ 31, ಶಶಿಕಲಾ 18, ಬಿಷ್ಟ್ 22ಕ್ಕೆ 3, ಕ್ಯಾಸ್ಪರೆಕ್ 23ಕ್ಕೆ 2, ಆಲಂ 27ಕ್ಕೆ 2). ವೆಲಾಸಿಟಿ-19.5 ಓವರ್‌ಗಳಲ್ಲಿ 5 ವಿಕೆಟಿಗೆ 129 (ಲುಸ್ ಔಟಾಗದೆ 37, ಸುಷ್ಮಾ 34, ವೇದಾ 29, ಖಾಕಾ 27ಕ್ಕೆ 2).