ವೆಲ್ಲೂರು: “ಇವರು ಯಾವುದೇ ಧರ್ಮ, ಜಾತಿಗೆ ಸೇರಿಲ್ಲ’ ಎಂಬ ಪ್ರಮಾಣ ಪತ್ರವನ್ನು ತಮಿಳುನಾಡಿನ ವೆಲ್ಲೂರ್‌ನಲ್ಲಿ ನ್ಯಾಯವಾದಿಗೆ ನೀಡಲಾಗಿದೆ. ಎ.ಸ್ನೇಹಾ ಪಾರ್ಥಿಬರಾಜ (35)ಎಂಬುವರು ದೇಶದಲ್ಲಿಯೇ ಮೊದಲ ಬಾರಿಗೆ ಇಂಥ ಪ್ರಮಾಣ ಪತ್ರ ಪಡೆದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಿರುಪ್ಪತ್ತೂರ್ ಉಪ ವಿಭಾಗಾಧಿಕಾರಿ ಪ್ರಿಯಾಂಕಾ ಪಂಕಜಂ ವಿಶೇಷ ಪ್ರಕರಣದ ವ್ಯಾಪ್ತಿಯಲ್ಲಿ ಈ ಪ್ರಮಾಣ ಪತ್ರ ನೀಡಲಾಗಿದೆ ಎಂದಿದ್ದಾರೆ. ಪ್ರತಿಕ್ರಿಯೆ ನೀಡಿದ ಸ್ನೇಹಾ ಒಂಭತ್ತು ವರ್ಷಗಳಿಂದ ಅದಕ್ಕಾಗಿ ಪ್ರಯತ್ನಿಸುತ್ತಿದ್ದೆೆ. 2017ರ ಮೇನಲ್ಲಿ ಕೊನೆಯದಾಗಿ ಅರ್ಜಿ ಸಲ್ಲಿಸಿ, ಅದರ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಸರಕಾರದ ಅಧಿಕಾರಿಗಳ ಜತೆಗೆ ಮಾಹಿತಿ ಕೇಳುತ್ತಿದ್ದೆ ಎಂದಿದ್ದಾರೆ. ಯಾವುದೇ ಜಾತಿ-ಧರ್ಮಕ್ಕೆ ಸೇರದೆ ಜನಿಸುತ್ತೇವೆ. ಹೀಗಾಗಿ ಎಲ್ಲರೂ, ಜಾತಿ-ಧರ್ಮಕ್ಕೆ ಸೇರಿದವರಲ್ಲ ಎಂದು ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿ ಪಡೆದುಕೊಳ್ಳಬೇಕು. ಹೀಗಾದಾಗ ಮಾತ್ರ ಸಮಾಜದ ಎಲ್ಲ ವರ್ಗಕ್ಕೂ ಸಮಾನವಾಗಿ ಹಕ್ಕುಗಳು ಸಿಗುತ್ತವೆ ಎಂದಿದ್ದಾರೆ.