Advertisement

ಮೋದಿ ರ‍್ಯಾಲಿಯಿಂದ ಮರಳುತ್ತಿದ್ದ ವಾಹನಗಳಿಗೆ ಕಲ್ಲು

02:42 AM Apr 14, 2019 | Team Udayavani |

ಉಳ್ಳಾಲ: ಮಂಗಳೂರಿನಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದುದನ್ನೇ ನೆಪವಾಗಿಟ್ಟು ಕೊಂಡು ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕುತ್ತಾರು ಮದನಿ ನಗರದ ಬಳಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಎರಡು ಬಸ್‌ಗಳು, ಕಾರುಗಳಿಗೆ ಹಾನಿಯಾ ಗಿದೆ. ಇತ್ತಂಡಗಳ ಹೊಡೆದಾಟದಲ್ಲಿ ಮಹಿಳೆ ಸೇರಿದಂತೆ ಐವರು ಗಾಯಗೊಂಡಿದ್ದಾರೆ.

Advertisement

ಈ ಸಂದರ್ಭ ಬಸ್ಸಿಗೆ ನುಗ್ಗಿ ಮಹಿಳೆ ಯರನ್ನು ಎಳೆದಾಡಿದ ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ತತ್‌ಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿ ಸಾವಿರಕ್ಕೂ ಮಿಕ್ಕಿ ಬಿಜೆಪಿ ಕಾರ್ಯಕರ್ತರು ಕೊಣಾಜೆ ಪೊಲೀಸ್‌ ಠಾಣೆಯ ಎದುರು ತಡರಾತ್ರಿ ವರೆಗೆ ಪ್ರತಿಭಟನೆ ನಡೆಸಿದರು.

ಮಂಗಳೂರಿನ ರ‍್ಯಾಲಿಯನ್ನು ಮುಗಿಸಿ ಸಂಜೆ 6 ಗಂಟೆ ಸುಮಾರಿಗೆ ಕೊಣಾಜೆ, ನಡುಪದವು, ಕಡೆ ಸಾಗುತ್ತಿದ್ದ ಬಸ್‌ಗಳಿಗೆ ದುಷ್ಕರ್ಮಿಗಳು ಕಲ್ಲು ತೂರಿದ್ದೂ ಅಲ್ಲದೆ ಕಾರಿನಲ್ಲಿ ಬರುತ್ತಿದ್ದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಥಳಿಸಿದ್ದರಿಂದ ಅವರು ಗಾಯಗೊಂಡು ಆಸ್ಪತ್ರೆಗೆ ದಾಖ ಲಾದರು. ಕುಂಪಲ ನಿವಾಸಿಗಳಾದ ಸುಜನ್‌, ನಹುಶ ಅವರು ಗಾಯಾಳುಗಳು.ಕಲ್ಲು ತೂರಾಟ ಮತ್ತು ಹಲ್ಲೆ ಯಿಂದ ಮದನಿನಗರ ನಿವಾಸಿ ಗಳಾದ ಸಂಶೀರ್‌, ಮಹಮ್ಮದ್‌ ಅಜ್ಮಲ್‌ ಗಾಯಗೊಂಡಿದ್ದಾರೆ.

ಅವಘಾತವೇ ನೆಪವಾಯಿತು!
ರ‍್ಯಾಲಿಯಿಂದ ಮರಳುತ್ತಿದ್ದ ಬಿಜೆಪಿ ಕಾರ್ಯಕರ್ತರಿದ್ದ ಕಾರು ಮತ್ತು ಇನ್ನೊಂದು ಸಮುದಾಯದ ಮಹಿಳೆ ಸಾಗುತ್ತಿದ್ದ ಸ್ಕೂಟರ್‌ ನಡುವೆ ಮದನಿ ನಗರದ ಬಳಿ ಅಪಘಾತ ಸಂಭವಿಸಿದ್ದು, ಸ್ಥಳೀಯರು ಮತ್ತು ಕಾರಿನಲ್ಲಿದ್ದವರ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೆ ರ್ಯಾಲಿಯಿಂದ ವಾಪಸಾಗುತ್ತಿದ್ದ ಬಸ್‌ ಕೂಡ ಸ್ಥಳಕ್ಕೆ ತಲುಪಿದ್ದು, ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟಕ್ಕೆ ತಿರುಗಿತು. ಕಾರಿನಲ್ಲಿದ್ದವರಿಗೆ ಸ್ಥಳೀಯರು ಥಳಿಸಿ ಕಾರನ್ನು ಪುಡಿಗೈದರು.

ಎರಡೂ ತಂಡಗಳ ನಡುವೆ ಹೊಡೆದಾಟ ನಡೆಯುತ್ತಿದ್ದಂತೆ ರ‍್ಯಾಲಿಯಿಂದ ಬರುತ್ತಿದ್ದ ಬಸ್‌ಗಳ ಒಳಗೆ ನುಗ್ಗಿದ ದುಷ್ಕರ್ಮಿಗಳು ಬಸ್‌ಗಳಲ್ಲಿದ್ದ ಕಾರ್ಯಕರ್ತರನ್ನು ಹೊರಗೆ ಎಳೆದು ಹಲ್ಲೆಗೈದರು. ಒಂದು ಬಸ್ಸಿನಲ್ಲಿದ್ದ ಮಹಿಳಾ ಕಾರ್ಯಕರ್ತರನ್ನು ಎಳೆದಾಡಿದ್ದು ಓರ್ವ ಮಹಿಳೆ ಗಾಯಗೊಂಡರು. ಸುಮಾರು 15 ನಿಮಿಷ ಕಾಲ ಕಲ್ಲು ತೂರಾಟ, ದೊಣ್ಣೆಯಿಂದ ಹೊಡೆದಾಟ ಮುಂದುವರಿಯಿತು.

Advertisement

ಬಸ್ಸಿನ ಗಾಜುಗಳಿಗೆ ಹಾನಿಯಾಗಿತ್ತು. ಭೀತಿಯಿಂದ ಸ್ಥಳೀಯರು ಅಂಗಡಿ ಮುಂಗಟ್ಟು ಗಳನ್ನು ಮುಚ್ಚಿದರು.ಠಾಣೆಯ ಎದುರು ಪ್ರತಿಭಟನೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಮದನಿ ನಗರದಲ್ಲಿ ಘಟನೆ ನಡೆದರೂ ಕಾರ್ಯಕರ್ತರು ನೇರವಾಗಿ ವಾಹನಗಳನ್ನು ಕೊಣಾಜೆ ಪೊಲೀಸ್‌ ಠಾಣೆಯ ಎದುರು ನಿಲ್ಲಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಕೊಣಾಜೆ, ಮುಡಿಪು, ನಡುಪದವು, ಹರೇಕಳ, ಪಾವೂರು, ಫಜೀರು, ಬೋಳಿಯಾರು, ಸಜಿಪ, ಇರಾ, ಬಾಳೆಪುಣಿ ಮೊದಲಾದೆಡೆಗಳಿಂದ ಬಂದಿದ್ದ ಸುಮಾರು 15ಕ್ಕೂ ಹೆಚ್ಚು ಬಸ್‌ಗಳು, ನೂರಾರು ಇತರ ವಾಹನಗಳು ಮತ್ತು ಸಾವಿರಕ್ಕೂ ಅಧಿಕ ಸಾರ್ವಜನಿಕರು ಠಾಣೆಯೆದುರು ಜಮಾಯಿಸಿದರು.

ಈ ಸಂದರ್ಭ ಗಾಯಾಳು ಮಹಿಳಾ ಕಾರ್ಯಕರ್ತೆಯೊಬ್ಬರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸ್ಥಳೀಯರಿಬ್ಬರು ಬಸ್ಸಿನೊಳಗೆ ನುಗ್ಗಿ ತನ್ನ ಕೂದಲನ್ನು ಎಳೆದಾಡಿದ್ದಲ್ಲದೆ ಕೆಲವರು ಹೊರಗಿನಿಂದಲೂ ಬಸ್ಸಿನೊಳಗೆ ನಿರಂತರವಾಗಿ ಕಲ್ಲು ತೂರಾಟ ನಡೆಸಿ ಆತಂಕ ಸೃಷ್ಟಿಸಿದರು ಎಂದು ತಿಳಿಸಿದರು. ಆರೋಪಿಗಳನ್ನು ತತ್‌ಕ್ಷಣವೇ ಬಂಧಿಸಬೇಕು ಎಂದು ಪೊಲೀಸರನ್ನು ಆಗ್ರಹಿಸಿದರು.

ಪೊಲೀಸರ ಕೊರತೆ
ಸಾಮಾನ್ಯವಾಗಿ ಮಂಗಳೂರಿನಲ್ಲಿ ಯಾವುದೇ ದೊಡ್ಡ ಮಟ್ಟದ ಸಮಾವೇಶಗಳು ನಡೆದಾಗ ಸೂಕ್ಷ್ಮ ಪ್ರದೇಶಗಳಾದ ಕಲ್ಲಾಪು, ಕುತ್ತಾರು, ಮದನಿನಗರ ಬಳಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಆದರೆ ಶನಿವಾರ ಇಬ್ಬರೇ ಪೊಲೀಸರು ಸ್ಥಳದಲ್ಲಿದ್ದುದರಿಂದ ಪರಿಸ್ಥಿತಿಯ ನಿಯಂತ್ರಣ ಅವರಿಂದ ಸಾಧ್ಯವಾಗಲಿಲ್ಲ. 15 ನಿಮಿಷಗಳ ಬಳಿಕ ಹೆಚ್ಚುವರಿ ಪೊಲೀಸರು ಆಗಮಿಸಿ ಜನರನ್ನು ಚದುರಿಸಿದರು.

ಹಿರಿಯರ ಬುದ್ಧಿವಾದ
ಯುವಕರ ತಂಡ ಕಲ್ಲು, ದೊಣ್ಣೆಗಳಿಂದ ದಾಳಿ ನಡೆಸುತ್ತಿದ್ದಾಗ ಸ್ಥಳೀಯ ಹಿರಿಯರ ತಂಡವೊಂದು ಮಧ್ಯಪ್ರವೇಶಿಸಿ ಗಲಭೆ ನಡೆಸದಂತೆ ತಡೆಯುತ್ತಿರುವುದೂ ಕಂಡು ಬಂದಿತು. ಆದರೂ ಮೂರು ಬಸ್‌ಗಳಲ್ಲಿದ್ದ ಕೆಲವರ ಮೇಲೆ ಹಲ್ಲೆ ನಡೆಯಿತು.

ಗಣ್ಯರ ಭೇಟಿ
ಘಟನಾ ಸ್ಥಳ ಮತ್ತು ಕೊಣಾಜೆ ಪೊಲೀಸ್‌ ಠಾಣೆಗೆ ಮಂಗಳೂರು ಕ್ಷೇತ್ರಾಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರು, ರಾಜಾರಾಮ ಭಟ್‌, ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳೆಪ್ಪಾಡಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಚಂದ್ರಹಾಸ ಉಳ್ಳಾಲ ಸೇರಿದಂತೆ ಹಿಂದೂ ಸಂಘಟನೆಯ ನಾಯಕರು ಭೇಟಿ ನೀಡಿ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಇಬ್ಬರು ವಶಕ್ಕೆ
ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ಖಂಡನೀಯ. ಕುತ್ತಾರು ಪ್ರದೇಶದಲ್ಲಿ ಸಿಸಿಟಿವಿ ದಾಖಲೆಗಳನ್ನು ಪಡೆಯಲು ಸೂಚಿಸಲಾಗಿದೆ.

ದಾಳಿಗೊಳಗಾದ ಮಹಿಳೆಯರ ಮಾಹಿತಿ ಪಡೆದುಕೊಳ್ಳಲಾಗಿದೆ. ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೂವರು ಇನ್ಸ್‌ ಪೆಕ್ಟರ್‌ಗಳು ಮತ್ತು 20 ಸಿಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿನ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸುತ್ತೇವೆ ಎಂದರು. ಸುಮಾರು 10.30ರ ವರೆಗೆ ಠಾಣೆಯೆದುರು ಪ್ರತಿಭಟನೆ ನಡೆಯಿತು. ತಡರಾತ್ರಿಯೇ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತೇವೆ ಎಂದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next