Advertisement

ವಾಹನ ಸಂಚಾರ ವ್ಯವಸ್ಥೆ ಮಾರ್ಪಾಟು

10:29 AM Apr 22, 2018 | Team Udayavani |

ಮಹಾನಗರ: ನಗರದ ಹಂಪನಕಟ್ಟೆ ಪ್ರದೇಶದ ಜಿ.ಎಚ್‌. ಎಸ್‌. (ಗಣಪತಿ ಹೈಸ್ಕೂಲ್‌) ಕ್ರಾಸ್‌ ರೋಡ್‌ ಮತ್ತು ಜಿ.ಟಿ. ರೋಡ್‌ (ಶರವು ಮಹಾಗಣಪತಿ ಟೆಂಪಲ್‌ ರೋಡ್‌) ಗಳಿಗೆ ಅನ್ವಯಿಸುವಂತೆ ಶುಕ್ರವಾರ ಮಧ್ಯರಾತ್ರಿಯಿಂದ ದಿಢೀರನೆ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

Advertisement

ಈ ಎರಡು ರಸ್ತೆಗಳಲ್ಲಿ ಹಿಂದಿನಿಂದಲೂ ಏಕ ಮುಖ ವಾಹನ ಸಂಚಾರ ವ್ಯವಸ್ಥೆ ಇದ್ದು, ಈಗ ಅದನ್ನು ಅದಲು ಬದಲು ಮಾಡಲಾಗಿದೆ. ಕೆ.ಎಸ್‌. ರಾವ್‌ ರಸ್ತೆಯಲ್ಲಿ ಸಾಗುವ ವಾಹನಗಳು ಈ ಹಿಂದಿನಂತೆ ವಿಶ್ವ ಭವನ ಬಸ್‌ ತಂಗುದಾಣದ ಬಳಿ ಬಲಕ್ಕೆ ತಿರುಗಿ ಜಿ.ಟಿ. ರಸ್ತೆಯಲ್ಲಿ ಮುಂದುವರಿಯುವಂತಿಲ್ಲ.

ಬದಲಾಗಿ ಕೆ.ಎಸ್‌. ರಾವ್‌ ರಸ್ತೆಯಲ್ಲಿಯೇ ಮುಂದುವರಿದು ಹಳೆ ಸರ್ವಿಸ್‌ ಬಸ್‌ ನಿಲ್ದಾಣದ ಎದುರು ಬಲಕ್ಕೆ ಯು- ಟರ್ನ್ ಮಾಡಿ ಜಿ.ಎಚ್‌. ಎಸ್‌. ಕ್ರಾಸ್‌ ರಸ್ತೆ (ಹಂಪನಕಟ್ಟೆ ಪೋಸ್ಟ್‌ ಆಫೀಸ್‌ ರಸ್ತೆ)ಯಲ್ಲಿ ಸಾಗಿ ಶ್ರೀನಿವಾಸ್‌ ಹೊಟೇಲ್‌ ಬಳಿ ಎಡಕ್ಕೆ ತಿರುಗಿ ಮುಂದುವರಿಯಬೇಕಾಗಿದೆ.

ಹಾಗೆಯೇ ಜಿ.ಎಚ್‌.ಎಸ್‌. ರಸ್ತೆಯಲ್ಲಿ ಪಿರೇರಾ ಲಾಡ್ಜ್- ಕೃಷ್ಣ ಭವನ ರಸ್ತೆ ಮೂಲಕ ಬರುವ ವಾಹನಗಳು ಶ್ರೀನಿವಾಸ್‌ ಹೊಟೇಲ್‌ ಬಳಿ ಬಲಕ್ಕೆ ತಿರುಗಲು ಅವಕಾಶವಿಲ್ಲ.

ಬದಲಾಗಿ ಈ ವಾಹನಗಳು ಐಡಿಯಲ್‌ ಬಿಲ್ಡಿಂಗ್‌ ತನಕ ಮುಂದುವರಿದು ಬಲಕ್ಕೆ ತಿರುಗಿ ಶರವು ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಮುಂದಕ್ಕೆ ಸಾಗಿ ಕೆ.ಎಸ್‌. ರಾವ್‌ ರಸ್ತೆಯಲ್ಲಿ ಮುಂದುವರಿಯಬೇಕು. ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶವನ್ನಿಟ್ಟುಕೊಂಡು ಪ್ರಾಯೋಗಿಕವಾಗಿ ಈ ಬದಲಾವಣೆ ತರಲಾಗಿದೆ ಎಂದು ಟ್ರಾಫಿಕ್‌ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ಅವರು ಸ್ಪಷ್ಟ ಪಡಿಸಿದ್ದಾರೆ.

Advertisement

ಭಿನ್ನ ಅಭಿಪ್ರಾಯ ವ್ಯಕ್ತ
ಹೊಸ ಸಂಚಾರ ವ್ಯವಸ್ಥೆಗೆ ಸಂಬಂಧಿಸಿ ಸಾರ್ವಜನಿಕ ವಲಯದಲ್ಲಿ ಕೆಲವರಿಂದ ಸ್ವಾಗತ ಹಾಗೂ ಇನ್ನೂ ಕೆಲವರಿಂದ ಅಪಸ್ವರ ವ್ಯಕ್ತವಾಗಿದೆ. ಜಿ.ಎಚ್‌.ಎಸ್‌. ರಸ್ತೆ ಮೂಲಕ ಸಾಗಿ ಕೆ.ಎಸ್‌. ರಾವ್‌ ರಸ್ತೆಗೆ ಬರುವ ವಾಹನಗಳಿಗೆ ಜಿ.ಟಿ. ರಸ್ತೆ ಅಗಲ ಕಿರಿದಾಗಿದೆ ಹಾಗೂ ಈ ರಸ್ತೆಯು ಕೆ.ಎಸ್‌. ರಾವ್‌ ರಸ್ತೆಗೆ ಸೇರುವಲ್ಲಿ ಎತ್ತರದ ಪ್ರದೇಶ (ಅಪ್‌) ಇರುವುದರಿಂದ ಅಕಸ್ಮಾತ್‌ ಇಲ್ಲಿ ಯಾವುದೇ ವಾಹನ ಕೆಟ್ಟು ನಿಂತರೆ ಸಮಸ್ಯೆ ಆಗಬಹುದು; ಅಂತಹ ಸಂದರ್ಭದಲ್ಲಿ ವಾಹನವನ್ನು ರಿವರ್ಸ್‌ ಕೊಂಡು ಹೋಗ ಬೇಕೇ ಹೊರತು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗದು. ಇದರಿಂದಾಗಿ ಹಿಂದಿನಿಂದ ಬರುವ ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ ಎನ್ನುವುದು ಅಪಸ್ವರ ಎತ್ತುವವರ ಅಭಿಪ್ರಾಯ.

ವಾಹನ ದಟ್ಟಣೆ
ಜಿ.ಟಿ. ರಸ್ತೆಯಲ್ಲಿ ಶರವು ಮಹಾ ಗಣಪತಿ ದೇವಸ್ಥಾನ ಮಾತ್ರವಲ್ಲದೆ, ದೇಗುಲದ ಎದುರು ಐಡಿಯಲ್‌ ಬಿಲ್ಡಿಂಗ್‌ ಮತ್ತು ಅದರ ಪಕ್ಕದಲ್ಲಿ ಆಶೀರ್ವಾದ್‌ ಬಿಲ್ಡಿಂಗ್‌, ದೇಗುಲದ ಇನ್ನೊಂದು ಬದಿ ಎಲ್‌.ಜೆ. ಆರ್ಕೇಡ್‌ ಕಟ್ಟಡ ಇದೆ.

ಈ ಮೂರೂ ಕಟ್ಟಡಗಳಲ್ಲಿ ಹಲವಾರು ಸಂಸ್ಥೆಗಳ, ಸರಕಾರಿ ಇಲಾಖೆಗಳ ಕಚೇರಿಗಳಿವೆ. ಅಲ್ಲದೆ ಮೂರು ಹೊಟೇಲ್‌ ಗಳಿವೆ. ಹಾಗಾಗಿ ಜಿ.ಟಿ. ರಸ್ತೆಯಲ್ಲಿ ಸಹಜವಾಗಿಯೇ ವಾಹನ ಸಂಚಾರ ಮೊದಲಿನಿಂದಲೂ ಜಾಸ್ತಿ ಇದೆ. ಇದೀಗ ವಾಹನ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಟು ಮಾಡಿರುವುದರಿಂದ ಈ ರಸ್ತೆ ಬದಿಯ ಕಟ್ಟಡಗಳಲ್ಲಿರುವ ಕಚೇರಿಗಳಿಗೆ ತೆರಳುವ ಕೆಲವರು ಸುತ್ತು ಬಳಸಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.

ಬದಲಾದ ಸಂಚಾರ ವ್ಯವಸ್ಥೆಯಲ್ಲಿ ಕೆ.ಎಸ್‌. ರಾವ್‌ ರಸ್ತೆಯಲ್ಲಿ ಟ್ರಾಫಿಕ್‌ ಜಾಂ ಆಗುವ ಸಂದರ್ಭಗಳು ಕಡಿಮೆ
ಯಾಗಲಿವೆ. ಹಾಗಾಗಿ ಈ ವ್ಯವಸ್ಥೆ ಒಂದು ಉತ್ತಮ ಉಪಕ್ರಮ ಎಂದು ಸಂಚಾರ ಬದಲಾವಣೆಯನ್ನು ಸ್ವಾಗತಿಸುವ ಜನರು ಹೇಳುತ್ತಿದ್ದಾರೆ.

ಪ್ರಾಯೋಗಿಕ ಜಾರಿ
ಈ ಸಂಚಾರ ವ್ಯವಸ್ಥೆ ಬದಲಾವಣೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದೇವೆ. ಈ ಬಗ್ಗೆ ಸುಮಾರು ಎರಡು ತಿಂಗಳಿಂದ ಚಿಂತನ ಮಂಥನ ನಡೆಸಿದ್ದೇವೆ. ಇಂದಿನಿಂದ ಅದನ್ನು ಜಾರಿಗೊಳಿಸಿದ್ದೇವೆ. ಜನರ ಪ್ರತಿಕ್ರಿಯೆ ಏನೆಂಬುದನ್ನು ಗಣನೆಗೆ ತೆಗೆದುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. 
 - ಮಂಜುನಾಥ ಶೆಟ್ಟಿ,
    ಎಸಿಪಿ, ಸಂಚಾರ ವಿಭಾಗ,
    ಮಂಗಳೂರು.

ಸ್ವಾಗತಾರ್ಹ
ಈ ಬದಲಾವಣೆಯಿಂದ ಸಂಚಾರ ವ್ಯವಸ್ಥೆ ಸುಧಾರಣೆ ಆಗುವುದಾದರೆ ಇದು ಸ್ವಾಗತಾರ್ಹ ಹಾಗೂ ಇದರಿಂದ ಸ್ವಲ್ಪ ಅನನುಕೂಲ ಆದರೂ ಸಹಿಸಿಕೊಳ್ಳ ಬೇಕಾಗುತ್ತದೆ.
ರಾಮಕೃಷ್ಣ,
  ಖಾಸಗಿ ಸಂಸ್ಥೆಯ ಉದ್ಯೋಗಿ,
   ಜಿ.ಟಿ. ರಸ್ತೆ 

ಉತ್ತಮ ಹೆಜ್ಜೆ
ಈ ಸಂಚಾರ ಬದಲಾವಣೆ ಒಂದು ಉತ್ತಮ ಹೆಜ್ಜೆ. ಇದರಿಂದ ಕೆ.ಎಸ್‌. ರಾವ್‌ ರಸ್ತೆಯ ವಿಶ್ವ ಭವನ ಬಸ್‌ ಸ್ಟಾಪ್‌ ಬಳಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಹಾಗಾಗಿ ಇದು ಸ್ವಾಗತಾರ್ಹ.
– ಗಣೇಶ್‌ ಶೆಟ್ಟಿ, ಮಂಗಳೂರು

ವಾಹನ ಸವಾರರಿಗೆ ಸಮಸ್ಯೆ
ಈ ಸಂಚಾರ ಬದಲಾವಣೆ ಗೊಂದಲದಿಂದ ಕೂಡಿದೆ. ಆಶೀರ್ವಾದ್‌ ಬಿಲ್ಡಿಂಗ್‌ ಮತ್ತು ತಾರಾ ಕ್ಲಿನಿಕ್‌ ಎದುರಿನ ರಸ್ತೆಯಲ್ಲಿ ದ್ವಿಮುಖ ಸಂಚಾರ ಇರುವುದರಿಂದ ಇಲ್ಲಿ ಸಂಚಾರ ದಟ್ಟಣೆ ಕಾಣಿಸಿಕೊಳ್ಳಲಿದೆ. ಅಲ್ಲದೆ ಜಿ.ಟಿ. ರಸ್ತೆ ಅಗಲ ಕಿರಿದಾಗಿದ್ದು, ಕೆ.ಎಸ್‌.ರಾವ್‌ ರಸ್ತೆಗೆ ಸೇರುವಲ್ಲಿ ಅಪ್‌ ಇದೆ. ಹಾಗಾಗಿ ಇಲ್ಲಿ ವಾಹನ ಸವಾರರಿಗೆ ಸಮಸ್ಯೆ ಆಗಬಹುದು.
– ಬಾಲಕೃಷ್ಣ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next