Advertisement

ಶಿಥಿಲ ಸೇತುವೆ ಮೇಲೆ ವಾಹನ ಸಂಚಾರ

01:13 PM Dec 09, 2019 | Suhan S |

ಚಿಕ್ಕೋಡಿ: ಕೃಷ್ಣಾ ನದಿಗೆ ಕಟ್ಟಿರುವ ಕಲ್ಲೋಳಯಡೂರ ಸೇತುವೆ ಕಳೆದ ಹತ್ತು ವರ್ಷಗಳಿಂದ ಶಿಥಿಲಗೊಂಡು ಈಗಲೋ ಆಗಲೋ ಬೀಳುವ ಹಂತ ತಲುಪಿದೆ. ಸೇತುವೆ ಮೇಲೆ ಭಾರಿ ವಾಹನಗಳು ಸಂಚರಿಸುತ್ತಿರುವುದರಿಂದ ಸೇತುವೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

Advertisement

ಇನ್ನೂ ಹೊಸ ಸೇತುವೆ ಮಂಜೂರಾಗಿ ಎರಡು ವರ್ಷ ಕಳೆಯುತ್ತಾ ಬಂದರೂ ಕಾಮಗಾರಿ ಆರಂಭಿಸುವ ಭಾಗ್ಯ ಕೂಡಿಬರುತ್ತಿಲ್ಲ. ಇದರಿಂದ ಗಡಿ ಭಾಗದ ಜನ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.

ಕಲ್ಲೋಳಯಡೂರ ಸೇತುವೆಯು ಪ್ರವಾಹ ರಭಸಕ್ಕೆ ಶಿಥಿಲಗೊಂಡಿದೆ. ತೀರಾ ಹಳೆಯದಾದ ಸೇತುವೆಯು ಶೇ 60ರಷ್ಟು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಕೆಲ ಕಡೆಗಳಲ್ಲಿ ಸೇತುವೆ ಕುಸಿಯುತ್ತ ಹೋಗುತ್ತಿದೆ. ಸಂಪೂರ್ಣ ಶಿಥಿಲಗೊಂಡಿರುವ ಸೇತುವೆ ಮೇಲೆ ಭಾರಿ ವಾಹನಗಳು ಸಂಚಾರ ಮಾಡುತ್ತಿರುವುದು ಅಪಾಯಕಾರಿಯಾಗಿದೆ. ಆದರೂ ಭಾರಿ ವಾಹನಗಳ ಸಂಚಾರ ಸೇತುವೆ ಮೇಲೆ ಅಬಾಧಿತವಾಗಿದೆ.

ಕಳೆದ 2005ರಿಂದ ಈ ಸೇತುವೆ ಮೇಲೆ ಭಾರಿ ಪ್ರಮಾಣದ ವಾಹನ ಸಂಚಾರವನ್ನು ನಿಬಂರ್ಧಿ ಸಲಾಗಿತ್ತು. ಕಾರು ಮತ್ತು ದ್ವಿಚಕ್ರ ವಾಹನಗಳು ಮಾತ್ರ ಸಂಚರಿಸಲು ಮಾತ್ರ ಅವಕಾಶವಿತ್ತು. ನಂತರ ಪ್ರಸಕ್ತ ಆಗಸ್ಟ್‌ ತಿಂಗಳಲ್ಲಿ ಉಂಟಾದ ಭೀಕರ ಮಹಾಪೂರದ ರಭಸಕ್ಕೆ ಕಬ್ಬಿಣದ ಗೇಟ್‌ಗಳು ಮುರಿದು ಬಿದ್ದಿವೆ. ಮತ್ತೆ ಟ್ರಕ್‌, ಕಬ್ಬಿನ ಟ್ರ್ಯಾಕ್ಟರ್‌ ಮೊದಲಾದ ಭಾರಿ ವಾಹನಗಳು ಸಂಚರಿಸಲು ಆರಂಭ ಮಾಡಿವೆ. ಇದರಿಂದ ಸೇತುವೆ ಅಲ್ಲಲ್ಲಿ ಕುಸಿಯುತ್ತಾ ಹೋಗುತ್ತಿದೆ. ಇದೇ ಮುಂದುವರಿದರೆ ಒಂದಿಲ್ಲೊಂದು ದಿನ ಅಪಾಯಕಾರಿಯಾಗುವ ಸಾಧ್ಯತೆ ದಟ್ಟವಾಗಿದೆ.

ಕಬ್ಬಿಣದ ಗೇಟ್‌ ಅಳವಡಿಸಿ: ರಭಸವಾಗಿ ಹರಿಯುವ ಕೃಷ್ಣಾ ನದಿಯ ಸೆಳೆತಕ್ಕೆ ಶಿಥಿಲ ಸೇತುವೆ ಮೇಲೆ ಅವಘಡ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡು ನೀರಾವರಿ ಇಲಾಖೆ ಮತ್ತೆ ಸೇತುವೆಯ ಎರಡೂ ಬದಿಗಳಲ್ಲಿ ಕಬ್ಬಿಣದ ತಡೆಗೋಡೆ ನಿರ್ಮಿಸಬೇಕು ಎಂಬುದು ಗಡಿ ಭಾಗದ ಸಾರ್ವಜನಿಕರ ಒತ್ತಾಯವಾಗಿದೆ.

Advertisement

ಹೊಸ ಸೇತುವೆ ಮಂಜೂರು: ಕಲ್ಲೋಳಯಡೂರ ಸೇತುವೆ ಶಿಥಿವಾಗಿದ್ದರಿಂದ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಹಿಂದಿನ ಸಂಸದ ಪ್ರಕಾಶ ಹುಕ್ಕೇರಿ ಅವರು ಹೊಸ ಸೇತುವೆ ನಿರ್ಮಿಸಲು 27 ಕೋಟಿ ರೂ. ಅನುದಾನ ಮಂಜೂರು ಮಾಡಿಸಿಕೊಂಡು ಬಂದು ಕಾಮಗಾರಿ ಆರಂಭಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್‌) ಗೆ ಒಪ್ಪಿಸಿದ್ದಾರೆ. ಕಲ್ಲೋಳಯಡೂರ ಹೊರತುಪಡಿಸಿ ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕೃಷ್ಣಾ ನದಿಗೆ ಅಡ್ಡಲಾಗಿ ಜಯಗೂಳಕೇದರಾಪೂರ, ಮಳವಾಡಚಿಂಚಲಿ, ಕುಡಚಿ, ಕೃಷ್ಣಾ ಕಿತ್ತೂರ ಹೀಗೆ ಐದು ಸೇತುವೆಗಳು ಮಂಜೂರಾಗಿವೆ. ಆದರೆ ಮಂಜೂರಾಗಿ ಎರಡು ವರ್ಷ ಕಳೆದರೂ ಕಾಮಗಾರಿ ಮಾತ್ರ ಆರಂಭ ವಾಗದಿರುವುದರಿಂದ ಗಡಿ ಭಾಗದ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಎರಡೆರಡು ಬಾರಿ ಉದ್ಘಾಟನೆ: ಕಲ್ಲೋಳಯಡೂರ ಸೇತುವೆ ಕಾಮಗಾರಿ ಆರಂಭ ಮಾಡಲು ಎರಡು ಬಾರಿ ಉದ್ಘಾಟಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್‌.ಸಿ.ಮಹದೇವಪ್ಪ ಅವರು ಒಂದು ಬಾರಿ ಉದ್ಘಾಟಿಸಿದರೆ ಎರಡನೆ ಬಾರಿಗೆ ಹಿಂದಿನ ಸಂಸದ ಪ್ರಕಾಶ ಹುಕ್ಕೇರಿ ನೇತೃತ್ವದಲ್ಲಿ ಸೇತುವೆಗೆ ಚಾಲನೆ ದೊರಕಿದೆ. ಆದರೂ ಕೂಡಾ ಕಾಮಗಾರಿ ಆರಂಭವಾಗದ ಭಾಗ್ಯ ಕೂಡಿ ಬರುತ್ತಿಲ್ಲ, ಅಧಿಕಾರಿಗಳನ್ನು ಕೇಳಿದರೆ ಪ್ರವಾಹ, ಮಳೆ ಹೀಗೆ ಅನೇಕ ಕಾರಣಗಳನ್ನು ನೀಡಿ ಜಾರಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

 

-ಮಹಾದೇವ ಪೂಜೇರಿ

Advertisement

Udayavani is now on Telegram. Click here to join our channel and stay updated with the latest news.

Next