Advertisement

ಶಿರಾಡಿಘಾಟ್‌ನಲ್ಲಿ ವಾಹನ ಸಂಚಾರ ಸದ್ಯಕ್ಕಿಲ್ಲ: ಸಚಿವ ರೇವಣ್ಣ 

06:00 AM Aug 30, 2018 | Team Udayavani |

ಹಾಸನ: ರಾಷ್ಟ್ರೀಯ ಹೆದ್ದಾರಿ -75 ರ ಶಿರಾಡಿಘಾಟ್‌ನಲ್ಲಿ ಪದೇ ಪದೆ ಭೂ ಕುಸಿತವುಂಟಾಗುತ್ತಿದೆ. ಆದ್ದರಿಂದ ಸದ್ಯಕ್ಕೆ ಶಿರಾಡಿಘಾಟ್‌ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಸ್ಪಷ್ಟಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಾಡಿಘಾಟ್‌ನಲ್ಲಿ ರಸ್ತೆ ಮೇಲೆ 15 ರಿಂದ 20 ಕಡೆ ಭೂ ಕುಸಿತವಾಗಿದೆ. ಇಂಜಿನಿಯರ್‌ ಮಣ್ಣು  ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ. ರಸ್ತೆ ಪಕ್ಕದಲ್ಲಿಯೇ ಹರಿಯುತ್ತಿರುವ ಕೆಂಪುಹೊಳೆ ದಂಡೆ ಕಡೆ ಭೂ ಕುಸಿತ ತಡೆಯಲು ಒಂದು ಲಕ್ಷ ಮರಳು ಚೀಲ ಹಾಕಿದ್ದಾರೆ. ಈಗಲೂ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಭೂ ಕುಸಿತದ ಕಾರಣಗಳನ್ನು ಅಧ್ಯಯನ ಮಾಡಲು ಬಂದಿದ್ದ ವಿಜ್ಞಾನಿಗಳು, ಮಣ್ಣು ತೆರವುಗೊಳಿಸಲು ಕಾರ್ಮಿಕರು ಶಿರಾಡಿಘಾಟ್‌ಗೆ ಹೋಗಲು ಹೆದರುತ್ತಿದ್ದಾರೆ. ಆ ಪ್ರಮಾಣದಲ್ಲಿ ಭೂ ಕುಸಿತವಾಗುತ್ತಿದೆ ಎಂದು ವಿವರ ನೀಡಿದರು.

6 ತಿಂಗಳು ಘನ ವಾಹನ ಬಂದ್‌: ಮಳೆ ನಿಲ್ಲುವವರೆಗೂ ರಸ್ತೆ ಮೇಲೆ ಕುಸಿದಿರುವ ಮಣ್ಣು ತೆರವುಗೊಳಸಲು ಸಾಧ್ಯವಾಗುವುದಿಲ್ಲ. ಮಳೆ ನಿಂತ ನಂತರ ತಜ್ಞರು ವಾಹನಗಳು ಸಂಚರಿಸಬಹುದು ಎಂದು ಖಾತರಿಪಡಿಸಿದ ನಂತರವಷ್ಟೇ  ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಮಳೆ ನಿಂತ ನಂತರವೂ ಶಿರಾಡಿಘಾಟ್‌ ರಸ್ತೆಯನ್ನು ಮೊದಲ ಸ್ಥಿತಿಗೆ ತರಲು ಅಂದರೆ ಸರಕು ಸಾಗಾಣೆಯ ಭಾರೀ ವಾಹನಗಳು ಸಂಚರಿಸಲು 6 ತಿಂಗಳು ಬೇಕಾಗಬಹುದು ಎಂದು ತಿಳಿಸಿದರು.

ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಪರಿಶೀಲನೆ: ಮಂಗಳೂರು – ಮಡಿಕೇರಿ ಮಾರ್ಗದಲ್ಲಿಯೂ ರಸ್ತೆಯ ಕೆಲ ಭಾಗಗಳಲ್ಲಿ ಕುಸಿತವುಂಟಾಗಿದೆ. ಮಳೆ ನಿಂತರೆ ಒಂದೆರಡು ವಾರಗಳಲ್ಲಿ ರಸ್ತೆ ದುರಸ್ತಿಪಡಿಸಿ ಲಘುವಾಹನಗಳ ಸಂಚಾರಕ್ಕೆ ಆ ರಸ್ತೆಯನ್ನು ಮುಕ್ತಗೊಳಸಿಬಹುದು. ಆದರೆ ಸಕಲೇಶಪುರ -ಸೋಮವಾರಪೇಟೆ, ಬಿಸಿಲೆ – ಸುಬ್ರಹ್ಮಣ್ಯ ರಸ್ತೆ ದುರಸ್ತಿಗೆ ಎರಡು ವರ್ಷಗಳು ಬೇಕಾಗಬಹುದು. ಈಗ ರಸ್ತೆ ಕುಸಿದಿರುವ ಮಾರ್ಗ ಬಿಟ್ಟು ಪರ್ಯಾಯ ರಸ್ತೆ ನಿರ್ಮಾಣಕ್ಕೆ ಸರ್ಕಾರಿ ಜಾಗವಿದೆ. ಅಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಆರೋಪ: ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳು ಸೇರಿದಂತೆ ಲೋಕೋಪಯೋಗಿ ಇಲಾಖೆಯ ಸುಮಾರು 300 ಕೋಟಿ ರೂ. ಆಸ್ತಿ ನಾಶವಾಗಿದೆ. ಮಳೆ ಮುಂದುವರಿದರೆ ನಷ್ಟ ಇನ್ನೂ ಹೆಚ್ಚಾಗಬಹುದು. ಕೊಡಗು ಮತ್ತು ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ತಾಲೂಕುಗಳಲ್ಲಿ ಕಾಫಿ ಬೆಳೆ ಶೇ.80 ರಷ್ಟು ನಾಶವಾಗಿದೆ. ಅರಕಲಗೂಡು ತಾಲೂಕಿನಲ್ಲಿ ಭತ್ತ, ತಂಬಾಕು ಬೆಳೆಯೂ ನಾಶವಾಗಿದೆ. ಪ್ರಕೃತಿ ವಿಕೋಪದ ಹಾನಿಯಿಂದಾದ  ಪರಿಹಾರ ಕಾಮಗಾರಿಗಳಿಗೆ  ಕೇಂದ್ರ ಸರ್ಕಾರ ಇಷ್ಟು ವೇಳೆಗಾಗಲೇ ಶೇ.50 ರಷ್ಟು ಆರ್ಥಿಕ ನೆರವು ನೀಡಬೇಕಾಗಿತ್ತು. ಆದರೆ ಇದುವರೆಗೂ ಪರಿಹಾರ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

Advertisement

ರಾಜಕೀಯ ಮಾಡೋದು ಬಿಡಿ: ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ನಾಲ್ವರು ಈ ವೇಳೆಗಾಗಲೇ ಕೇಂದ್ರ ಸಚಿವರ ಮೇಲೆ ಒತ್ತಡ ತಂದು ರಾಜ್ಯದ ಅತಿವೃಷ್ಟಿ ಪರಿಹಾರ ಕಾರ್ಯಗಳಿಗೆ ನೆರವು ಕೊಡಿಸಬೇಕಾಗಿತ್ತು. ಈಗಲಾದರೂ ರಾಜಕಾರಣ ಬಿಟ್ಟು ಕೇಂದ್ರ ಸಚಿವರು, ರಾಜ್ಯದ ಬಿಜೆಪಿ ನಾಯಕರು ಅತಿವೃಷ್ಟಿ ಹಾಗೂ ಪ್ರವಾಹ ಪರಿಹಾರ ಕಾರ್ಯಗಳಿಗೆ ಕೇಂದ್ರದ ನೆರವು ಕೊಡಿಸಲಿ ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next