ಬೆಂಗಳೂರು: ಹ್ಯಾಂಡಲ್ ಲಾಕ್ ಮುರಿದು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕಳ್ಳನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿಯ ಬೀಡಿ ಕಾರ್ಮಿಕರ ಕಾಲೋನಿ ನಿವಾಸಿ ಇಮ್ರಾನ್ ಖಾನ್ (32) ಬಂಧಿತ.
ಆರೋಪಿಯಿಂದ 8.30 ಲಕ್ಷ ರೂ. ಮೌಲ್ಯದ 11 ದ್ವಿಚಕ್ರ ವಾಹನ ಹಾಗೂ 2 ಆಟೋ ಸೇರಿ ಒಟ್ಟು 13 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಇತ್ತೀಚೆಗೆ ಕೆಂಗೇರಿ ಭೈರವ ನಗರ ನಿವಾಸಿ ಪವಿತ್ರಾ ಎಂಬುವರ ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳುವಾಗಿತ್ತು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಮನೆ ಎದುರು, ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದ ವಾಹನಗಳನ್ನು ರಾತ್ರಿ ವೇಳೆ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ. ಕದ್ದ ವಾಹನಗಳನ್ನು ಗ್ರಾಹಕರನ್ನು ಹುಡುಕಿ ಮಾರಾಟ ಮಾಡಿ ಬಂದ ಹಣದಿಂದ ಮೋಜಿನ ಜೀವನ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈತನ ಬಂಧನದಿಂದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 7 ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿವೆ. ಉಳಿದ 5 ದ್ವಿಚಕ್ರ ವಾಹನ ಹಾಗೂ 2 ಆಟೋ ರಿಕ್ಷಾ ಕಳವು ಸಂಬಂಧ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.