Advertisement

ವಾಯವ್ಯ ಸಾರಿಗೆಗೆ ವಾಹನ ತೆರಿಗೆ ವಿನಾಯಿತಿ ಮುಂದುವರಿಕೆ ಅಗತ್ಯ

04:27 PM May 22, 2017 | |

ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಗೆ ಬಿಜೆಪಿ ಸರಕಾರದ ಅವಧಿಯಲ್ಲಿ ವಾಹನ ತೆರಿಗೆ ವಿನಾಯಿತಿ ನೀಡಿತ್ತು. ಸದ್ಯ ಅದರ ಅವಧಿ ಮುಕ್ತಾಯದ ಹಂತಕ್ಕೆ ಬಂದಿದೆ, ಅದನ್ನು ಮುಂದುವರಿಸುವ ಮೂಲಕ ಸಂಸ್ಥೆಗೆ ಆಗುತ್ತಿರುವ ಹಾನಿಯಲ್ಲಿ ಅಲ್ಪ ಕಡಿಮೆ ಮಾಡಿಕೊಳ್ಳಬಹುದು ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಹೇಳಿದರು. 

Advertisement

ನೃಪತುಂಗ ಬೆಟ್ಟದಲ್ಲಿ ಸಿಬಿಟಿಯಿಂದ ನೃಪತುಂಗ ಬೆಟ್ಟ ನಗರ ಸಾರಿಗೆ ಸಂಸ್ಥೆ ಬಸ್‌ಗೆ ರವಿವಾರ ಚಾಲನೆ ನೀಡಿ ಮಾತನಾಡಿದರು. ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ವಿನಾಯಿತಿ ನೀಡಿದಂತೆ ಅಂದು ಬಿಜೆಪಿ ಸರಕಾರ ಇದ್ದಾಗ ವಾಯವ್ಯ ಸಾರಿಗೆ ಸಂಸ್ಥೆಗೂ ನೀಡಬೇಕೆಂಬ ನಿರ್ಧಾರದಿಂದ ಸಂಸ್ಥೆ ಆಗುತ್ತಿರುವ ಹಾನಿಯನ್ನು ತಪ್ಪಿಸಲಾಗಿತ್ತು. 

ಇದರಿಂದ ಸಂಸ್ಥೆಗೂ ಹಾಗೂ ಸಂಸ್ಥೆಯಲ್ಲಿಸೇವೆ ಸಲ್ಲಿಸುತ್ತಿರುವವರಿಗೂ ಹೆಚ್ಚಿನ ಅನುಕೂಲವಾಯಿತು. ಆದರೆ ಇದೀಗ ವಿನಾಯಿತಿ ಅವಧಿ ಮುಕ್ತಾಯ ಹಂತದಲ್ಲಿದ್ದು ಮುಖ್ಯಮಂತ್ರಿಗಳಿಗೆ ಒತ್ತಡ ಹಾಕುವ ಮೂಲಕ ಇದನ್ನು ಮುಂದುವರಿಸುವುದು ಅವಶ್ಯವಾಗಿದೆ.

ಈ ಕುರಿತು ಮುಖ್ಯಮಂತ್ರಿ ಜೊತೆ ತಾವು ಚರ್ಚಿಸುವುದಾಗಿ ಹೇಳಿದರು. ಇನ್ನು ಸಂಸ್ಥೆಯಿಂದ ಬಸ್‌ ಶೆಲ್ಟರ್‌ ಮಾಡುವ ಕುರಿತು ನಗರದಲ್ಲಿರುವ ಪಾಲಿಕೆ ಜಾಗವನ್ನು ಗುರುತಿಸಿದರೆ ಶೆಲ್ಟರ್‌ ನಿರ್ಮಾಣಕ್ಕೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ವಾಕರಸಾ ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ನೃಪತುಂಗ ಬೆಟ್ಟ ವಾಯುವಿಹಾರಿಗಳ ಸಂಘ ಹಾಗೂ ಹಲವು ಹಿರಿಯರ ಬಹುದಿನಗಳ ಬೇಡಿಕೆ ಈಡೇರಿದೆ. ಬೆಟ್ಟಕ್ಕೆ ಬಸ್‌ ಸಂಚಾರ ಆರಂಭಿಸಿ ಎಂಬ ಬೇಡಿಕೆಗೆ ಇಲಾಖೆ ಸ್ಪಂದಿಸಿದ್ದು, ಅದನ್ನು ಸರಿಯಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. 

Advertisement

ನಗರದ ಹಾಗೂ ಗ್ರಾಮೀಣ ಭಾಗದಲ್ಲಿ ಯಾವ ಪ್ರದೇಶಕ್ಕೆ ಸರಿಯಾದ ಬಸ್‌ ಸೌಲಭ್ಯ ಇಲ್ಲ ಎಂಬುದನ್ನು ಮಾಹಿತಿ ನೀಡಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಸಾರ್ವಜನಿಕರು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸುವ ಮೂಲಕ ಸಂಸ್ಥೆಯನ್ನು ಉಳಿಸಿ-ಬೆಳೆಸಬೇಕು ಎಂದು ಮನವಿ ಮಾಡಿಕೊಂಡರು.

ನಂತರ ಸಂಸ್ಥೆಯ ಕಲಾವಿದ ನೌಕರರಿಂದ ಸಾಂಸ್ಕೃತಿಕ ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ, ಎಂ.ಎಸ್‌. ಪಾಟೀಲ, ಸಿದ್ದು ಮೊಗಲಿಶೆಟ್ಟರ, ಮಂಜುನಾಥ, ವಿವೇಕಾನಂದ ವಿಶ್ವಜ್ಞ, ರಾಠೊಡ, ಅಂಗಡಿ, ನಾಯ್ಕ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next