Advertisement

ಫೆ.10ರಿಂದ ತಮಿಳುನಾಡಿನ ದಿಂಬಂ ಘಟ್ಟದಲ್ಲಿ ರಾತ್ರಿ ವಾಹನ ಸಂಚಾರ ರದ್ದು: ಹೈಕೋರ್ಟ್ ನಿರ್ದೇಶನ

07:39 PM Feb 08, 2022 | Team Udayavani |

ಚಾಮರಾಜನಗರ: ಕರ್ನಾಟಕ ಹಾಗೂ ತಮಿಳುನಾಡನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 948ರ ತಮಿಳುನಾಡಿನ ಸತ್ಯಮಂಗಲ ಹುಲಿ ರಕ್ಷಿತಾರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ರದ್ದು ಪಡಿಸಿರುವ ಆದೇಶವನ್ನು ಫೆ. 10 ರಿಂದಲೇ ಜಾರಿಗೆ ತರುವಂತೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.

Advertisement

ಈರೋಡ್ ಜಿಲ್ಲಾ ಕಲೆಕ್ಟರ್ ಈ ಸಂಬಂಧ 2019 ರಲ್ಲಿ ಮಾಡಿದ್ದ ಆದೇಶದ ಪರಿಣಾಮಕಾರಿ ಅನುಷ್ಠಾನ ಕೇಳಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣಾ ಸಮಯದಲ್ಲಿ ಹೈ ಕೋರ್ಟ್ ಈ ನಿರ್ದೇಶನ ನೀಡಿದೆ.

ಮೊದಲ ಬೆಂಚಿನ ಪ್ರಭಾರ ಮುಖ್ಯನ್ಯಾಯಾಧೀಶರಾದ ಜಸ್ಟಿಸ್ ಮುನೀಶ್ವರನಾಥ್ ಭಂಡಾರಿ ಮತ್ತು ಜಸ್ಟಿಸ್ ಭರತ್ ಚಕ್ರವರ್ತಿಯವರು ಮಂಗಳವಾರ ಕಲಾಪ ನಡೆಸಿದರು. ಈರೋಡು ಕಲೆಕ್ಟರ್ ಆದೇಶ ಜಾರಿಯಾಗದೇ ಸುಮಾರು 155 ಪ್ರಾಣಿಗಳು ಜೀವ ಕಳೆದುಕೊಂಡಿವೆ ಎಂದು ಅರ್ಜಿದಾರ ಎಸ್.ಪಿ. ಚೊಕ್ಕಲಿಂಗಮ್ ನ್ಯಾಯಾಲಯಕ್ಕೆ ತಿಳಿಸಿದರು.

ಈರೋಡ್ ಕಲೆಕ್ಟರ್ ಅವರು 2019ರ ಜನವರಿ 7 ರಂದು ಹೊರಡಿಸಿರುವ ರಾತ್ರಿ ಸಂಚಾರ ನಿಷೇಧ ಆದೇಶದ ನಿರ್ದೇಶನವನ್ನು ತಮಿಳುನಾಡಿನ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರಾದೇಶಿಕಾಧಿಕಾರಿ ಸೇರಿದಂತೆ ಪ್ರತಿವಾದಿಗಳು ಎಸಗಿರುವಲೋಪವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.

ರಾಷ್ಟ್ರೀಯ ಹೆದ್ದಾರಿ 948 (ಹಳೆಯ ಸಂಖ್ಯೆ 209) ರಲ್ಲಿ ತಮಿಳುನಾಡಿನ ಬಣ್ಣಾರಿ ಮತ್ತು ಕಾರಾಪಾಳ್ಯ ನಡುವೆ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ತನಕ ವಾಣಿಜ್ಯ ವಾಹನ ಸಂಚರಿಸುವುದನ್ನು ಮತ್ತು ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ನಾಲ್ಕು ಚಕ್ರದ ವಾಹನಗಳು,ಲಘು ವಾಣಿಜ್ಯವಾಹನಗಳು, ಮತ್ತು ಖಾಸಗಿ ವಾಹನ ಸಂಚಾರ ನಿರ್ಬಂಧಿಸಿ ಕಲೆಕ್ಟರ್ ಆದೇಶ ಹೊರಡಿಸಿದ್ದರು.

Advertisement

ಇದನ್ನೂ ಓದಿ : ಕತ್ತಲಾಗಲೀ, ಹಗಲಾಗಲೀ ಇಲ್ಲಿ ಬೀಳುವುದು ಸಹಜ ಆಗಿದೆ!

ಅರಣ್ಯ ಅಧಿಕಾರಿಗಳು ಈ ಆದೇಶ ಜಾರಿಮಾಡದೇ ಲೋಪ ಎಸಗಿರುವದರ ಪರಿಣಾಮ ಪರಿಸರ ಪ್ರೇಮಿ ಚೊಕ್ಕಲಿಂಗಮ್ ಎಂಬುವರು ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ. ಸಲ್ಲಿಸಿದ್ದರು. ಈ ಆದೇಶವನ್ನು ಅರಣ್ಯಾಧಿಕಾರಿಗಳು ಜಾರಿ ಮಾಡಿರಲಿಲ್ಲ.

ವಾಹನಗಳನ್ನು ನಿರ್ಬಂಧಿಸುವ 1988 ರ ಮೋಟಾರು ವಾಹನ ಕಾಯಿದೆಯ ಸೆಕ್ಷನ್ 115 ರ ಅನ್ವಯ ಅಧಿಕಾರ ಪಡೆದಿರುವ ಕಲೆಕ್ಟರ್ ಅವರ ಆದೇಶ ಅನುಷ್ಠಾನ ಏಕೆ ಮಾಡಲಿಲ್ಲ ಎಂದು ಮೊಕದ್ದಮೆಯ ಸಂದರ್ಭದಲ್ಲಿ ಒಂದು ಮತ್ತು ಎರಡನೇ ಪ್ರತಿವಾದಿಗಳಾದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ನ್ಯಾಯಾಲಯ ಪ್ರಶ್ನಿಸಿತು.

ಸರಕಾರಿ ವಕೀಲರು ,ಕಲೆಕ್ಟರ್ ಪರ ವಾದ ಮಂಡಿಸಿದರು. ಕಲೆಕ್ಟರ್ ನೀಡಿದ ಆದೇಶ ಪಾಲಿಸಿ ಫೆ. 10ರಿಂದಲೇ ರಾತ್ರಿ ಸಂಚಾರ ರದ್ದುಪಡಿಸುವಂತೆ ನ್ಯಾಯಾಲಯ ಆದೇಶಿಸಿತು.
ಯಾರಾದರೂ ಈ ಆದೇಶ ಉಲ್ಲಂಸಿದಲ್ಲಿ ಅವರನ್ನು ಗುರುತಿಸಿ ವರದಿ ಮಾಡಬೇಕೆಂದು ಇದರಿಂದ ಅಂತಹವರ ಮೇಲೆ ಕ್ರಮ ಜರುಗಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿತು.

ಈ ವರೆಗೆ ಈ ಆದೇಶವನ್ನು ಏಕೆ ಜಾರಿಗೆ ಕೊಡಲಿಲ್ಲ ಎಂಬುದಕ್ಕೆ ಮುಂದಿನ ವಿಚಾರಣೆಯ ದಿನವಾದ ಫೆ. 15ರಂದು ಉತ್ತರ ಸಲ್ಲಿಸಬೇಕೆಂದು ನಿರ್ದೇಶಿಸಿತು. ಈ ಆದೇಶದ ಅನುಷ್ಠಾನಕ್ಕೆ ಯಾವ ಅಧಿಕಾರಿಗಳನ್ನು ಗುರುತಿಸಲಾಗಿತ್ತು ಮತ್ತು ಲೋಪ ಎಸಗಿದವರು ಯಾರು ಎಂಬುದನ್ನು ನ್ಯಾಯಾಲತದ ಗಮನಕ್ಕೆ ತರಬೇಕೆಂದು ತಿಳಿಸಲಾಯಿತು.

ಇಲಾಖೆಯ ವರಿಷ್ಠಾಧಿಕಾರಿಗಳು ತಮ್ಮ ಕೈ ಕೆಳಗಿನ ಅಧಿಕಾರಿಗಳು ಈ ಆದೇಶ ಅನುಷ್ಠಾನಗೊಳಿಸುವುದನ್ನು ಖಾತರಿಪಡಿಸಿಕೊಳ್ಳಬೇಕಾಗಿತ್ತು.ಆದರೆ ಹಿರಿಯ ಅಧಿಕಾರಿಗಳು ಹಾಗೆ ಲೋಪ ಎಸಗಿದ್ದಾರೆ ಎಂದು ಹೇಳಿತು.

ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯಲೋಪದಿಂದ ಕಾನೂನುಗಳೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಾಲಯ ಆಕ್ಷೇಪಿಸಿತು.

ರಾಷ್ಟ್ರೀಯ ಹೆದ್ದಾರಿ 948 (ಹಳೆಯ ಸಂಖ್ಯೆ 209) ಬೆಂಗಳೂರು ಹಾಗೂ ತಮಿಳುನಾಡಿನ ದಿಂಡಿಗಲ್ ಅನ್ನು ಸಂಪರ್ಕಿಸುತ್ತದೆ. ಒಟ್ಟು 323 ದೂರವಿರುವ ಈ ಹೆದ್ದಾರಿ ಬೆಂಗಳೂರು, ಕನಕಪುರ, ಸಾತನೂರು, ಮಳವಳ್ಳಿ, ಕೊಳ್ಳೇಗಾಲ, ಚಾಮರಾಜನಗರ ಮೂಲಕ ತಮಿಳುನಾಡಿನ ಹಾಸನೂರು, ದಿಂಬಂ ಘಟ್ಟ, ಸತ್ಯಮಂಗಲ, ಕೊಯಮತ್ತೂರು, ದಿಂಡಿಗಲ್ ಅನ್ನು ಸೇರುತ್ತದೆ. ಕರ್ನಾಟಕ ಗಡಿ ಚಾಮರಾಜನಗರದಿಂದ 37 ಕಿ.ಮೀ. ದೂರದಲ್ಲಿ ಅರೆಪಾಳ್ಯ ಎಂಬಲ್ಲಿ ಅಂತ್ಯವಾಗುತ್ತದೆ. ಅಲ್ಲಿಂದ ಹಾಸನೂರು, ದಿಂಬಂ ಘಟ್ಟವಿದ್ದು, ಇದು ಸತ್ಯಮಂಗಲ ಹುಲಿ ರಕ್ಷಿತ ಅರಣ್ಯವಾಗಿದೆ. ಈ ಘಟ್ಟ 27 ತೀವ್ರ ತಿರುವುಗಳಿಂದ ಕೂಡಿದೆ. ಸಂಪೂರ್ಣ ಅರಣ್ಯ ಪ್ರದೇಶವಾಗಿದ್ದು, ಈ ರಸ್ತೆಯಲ್ಲಿ ರಾತ್ರಿವೇಳೆ ಅನೇಕ ವನ್ಯಜೀವಿಗಳು ಸಂಚರಿಸುತ್ತವೆ. ರಾತ್ರಿ ವೇಳೆ ವಾಹನ ಸಂಚಾರದಿಂದ ಆಗಾಗ ಪ್ರಾಣಿಗಳು ಮೃತಪಡುತ್ತಿರುತ್ತವೆ. ಇದನ್ನು ಗಮನಿಸಿ ಈರೋಡ್ ಕಲೆಕ್ಟರ್ ಅವರು 2019ರ ಜನವರಿ 7 ರಂದು ರಾತ್ರಿ ಸಂಚಾರ ರದ್ದು ಆದೇಶ ಹೊರಡಿಸಿದ್ದರು. ಈ ಆದೇಶ ಪಾಲನೆಯಾಗಿರಲಿಲ್ಲ. ಹಾಗಾಗಿ ಪರಿಸರ ಪ್ರೇಮಿ ಚೊಕ್ಕಲಿಂಗಮ್ ಎಂಬುವರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು.

ಈ ಘಟ್ಟದ ಮೂಲಕ ಕರ್ನಾಟಕ ಮತ್ತು ತಮಿಳುನಾಡಿನ ಕೊಯಮತ್ತೂರು, ಈರೋಡಿಗೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕ ಹಾಗೂ ಸರಕು ಸಾಗಾಣಿಕೆ ವಾಹನಗಳು ಸಂಚರಿಸುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next