Advertisement

ಹಂಪಿ ಆವರಣದಲ್ಲಿ ವಾಹನಕ್ಕೆ ನಿರ್ಬಂಧ

02:26 PM May 09, 2022 | Team Udayavani |

ಹೊಸಪೇಟೆ: ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಬಳಿ ತೆರಳುವ ವಾಹನಗಳಿಗೆ ಕಳೆದ ಎರಡು ದಿನಗಳಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕಡಿವಾಣ ಹಾಕಿದ್ದು ಇದಕ್ಕೆ ಸ್ಥಳೀಯರಿಂದ ತ್ರೀವ ವಿರೋಧ ವ್ಯಕ್ತವಾಗಿದೆ.

Advertisement

ಹೌದು! ವಿರೂಪಾಕ್ಷ ರಥ ಬೀದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಯಿಂದ ಉಂಟಾಗುವ ಕಿರಿಕಿರಿ, ಭದ್ರತೆ ದೃಷ್ಟಿಯಿಂದ ಇಲಾಖೆ ಕ್ರಮ ಕೈಗೊಂಡಿದೆ. ಇದರಿಂದ ಸ್ಥಳೀಯರು ಸೇರಿದಂತೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ.

ಈಗಾಗಲೇ ಹಂಪಿಯಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಗೆ ಕ್ರಮ ಕೈಗೊಳ್ಳದ ಪುರಾತತ್ವ ಇಲಾಖೆ, ಇದೀಗ ಏಕಾಏಕಿ ವಾಹನಗಳಿಗೆ ನಿರ್ಬಂಧ ಹೇರಿರುವುದು ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ. ಪ್ರವಾಸೋದ್ಯಮ ನೆಚ್ಚಿ ಬದುಕು ಕಟ್ಟಿಕೊಂಡ, ಸಣ್ಣ-ಪುಟ್ಟ ಹೋಟೆಲ್‌ ಇತರೆ ವ್ಯಾಪಾರಸ್ಥರು ತೊಂದರೆಗೀಡಾಗಲಿದ್ದಾರೆ.

ಜನತಾ ಪ್ಲಾಟ್‌ನಲ್ಲಿ ವಾಸಮಾಡುತ್ತಿರುವ ಸ್ಥಳೀಯರು ವಾಹನಗಳನ್ನು ಪಾರ್ಕಿಂಗ್‌ ಸ್ಥಳದಲ್ಲಿ ನಿಲಗಡೆ ಮಾಡಿ ತಮ್ಮ ಮನೆಗೆ ತೆರಳಬೇಕಿದೆ. ರಾತ್ರಿಯಲ್ಲಿ ವಾಹನಗಳು ಕಳ್ಳತನವಾಗುವ ಸಾಧ್ಯತೆ ಇದೆ. ಜನತಾ ಪ್ಲಾಟ್‌ ಜನರಿಗೆ ಆರೋಗ್ಯದಲ್ಲಿ ಏರುಪೇರಾದರೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದಾದರೂ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪುರಾತತ್ವ ಇಲಾಖೆ ಈ ಕ್ರಮದಿಂದ ಪ್ರವಾಸಿಗರಿಗೆ ಅಡಚಣೆಯಾಗುತ್ತಿದೆ. ಈಗಾಗಲೇ ಇರುವ ಹಂಪಿ ಗ್ರಾಮ ಪಂಚಾಯಿತಿ ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿ ಅಲ್ಲಿಂದ ಕಾಲ್ನಡಿಗೆಯಲ್ಲಿ ವಿರೂಪಾಕ್ಷ ದೇವಾಲಯ, ಎದುರು ಬಸವಣ್ಣ ಮಂಟಪದವರೆಗೆ ಪ್ರವಾಸಿಗರು ತೆರಳಬೇಕಿದೆ. ಅನೇಕ ವರ್ಷಗಳಿಂದ ಪಾರ್ಕಿಂಗ್‌ ಜಾಗದಲ್ಲಿ ವಾಹನಗಳನ್ನು ನಿಲುಗಡೆಗೆ ಅವಕಾಶ ಇದ್ದರೂ, ಗಣ್ಯಮಾನ್ಯರು, ಸರ್ಕಾರಿ ಹಾಗೂ ಕೆಲ ಟೂರಿಸ್ಟ್‌ ವಾಹನಗಳು ದೇವಾಲಯದವರೆಗೆ ತೆರಳುತ್ತಿದ್ದವು. ಇದಕ್ಕೆ ಕಡಿವಾಣ ಹಾಕಿರುವ ಪುರಾತತ್ವ ಇಲಾಖೆ, ವೃದ್ಧರು ಹಾಗೂ ಅಂಗವಿಕಲರು ಹೊರತುಪಡಿಸಿ ಉಳಿದೆಲ್ಲ ವಾಹನಗಳನ್ನು ಪ್ರವೇಶ ದ್ವಾರದ ಬಳಿ ತಡೆಯಲಾಗುತ್ತಿದೆ.

Advertisement

ಎಲ್ಲೆಲ್ಲಿಗೆ?

ಹಂಪಿ ಗ್ರಾಮ ಪಂಚಾಯಿತಿ ಎದುರಿನ ಪಾರ್ಕಿಂಗ್‌ ಪ್ರದೇಶದಿಂದ ವಿರೂಪಾಕ್ಷ ದೇವಾಲಯ ತುಂಗಭದ್ರಾ ನದಿಯ ಸ್ನಾನಘಟ್ಟ, ವೈದಿಕ ಮಂಟಪ, ಎದುರು ಬಸವಣ್ಣ ಮಂಟಪ, ಯಂತ್ರೋದ್ಧಾರಕ ಆಂಜನೇಯ, ಕೋದಂಡರಾಮ ಸ್ವಾಮಿ, ಚಕ್ರತೀರ್ಥ, ಸೀತೆ ಸೆರಗು, ವರಹ ದೇವಾಲಯ ಮುಂತಾದ ಸ್ಮಾರಕ ವೀಕ್ಷಣೆ ಮಾಡಬಹುದು. ವೃದ್ಧರು ಹಾಗೂ ವಿಕಲಚೇತನರಿಗೆ ವಿಶೇಷ ರಿಯಾಯಿತಿ ನೀಡಿರುವ ಇಲಾಖೆ ಅವರ ವಾಹನಗಳು ಮಾತ್ರ ದೇವಾಲಯದ ಬಳಿ ತೆರಳಲು ಅವಕಾಶ ನೀಡಿದೆ ಎಂದು ಹೇಳಲಾಗುತ್ತಿದೆ ಆದರೂ ಇದು ಪಾಲನೆಯಾಗುತ್ತಿಲ್ಲ ಎಂದು ದೂರಿದ್ದಾರೆ.

ಮಾತಿನ ಚಕಮಕಿ

ಪ್ರವೇಶ ದ್ವಾರದ ಮೂಲಕ ವಾಹನ ಪ್ರವೇಶ ಅವಕಾಶ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ಸ್ಥಳೀಯರು ಭದ್ರತೆ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆಯೂ ನಡೆಯಿತು. ಇದ್ಯಾವುದಕ್ಕೂ ಜಗ್ಗದ ಸಿಬ್ಬಂದಿ ಮೇಲಧಿಕಾರಿಗಳ ಆದೇಶ ಪಾಲನೆ ಮಾಡಲಾಗುತ್ತಿದೆ ಎಂದು ಹೇಳಿ ತಮ್ಮ ಕೆಲಸವನ್ನು ತಾವು ಮುಂದುವರೆಸಿದರು.

ಪುರಾತತ್ವ ಇಲಾಖೆ ಕೂಡಲೇ ಮೊದಲಿನಂತೆ ಎಲ್ಲರಿಗೂ ವಿರೂಪಾಕ್ಷ ರಥ ಬೀದಿಯಲ್ಲಿ ವಾಹನಗಳಿಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯರು, ಎಚ್ಚರಿಸಿದ್ದಾರೆ.

ವಿರೂಪಾಕ್ಷ ದೇವಾಲಯದ ರಥ ಬೀದಿಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದರು. ಇದರಿಂದ ಭದ್ರತೆ ಕೊರತೆ ಕಾಡುತ್ತಿತ್ತು. ವಾಹನಗಳ ನಿಲುಗಡೆಯಿಂದ ಪ್ರವಾಸಿಗರು ಕಿರಿಕಿರಿ ಅನುಭವಿಸುತ್ತಿದ್ದರು. ಹೀಗಾಗಿ ಈ ಪ್ರದೇಶದಲ್ಲಿ ವಾಹನ ಗಳ ಓಡಾಟ ಹಾಗೂ ನಿಲುಗಡೆಗೆ ನಿರ್ಬಂಧ ಹೇರಿದೆ. -ಕೆಂಪೇಗೌಡ, ಉಪ ಅಭಿಯಂತರರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹಂಪಿ ಕಿರುವಲಯ

ಪಿ. ಸತ್ಯನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next